ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರ್ಣಗೌರಿ ಹಬ್ಬ: ಚಿತ್ರದುರ್ಗದಾದ್ಯಂತ ಸಂಭ್ರಮ

ಗೌರಿ–ಗಣೇಶ ರೂಪದಲ್ಲಿ ಬರಗೇರಮ್ಮ, ಏಕನಾಥೇಶ್ವರಿ ದೇವಿಗೆ ಬಳೆ ಅಲಂಕಾರ
Last Updated 9 ಸೆಪ್ಟೆಂಬರ್ 2021, 12:50 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಸ್ವರ್ಣಗೌರಿ’ ದೇವಿ ಹಬ್ಬವನ್ನು ಕೋವಿಡ್‌ ನಡುವೆಯೂ ಜಿಲ್ಲೆಯಾದ್ಯಂತ ಗುರುವಾರ ಸಡಗರ, ಸಂಭ್ರಮದ ಜತೆಗೆ ಶ್ರದ್ಧಾ–ಭಕ್ತಿಯಿಂದ ಮಹಿಳೆಯರು ಆಚರಿಸಿದರು. ಶಕ್ತಿದೇವತೆಗಳಾದ ಏಕನಾಥೇಶ್ವರಿ, ಬರಗೇರಮ್ಮ ದೇವಿಯ ಬಳೆ ಅಲಂಕಾರ ಭಕ್ತರನ್ನು ಆಕರ್ಷಿಸಿತು.

ನಗರದ ದೊಡ್ಡಗರಡಿ ಸಮೀಪದ ಗೌರಿ ಮನೆ, ನೀಲಕಂಠೇಶ್ವರ ದೇಗುಲ, ಹೊಳಲ್ಕೆರೆ ರಸ್ತೆಯ ಸಂಕಷ್ಟಹರ ಗಣಪತಿ ದೇಗುಲ ಸೇರಿ ಇತರೆ ದೇಗುಲಗಳಲ್ಲಿ ಸಾಮೂಹಿಕ ‘ಸ್ವರ್ಣಗೌರಿ’ ವ್ರತಾಚರಣೆ ಭಕ್ತಿ, ಭಾವದಿಂದ ನೆರವೇರಿತು. ಈ ಹಬ್ಬದಲ್ಲಿ ಹೆಣ್ಣುಮಕ್ಕಳಿಗೆ ಉಡಿ ತುಂಬಿ, ಬಾಗಿನ ಕೊಡುವುದು ವಾಡಿಕೆ. ಅದರಂತೆ ವಿವಿಧ ದೇಗುಲಗಳಲ್ಲಿ ಬಾಗಿನ ಕೊಡುವ ದೃಶ್ಯ ಸಾಮಾನ್ಯವಾಗಿತ್ತು.

ಇನ್ನೂ ಹಲವು ಮನೆಗಳಲ್ಲೂ ಸಂಭ್ರಮ ಮನೆಮಾಡಿತ್ತು. ಮುಂಜಾನೆಯಿಂದಲೇ ಮಹಿಳೆಯರು ಮನೆಯ ಅಂಗಳದಲ್ಲಿ ವಿವಿಧ ಬಗೆಯ ರಂಗೋಲಿ ಹಾಕಿದರು. ದೇವರ ಕೋಣೆ ಸ್ವಚ್ಛಗೊಳಿಸಿ, ಬಾಗಿಲುಗಳನ್ನು ತಳಿರು ತೋರಣಗಳಿಂದ ಸಿಂಗರಿಸಿದರು. ಮನೆಯೊಳಗೆ ಪುಷ್ಪಾಲಂಕಾರದ ಮಂಟಪದಲ್ಲಿ ‘ಸ್ವರ್ಣಗೌರಿ’ ದೇವಿಯನ್ನು ಪ್ರತಿಷ್ಠಾಪಿಸಿ ವ್ರತ ಆಚರಿಸಿದರು. ಬಗೆಬಗೆಯ ಹೂ, ಹಣ್ಣು, ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.

ಹಿಂದೂ ಸಂಸ್ಕೃತಿ, ಸಂಪ್ರದಾಯದ ವಾಡಿಕೆಯಂತೆಯೇ ಮಹಿಳೆಯರಿಗೆ ಅರಿಶಿಣ, ಕುಂಕುಮ, ಎಲೆ, ಅಡಿಕೆ, ಹಣ್ಣು ನೀಡಿ ಉಡಿ ತುಂಬಿದರು. ಬಾಗಿನ ನೀಡುವ ವೇಳೆ ಪರಸ್ಪರ ಮರದ ಜೊತೆಗಳನ್ನು ವಿನಿಮಯ ಮಾಡಿಕೊಳ್ಳುವ ಪ್ರಕ್ರಿಯೆಗಳು ಹಲವೆಡೆ ನಡೆದವು. ಮೊದಲಿನಂತೆ ಕೋವಿಡ್‌ ಭೀತಿ ಯಾರಲ್ಲೂ ಕಾಣಲಿಲ್ಲ. ಕೆಲವರು ಮಾತ್ರ ಮಾಸ್ಕ್‌ ಧರಿಸಿದ್ದರು.

ಕಂಗೊಳಿಸಿದ ಬರಗೇರಮ್ಮ: ನಗರದೇವತೆ ‘ಬರಗೇರಮ್ಮ’ ದೇವಿಗೆ ‘ಸ್ವರ್ಣಗೌರಿ ಹಾಗೂ ಗಣೇಶ ಚತುರ್ಥಿ’ ಹಬ್ಬದ ಅಂಗವಾಗಿ ಸತತ ಏಳು ವರ್ಷಗಳಿಂದ ವಿಶೇಷವಾಗಿ ಬಳೆ ಅಲಂಕಾರ ನೆರವೇರಿಸಲಾಗುತ್ತಿದೆ. ಈ ಬಾರಿ ಗೌರಿ–ಗಣೇಶ ಪ್ರತಿರೂಪದ ಮಾದರಿಯಲ್ಲಿ ಲಕ್ಷಕ್ಕೂ ಅಧಿಕ ಬಳೆಗಳಿಂದ ಅರ್ಚಕರು ಅಲಂಕರಿಸಿದ್ದರು. ದೇವತೆಯನ್ನು ಸಿಂಗರಿಸಲು ಅತಿ ಹೆಚ್ಚಾಗಿ ಕುಂದನ್ ಬಳೆಗಳನ್ನು ಬಳಸಿದ್ದರು. ಫ್ಯಾನ್ಸಿ ಬಳೆಗಳು, ಹಸಿರು, ಕೆಂಪು, ಹಳದಿ, ನೀಲಿ, ಕೇಸರಿ, ನೇರಳೆ ಸೇರಿ ವಿವಿಧ ವರ್ಣಗಳ ಬಳೆಗಳಿಂದ ದೇಗುಲದ ಕೆಲ ಭಾಗವನ್ನೂ ಅಲಂಕರಿಸಿದ್ದರು.

‘ಈ ಬಾರಿಯೂ ವಿಶೇಷವಾಗಿ ಅಲಂಕರಿಸಬೇಕು ಎಂದು ನಿರ್ಧರಿಸಿ ಹಬ್ಬಕ್ಕೂ ಎರಡು ವಾರ ಮುಂಚಿತವಾಗಿ ಬಳೆಗಳನ್ನು ತಂದು ಕೊಡುವಂತೆ ಭಕ್ತರಿಗೆ ಹೇಳಿದ್ದೆವು. ಅದರಂತೆ ಭಕ್ತರು ತಮ್ಮ ಶಕ್ತ್ಯಾನುಸಾರ ಬಳೆಗಳನ್ನು ತಂದು ಕೊಟ್ಟಿದ್ದಾರೆ’ ಎಂದು ದೇಗುಲದ ಪ್ರಧಾನ ಅರ್ಚಕ ಪೂಜಾರ್ ಕಸ್ತೂರಪ್ಪ ಹೇಳಿದರು.

ಮಂಗಳವಾರ ರಾತ್ರಿಯಿಂದ ಅಲಂಕಾರದ ಸಿದ್ಧತೆ ಆರಂಭವಾಗಿ ಗುರುವಾರ ಮುಂಜಾನೆ ಪೂರ್ಣಗೊಂಡಿತು. ದುರ್ಗದ ನವದುರ್ಗೆಯರಲ್ಲಿ ಪ್ರಮುಖ ಶಕ್ತಿದೇವತೆಯಾದ ಬರಗೇರಮ್ಮ ದೇವಿಯ ಸ್ವರ್ಣಗೌರಿ ಹಬ್ಬದ ಅಲಂಕಾರ ನೋಡಲು ಅನೇಕ ಭಕ್ತರು ದೇಗುಲಕ್ಕೆ ಬಂದಿದ್ದರು. ಬೆಳಿಗ್ಗೆಯಿಂದ ರಾತ್ರಿ 9ರವರೆಗೂ ನೂರಾರು ಭಕ್ತರು ದರ್ಶನ ಪಡೆದರು. ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು.

ಸೆ. 11ರವರೆಗೂ ಭಕ್ತರಿಗೆ ಬರಗೇರಮ್ಮ ದೇವತೆಯ ಬಳೆ ಅಲಂಕಾರ ನೋಡಲು ದೇಗುಲದಲ್ಲಿ ಅವಕಾಶ ಕಲ್ಪಿಸಲಾಗಿದೆ. 14ರ ನಂತರ ಮಹಿಳಾ ಭಕ್ತರಿಗೆ ಬಳೆಗಳನ್ನು ವಿತರಿಸಲಾಗುವುದು ಎಂದು ಅರ್ಚಕರು ಮಾಹಿತಿ ನೀಡಿದ್ದಾರೆ.

ಏಕನಾಥೇಶ್ವರಿ ದೇಗುಲದಲ್ಲೂ ವಿಶೇಷ: ದುರ್ಗದ ಅಧಿದೇವತೆ ಏಕನಾಥೇಶ್ವರಿ ದೇವಿಗೂ ಸಾವಿರಾರು ಬಳೆಗಳಿಂದ ಇದೇ ಪ್ರಥಮ ಬಾರಿ ಅರ್ಚಕರು ಬಳೆ, ಪುಷ್ಪಾಲಂಕಾರದ ಜತೆಗೆ ವಿಶೇಷ ಪೂಜೆ ನೆರವೇರಿಸಿದ್ದರು. ಉಚ್ಚಂಗಿ ಯಲ್ಲಮ್ಮ, ಕಣಿವೆ ಮಾರಮ್ಮ, ಕೊಲ್ಲಾಪುರದ ಲಕ್ಷ್ಮಿದೇವಿ, ನೀಲಕಂಠೇಶ್ವರ ದೇಗುಲದಲ್ಲಿನ ಪಾರ್ವತಿ ದೇವಿ ಸೇರಿ ವಿವಿಧ ದೇಗುಲಗಳಲ್ಲಿ ಕೂಡ ವಿಶೇಷ ಪೂಜೆ ಜರುಗಿತು.‌‌

ನಾಗರಕಲ್ಲಿಗೆ ಹಾಲೆರೆದ ಭಕ್ತರು: ಸ್ವರ್ಣಗೌರಿ, ಗಣೇಶ ಹಬ್ಬದಂದೂ ನಗರದ ವಿವಿಧೆಡೆ ಇರುವಂಥ ನಾಗರಕಟ್ಟೆಗಳಿಗೆ ತೆರಳಿ ನಾಗದೇವತೆಗಳ ಕಲ್ಲಿನ ಮೂರ್ತಿಗಳಿಗೆ ಹಾಲೆರೆಯುವ ಪ್ರಕ್ರಿಯೆ ನಡೆಯಿತು. ನಗರದ ಬರಗೇರಮ್ಮ ದೇಗುಲ, ಬುರುಜನಹಟ್ಟಿ, ನೆಹರೂ ನಗರ, ಜೆಸಿಆರ್ ಬಡಾವಣೆ, ಜೋಗಿಮಟ್ಟಿ ರಸ್ತೆ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇಗುಲ ಸೇರಿ ವಿವಿಧೆಡೆ ನಾಗರ ಕಲ್ಲಿಗೆ ಅನೇಕರು ಹಾಲೆರೆದು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT