ಅಸ್ಪೃಶ್ಯತೆ ನಿವಾರಣೆ ಅನುಮಾನ

7
ದಲಿತ ಲೇಖಕರ ಕೃತಿ ಬಿಡುಗಡೆಯಲ್ಲಿ ಚಿಂತಕ ಚಂದ್ರಶೇಖರ್ ತಾಳ್ಯ

ಅಸ್ಪೃಶ್ಯತೆ ನಿವಾರಣೆ ಅನುಮಾನ

Published:
Updated:
Prajavani

ಚಿತ್ರದುರ್ಗ: ಜಾತಿ ವ್ಯವಸ್ಥೆ ಇರುವಂಥ ನಮ್ಮ ದೇಶದಲ್ಲಿ ಅಸ್ಪೃಶ್ಯತೆ ಹಿಂದೆಯೂ ಇತ್ತು. ಮುಂದೆಯೂ ಇರುತ್ತದೆ. ಅದನ್ನು ಹೋಗಲಾಡಿಸಲು ಸಾಧ್ಯವಿಲ್ಲ ಎಂಬ ಅನುಮಾನ ಕಾಡುತ್ತಿದೆ ಎಂದು ಚಿಂತಕ ಚಂದ್ರಶೇಖರ್ ತಾಳ್ಯ ಹೇಳಿದರು.

ತರಾಸು ರಂಗಮಂದಿರದಲ್ಲಿ ಭಾನುವಾರ ದಲಿತ ಲೇಖಕರ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ದಲಿತರಿಗೆ ಒಂದು ಲೋಟ ನೀರು ಕೊಡುವುದಿಲ್ಲ, ಕ್ಷೌರಕ್ಕೂ ಅಲೆದಾಡುತ್ತಿದ್ದಾರೆ ಎಂದರೆ ಮನುಷ್ಯ-ಮನುಷ್ಯರ ನಡುವಿನ ವರ್ತನೆ ಬಗ್ಗೆ ಬೇಸರ ಉಂಟಾಗುತ್ತಿದೆ. ಮಾನವೀಯತೆ ಕುರಿತು ಒಲವು ಇರುವಂಥ ಯಾವ ವ್ಯಕ್ತಿಯೂ ಈ ರೀತಿ ನಡೆದುಕೊಳ್ಳಲಾರ. ಆದರೆ, ಕೆಲವರು ಅದನ್ನೇ ಮರೆತು ಸಮಾನತೆಯ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮನುಷ್ಯ ಜನಾಂಗವನ್ನು ಮೇಲೆತ್ತುವ ಸಲುವಾಗಿ ಇಡೀ ಮಾನವ ಕುಲಕ್ಕೆ ಅನ್ವಯಿಸುವಂತೆ ಉತ್ತಮ ಚಿಂತನೆ ಕೊಟ್ಟ ಮಹನೀಯರೆಂದರೆ ಡಾ. ಅಂಬೇಡ್ಕರ್, ಬಾಬು ಜಗಜೀವನರಾಂ. ಆದರೆ, ಅವರ ಆದರ್ಶಗಳನ್ನು ಪಾಲಿಸದೇ ಇರುವುದರಿಂದ ಈಗಲೂ ದಲಿತರು ಕಷ್ಟಗಳನ್ನು ಎದುರಿಸುವಂತಾಗಿದೆ’ ಎಂದು ವಿಷಾದಿಸಿದರು.

‘ಜಗಜೀವನರಾಂ, ಗಾಂಧೀಜಿ ಈ ದೇಶದ ಎರಡು ಕಣ್ಣುಗಳಾಗಿದ್ದು, ಇಬ್ಬರೂ ಶಾಂತಿದೂತರು. ಅದೇ ರೀತಿ ಶಿವನಿಗೆ ಇದ್ದಂತೆ ಮೂರನೇ ಕಣ್ಣೂ ಒಂದಿದೆ. ಅವರೇ ಡಾ. ಅಂಬೇಡ್ಕರ್. ಸವರ್ಣೀಯರ ಧೋರಣೆ ಎಂದಿಗೂ ಬದಲಾಗದು ಎಂದು ಸದಾ ಅವರ ನಡವಳಿಕೆ ವಿರುದ್ಧ ಸಿಟ್ಟಿನಿಂದಲೇ ಪ್ರತಿಕ್ರಿಯಿಸುತ್ತಿದ್ದರು. ಅವರ ಮಾತು ಇಂದಿಗೂ ನಿಜವಾಗಿದೆ’ ಎಂದರು.

‘ದಲಿತ ಸಂವೇದನೆಯನ್ನು ಮತ್ತು ಲೇಖಕರನ್ನು ಅರ್ಥ ಮಾಡಿಕೊಳ್ಳಬೇಕಾದ್ದು, ಯುವ ಜನರು ಹಾಗೂ ವಿದ್ಯಾರ್ಥಿ ಸಮೂಹ. ಆದರೆ, ಅವರೇ ಬಂದಿಲ್ಲ. ಇಂತಹ ಕಾರ್ಯಕ್ರಮ ಪದವಿ ಅಥವಾ ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಆಯೋಜಿಸುವುದೇ ಉತ್ತಮ’ ಎಂದು ಅಭಿಪ್ರಾಯಪಟ್ಟರು.

‘ನಮ್ಮ ದೇಶದಲ್ಲಿ ದಲಿತ ಲೇಖಕರಲ್ಲಿ ಇರುವಂಥ ಪ್ರಜ್ಞೆ ಮತ್ತು ಆಳ ಬಹುಶಃ ಯಾವ ಮೇಲ್ವರ್ಗದ ಲೇಖಕರಿಗೂ ಬರಲಿಕ್ಕೆ ಸಾಧ್ಯವಿಲ್ಲ. ಕಾರಣ ದಲಿತ ಲೇಖಕರ ಸಂವೇದನೆಯಲ್ಲಿ ದುಃಖ, ದುಮ್ಮಾನ, ಸಂಕಟಗಳಿರುತ್ತವೆ. ಅವುಗಳನ್ನು ಅನುಭವಿಸುತ್ತಲೇ ಬರವಣಿಗೆ ಮೂಲಕ ಸಮಾಜವನ್ನು ಉತ್ತಮ ಮಾರ್ಗದೆಡೆಗೆ ಕೊಂಡೊಯ್ಯಲು ಪ್ರಯತ್ನಿಸುತ್ತಾರೆ’ ಎಂದರು.

‘ದಲಿತ ಸಮುದಾಯದವರಷ್ಟು ಹೆಚ್ಚು ನೋವು, ಕಷ್ಟಗಳನ್ನು ಬೇರೆ ಯಾವ ಸಮುದಾಯ ಅನುಭವಿಸಲಿಕ್ಕೆ ಸಾಧ್ಯವಿಲ್ಲ ಎಂಬುದು ನನ್ನ ಭಾವನೆ. ಪ್ರಸ್ತುತ ದಿನಗಳಲ್ಲೂ ಅಂತಹ ನೋವು-ಸಂಕಟಗಳಿಗೆ ತುತ್ತಾಗುತ್ತಿರುವುದು ದಲಿತರು ಎಂಬುದೇ ವಿಷಾದದ ಸಂಗತಿ’ ಎಂದು ತಿಳಿಸಿದರು.

‘ದಲಿತ ಸಮುದಾಯದವರು ಹುಟ್ಟಿನಿಂದಲೇ ಕಲಾವಿದರು. ಅವರು ಯಾವ ವೃತ್ತಿಯನ್ನೇ ಮಾಡುತ್ತಿರಲಿ ಕಾಯಕ ಮರೆಯುವುದಿಲ್ಲ. ಇದಕ್ಕಾಗಿಯೇ ಸೃಜನಾತ್ಮಕ, ಪ್ರಜ್ಞಾತ್ಮಕ ಜೀವಿಗಳಾಗಿ ನಮಗೆ ಕಾಣುತ್ತಾರೆ’ ಎಂದರು.

ದಲಿತ ಲೇಖಕರು ಎಲ್ಲ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ದಾಖಲಿಸುವ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಜತೆಗೆ ಇನ್ನಷ್ಟೂ ಪರಿಣಾಮಕಾರಿಯಾಗಿ ಚಿಂತಿಸಿ ಬದಲಾವಣೆ ತರಬೇಕಾದ ಅಗತ್ಯವೂ ಇದೆ ಎಂದು ಅಭಿಪ್ರಾಯಪಟ್ಟರು.

ಜನಪದ ತಜ್ಞ ಮೀರಾಸಾಬಿಹಳ್ಳಿ ಶಿವಣ್ಣ, ಪ್ರಾಧ್ಯಾಪಕರು ಮತ್ತು ಚಿಂತಕರಾದ ಎನ್.ಎಸ್. ಮಹಂತೇಶ್, ರಂಗನಾಥ್, ಡಾ. ಗೋವಿಂದರಾವ್, ವಸಂತಕುಮಾರ್, ಹನುಮೇಶ್ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !