ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಂಕ್‌ ಶಿಥಿಲ: ನೀರಿಗೆ ಹಾಹಾಕಾರ

ಕಳಪೆ ಕಾಮಗಾರಿಯಿಂದ ಬಿರುಕು ಬಿಟ್ಟ ಟ್ಯಾಂಕ್‌: ಗ್ರಾಮಸ್ಥರ ಆರೋಪ
Last Updated 14 ಫೆಬ್ರುವರಿ 2022, 5:09 IST
ಅಕ್ಷರ ಗಾತ್ರ

ನವಿಲುಕಲ್ಲು ಭೋವಿಹಟ್ಟಿ (ಹೊಸದುರ್ಗ): ಹೊಸದುರ್ಗ ತಾಲ್ಲೂಕಿನ ನವಿಲುಕಲ್ಲು ಭೋವಿಹಟ್ಟಿಯಲ್ಲಿನ ದೊಡ್ಡ ಟ್ಯಾಂಕ್‌ ನಿರ್ಮಿಸಲಾಗಿದ್ದು, ಅದು ಹೆಸರಿಗೆ ಮಾತ್ರ ಟ್ಯಾಂಕ್‌. ಆದರೆ ಇದುವರೆಗೂ ಒಂದು ಹನಿ ನೀರು ಬಂದಿಲ್ಲ. ಇದರಿಂದ ಈ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ.

ಕಳಪೆ ಕಾಮಗಾರಿಯಿಂದ ಬಿರುಕು ಬಿಡುತ್ತಿದೆ ಎಂಬುದು ಗ್ರಾಮಸ್ಥರ ಆರೋಪ.

ಮಾಡದಕೆರೆ ಹೋಬಳಿಯ ನವಿಲುಕಲ್ಲು ಭೋವಿಹಟ್ಟಿ ಗ್ರಾಮದಲ್ಲಿ 100ರಿಂದ150 ಮನೆಗಳಿವೆ. ನಿತ್ಯ ಕುಡಿಯುವ ನೀರು ಹಾಗೂ ದಿನಬಳಕೆ ನೀರಿಗಾಗಿ ಇಲ್ಲಿನ ಜನರು ಪರದಾಡುವ ಸ್ಥಿತಿ ಇದೆ. ಬೇಸಿಗೆ ಬಂತೆಂದರೆ ಜನ ಪರಿತಪಿಸುವಂತಾಗುತ್ತದೆ.

2011-12ನೇ ಸಾಲಿನಲ್ಲಿ ₹ 10 ಲಕ್ಷ ವೆಚ್ಚದಲ್ಲಿ ಇಲ್ಲಿ ದೊಡ್ಡ ನೀರಿನ ಟ್ಯಾಂಕ್‌ ನಿರ್ಮಿಸಲಾಗಿದೆ. ಆದರೆ ನಿರ್ವಹಣೆ ಇಲ್ಲ. ಪೈಪ್‌ಲೈನ್ ಆಗಿದೆ. ಸಂಪರ್ಕ ಇಲ್ಲ. ಟ್ಯಾಂಕ್‌ ಶಿಥಿಲಗೊಂಡಿದ್ದು, ನಿತ್ಯ ನೀರು ಪೋಲಾಗುತ್ತಿದೆ. ಈ ಕುರಿತು ಪಂಚಾಯಿತಿಗೆ ದೂರು ನೀಡಿದರೂಪ್ರಯೋಜನವಾಗಿಲ್ಲ ಎಂದು ದೂರುತ್ತಾರೆ ಗ್ರಾಮಸ್ಥ ಧನಂಜಯ.

‘ಟ್ಯಾಂಕ್‌ ದುರಸ್ತಿ ಬಗ್ಗೆ ಜನಪ್ರತಿನಿಧಿಗಳನ್ನು ಕೇಳಿದರೆ, ‘ಸರಿ ಮಾಡಿಸೋಣ’ ಎನ್ನುತ್ತಾರೆ. ತಾಲ್ಲೂಕಿನ ಗಡಿಭಾಗದ ಕೊನೆಯ ಗ್ರಾಮ ಇದು. ಜನಪ್ರತಿನಿಧಿಗಳು 5 ವರ್ಷಕ್ಕೊಮ್ಮೆ ಬಂದು ಭರವಸೆ ನೀಡುವುದು ಬಿಟ್ಟರೆ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯವಾಗಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ದೀಪಿಕಾ ರಮೇಶ್ ಆರೋಪಿಸಿದರು.

‘ಮಳೆಗಾಲದಲ್ಲಿ ನೀರಿಗೆ ಯಾವುದೇ ತೊಂದರೆಯಿಲ್ಲ. ಆದರೆ ಬೇಸಿಗೆ ಆರಂಭವಾದೊಡನೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತದೆ. ವಾರಕ್ಕೊಮ್ಮೆ ಇಲ್ಲಿನ ಜನ ಹೊಟ್ಟೆನೋವು, ಕಿಡ್ನಿ ಕಲ್ಲು, ಹೊಟ್ಟೆಉರಿಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮನೆ ಮನೆಗೂ ನಲ್ಲಿ ಮಾಡಿಸಿದ್ದಾರೆ. ಆದರೆ ಅವು ಕಳಪೆ ಕಾಮಗಾರಿಯಿಂದ ಎರಡು ವರ್ಷಕ್ಕೇ ಹಾಳಾಗಿವೆ. ಕೊಳವೆಬಾವಿ ಇದ್ದರೂ ಪ್ರಯೋಜನವಿಲ್ಲ’ ಎಂದು ದೂರುತ್ತಾರೆ ಧನಂಜಯ.

ಟ್ಯಾಂಕ್‌ ದುರಸ್ತಿ ಬಗ್ಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಸಾಕಾಗಿದೆ. ಇನ್ನಾದರೂ ಕ್ರಮ ಕೈಗೊಂಡು ನೀರಿನ ಸೌಲಭ್ಯ ಕಲ್ಪಿಸಬೇಕು.

-ದೀಪಿಕಾ ರಮೇಶ್, ಗ್ರಾ.ಪಂ. ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT