ಸೋಮವಾರ, ನವೆಂಬರ್ 30, 2020
20 °C
ಹೊಸದುರ್ಗ ತಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ

ಅರಣ್ಯ ಇಲಾಖೆ ಸೌಲಭ್ಯ ಉಳ್ಳವರ ಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳು ಉಳ್ಳವರ ಪಾಲಾಗುತ್ತಿವೆ. ಇದರಿಂದಾಗಿ ಗ್ರಾಮೀಣ ಭಾಗದ ಕಟ್ಟಕಡೆಯ ರೈತರಿಗೆ ಸೌಲಭ್ಯ ತಲುಪುತ್ತಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಆರೋಪಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸಮಿತ್ರಾ ಮಂಜಪ್ಪ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ 16ನೇ ಸಾಮಾನ್ಯ ಸಭೆಯಲ್ಲಿ ಅರಣ್ಯ ಇಲಾಖೆ ಪ್ರಗತಿಯ ಕುರಿತು ಚರ್ಚಿಸುತ್ತಿರುವಾಗ ಅಧಿಕಾರಿ ವಿರುದ್ಧ ಸದಸ್ಯರು ಹರಿಹಾಯ್ದರು.

‘ಅರಣ್ಯ ಇಲಾಖೆಯಲ್ಲಿ ಏನೇನು ಸೌಲಭ್ಯ ಯಾವಾಗ್ಯಾವಾಗ ಸಿಗುತ್ತದೆ. ಯಾವ್ಯಾವ ಸಸಿ ಬೆಳೆಸಲು ಎಷ್ಟೆಷ್ಟು ಸಹಾಯಧನ ಎಷ್ಟು ವರ್ಷ ಸಿಗುತ್ತದೆ ಎಂಬ ಬಗ್ಗೆ ರೈತರಿಗೆ ಮಾಹಿತಿ ನೀಡಿಲ್ಲ. ಕಚೇರಿಗೆ ಬಂದು ಹೋಗುವ, ಅಧಿಕಾರಿಗಳ ಜತೆಗೆ ಸಂಪರ್ಕದಲ್ಲಿ ಇರುವವರಿಗೆ ಮಾತ್ರ ಸೌಲಭ್ಯ ಸಿಗುತ್ತಿದೆ. ಹಲವು ರೈತರಿಗೆ ಶ್ರೀಗಂಧ, ಸಾಗುವಾನಿ, ರಕ್ತಚಂದನ ಸೇರಿ ಇನ್ನಿತರ ಸಸಿಗಳನ್ನು ವಿತರಿಸಲಾಗಿದೆ ಎಂದು ಅಧಿಕಾರಿ ಸಭೆಯಲ್ಲಿ ಮಾಹಿತಿ ನೀಡುತ್ತಾರೆ. ಆದರೆ, ಯಾವುದೇ ರೈತರ ಜಮೀನಿನಲ್ಲಿ ಶ್ರೀಗಂಧದ ಸಸಿ ಬೆಳೆಸಿರುವುದು ಕಾಣಿಸುತ್ತಿಲ್ಲ’ ಎಂದು ಸದಸ್ಯ ನಿರಂಜನಮೂರ್ತಿ ದೂರಿದರು.

‘ಕೋವಿಡ್‌–19ರ ಈ ಸಂದರ್ಭದಲ್ಲಿ ಮಕ್ಕಳ, ಬಾಣಂತಿ ಹಾಗೂ ಗರ್ಭಿಣಿಯರ ಮನೆ ಬಾಗಿಲಿಗೆ ಕೋಳಿಮೊಟ್ಟೆ, ಹೆಸರುಕಾಳು ಸೇರಿ ಇನ್ನಿತರ ಪೌಷ್ಟಿಕಾಂಶಯುಕ್ತ ಆಹಾರ ಸಾಮಗ್ರಿ ವಿತರಿಸಬೇಕು. ಆದರೆ, ಕೆಲವು ಅಂಗನವಾಡಿ ಕಾರ್ಯಕರ್ತೆಯರು ನಿಯಮಿತವಾಗಿ ಕೋಳಿಮೊಟ್ಟೆಯನ್ನು ಕೊಡುತ್ತಿಲ್ಲ. ಏಕೆ ಕೊಡುತ್ತಿಲ್ಲ ಎಂದು ನಾಗರಿಕರು ಪ್ರಶ್ನಿಸಿದರೆ?, ದರ ಏರಿಕೆಯಾಗಿದೆ ಕೋಳಿಮೊಟ್ಟೆ ಬದಲಿಗೆ ಹೆಸರುಕಾಳು ಕೊಡುತ್ತಿದ್ದೇವೆ ಎಂಬ ಉತ್ತರ ಹೇಳಿ ಬಾಯಿಮುಚ್ಚಿಸುತ್ತಿದ್ದಾರೆ’ ಎಂದು ಸದಸ್ಯೆ ಪ್ರೇಮಾ ರವೀಂದ್ರ ದೂರಿದರು.

ವಿವಿಧ ಇಲಾಖೆ ಪ್ರಗತಿ ಪರಿಶೀಲಿಸಲಾಯಿತು. ಬಹುತೇಕ ಇಲಾಖೆ ಅಧಿಕಾರಿಗಳು ಗೈರಾಗಿದ್ದು, ತಮ್ಮ ಅಧೀನ ನೌಕರರನ್ನು ಸಭೆಗೆ ಕಳುಹಿಸಿದ್ದರು. ಸುಮಾರು ಎರಡೂವರೆ ತಾಸು ನಡೆದ ಈ ಸಭೆಯಲ್ಲಿಯೂ ಅಧ್ಯಕ್ಷೆ ಸುಮಿತ್ರಾ ಮಂಜಪ್ಪ ಯಾವುದೇ ಇಲಾಖೆ ಪ್ರಗತಿ ಪರಿಶೀಲನೆಯ ಚರ್ಚೆಯಲ್ಲಿ ಭಾಗವಹಿಸದೇ ಮೌನ ವಹಿಸಿದ್ದರು.

ಸದಸ್ಯರಾದ ಹೇಮಾ ಮಂಜು ನಾಥ್‌, ಶಾಂತಲಾ ಗಿರೀಶ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.