ಶುಕ್ರವಾರ, ಜನವರಿ 28, 2022
25 °C
ಲಾರಿಯ ಹಿಂಬದಿಗೆ ಟ್ಯಾಂಕರ್ ಡಿಕ್ಕಿಹೊಡೆದು ನಾಲ್ವರು ಸ್ಥಳದಲ್ಲೇ ಸಾವು

ಕೈ ತೋರಿಸುತ್ತಿದ್ದವರ ಮೇಲೆ ಹರಿದ ಟ್ಯಾಂಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಸಮೀಪದ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಶನಿವಾರ ಬೆಳಗಿನಜಾವ ಸಂಚರಿಸುತ್ತಿದ್ದ ವಾಹನಗಳಿಗೆ ಹೆದ್ದಾರಿಯಲ್ಲಿ ನಿಂತು ಕೈ ಸನ್ನೆ ಮೂಲಕ ದಾರಿ ತೋರಿಸುತ್ತಿದ್ದ ಇಬ್ಬರು, ಪಂಕ್ಚರ್ ಹಾಕುತ್ತಿದ್ದ ಮತ್ತಿಬ್ಬರಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅರವಂಚಿ ಗ್ರಾಮದ ರೈತ ಶರಣಪ್ಪ (42), ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಬೆನಕನಾಳ್‌ ಗ್ರಾಮದ ಲಾರಿ ಚಾಲಕ ಮಂಜುನಾಥ, ಕ್ಲಿನರ್‌ಗಳಾದ ಧಾರವಾಡ ಜಿಲ್ಲೆಯ ಛಬ್ಬಿ ಗ್ರಾಮದ ಸಂಜಯ್ (20), ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಬೈಲಗುಡ್ಡ ಗ್ರಾಮದ ಹುಲುಗಪ್ಪ (22) ಮೃತಪಟ್ಟವರು.

ರೈತ ಶರಣಪ್ಪ ಸೇರಿ ನಾಲ್ವರು ಈರುಳ್ಳಿ ಬೆಳೆದಿದ್ದರು. ಬೆಂಗಳೂರಿನ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವ ಕಾರಣಕ್ಕೆ ಅಲ್ಲಿಗೆ ಕೊಂಡೊಯ್ಯಲು ತೀರ್ಮಾನಿಸಿದ್ದರು. ಅದಕ್ಕಾಗಿ ಶರಣಪ್ಪ ಲಾರಿಯೊಂದನ್ನು ಕಾಯ್ದಿರಿಸಿ 250ಕ್ಕೂ ಹೆಚ್ಚು ಚೀಲವನ್ನು ಲಾರಿಯೊಳಗೆ ಲೋಡ್ ಮಾಡಿದ್ದರು.

ಘಟನೆ ಹಿನ್ನಲೆ: ರೋಣದಿಂದ ಹೊರಟ ಕ್ಯಾಂಟರ್ ಲಾರಿ ದೊಡ್ಡಸಿದ್ದವ್ವನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ 1ರ ಸುಮಾರಿಗೆ ಪಂಕ್ಚರ್ ಆಗಿದೆ. ಚಾಲಕ ಮಂಜುನಾಥ್ ಮುಂದೆ ಸಂಚರಿಸುತ್ತಿದ್ದ ಮತ್ತೊಂದು ಲಾರಿಯ ಚಾಲಕ, ಸ್ನೇಹಿತ ಬಸವರಾಜ್ ಅವರಿಗೆ ಕರೆ ಮಾಡಿದ್ದಾರೆ. ಕೂಡಲೇ ಆ ವಾಹನವೂ ಹಿಂದಿರುಗಿ ಬಂದಿದೆ.

ಒಟ್ಟು ಆರು ಮಂದಿ ಬೆಂಗಳೂರಿಗೆ ಹೊರಟಿದ್ದರು. ಕಪ್ಪು ಬಣ್ಣದ ತಾಡಪಾಲನ್ನು ಲಾರಿಯ ಹಿಂಬದಿಯಲ್ಲಿ ಹಾಕಿದ್ದರಿಂದಾಗಿ, ಮಳೆ ಸುರಿಯುತ್ತಿದ್ದರಿಂದಾಗಿ ಗ್ಯಾಸ್‌ ತುಂಬಿದ್ದ ಟ್ಯಾಂಕರ್‌ನ ಚಾಲಕನಿಗೆ ಲಾರಿ ನಿಂತಿರುವುದು ಕತ್ತಲಿನಲ್ಲಿ ಕಾಣಿಸಿಲ್ಲ. ವೇಗವಾಗಿ ಬಂದಿದ್ದರಿಂದಾಗಿ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ. ನಾಲ್ವರು ಮೃತಪಟ್ಟಿದ್ದು, ಅದೃಷ್ಟವಶಾತ್ ಲಾರಿಯಲ್ಲಿದ್ದ ಇನ್ನಿಬ್ಬರು ರೈತರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಾವಿನ ದವಡೆಯಿಂದ ಪಾರಾಗಿದ್ದಾರೆ.

ಜಾಕ್‌ ಸೇರಿ ಇತರ ಸಾಮಗ್ರಿಗಳೊಂದಿಗೆ ಚಾಲಕ ಮಂಜುನಾಥ್ ಮತ್ತು ಕ್ಲಿನರ್‌ ಸಂಜಯ್ ಟೈರ್ ಬದಲಿಸಲು ಮುಂದಾಗಿದ್ದಾರೆ. ಮಳೆ ಸುರಿಯುತ್ತಿದ್ದ ಕಾರಣ ಶರಣಪ್ಪ ಮತ್ತು ಹುಲುಗಪ್ಪ ಕೈ ಸನ್ನೆ ಮೂಲಕ ಇತರ ವಾಹನಗಳಿಗೆ ದಾರಿ ತೋರಿಸುತ್ತಿದ್ದರು. ಮೊದಲು ಈ ಇಬ್ಬರಿಗೆ ಡಿಕ್ಕಿಹೊಡೆದು ನಂತರ ಟೈರ್ ಬದಲಿಸುತ್ತಿದ್ದವರ ಮೇಲೆ ಟ್ಯಾಂಕರ್ ಹರಿದಿದೆ. ಡಿಕ್ಕಿಹೊಡೆದ ರಭಸಕ್ಕೆ ಲಾರಿಯೊಳಗಿದ್ದ ಈರುಳ್ಳಿ ಚೀಲಗಳು ನೆಲಕ್ಕುರುಳಿ ಚೆಲ್ಲಾಪಿಲ್ಲಿಯಾಗಿವೆ.

ಈ ಮಾರ್ಗದಲ್ಲಿ ಸಂಚರಿಸುತ್ತಿದ್ದವರಿಗೆ ಭೀಕರ ಅಪಘಾತವು ಮನಕಲುಕುವಂತೆ ಮಾಡಿದೆ. ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಬಾಲಚಂದ್ರ ನಾಯಕ್ ಸೇರಿ ಇತರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.