ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಧಿಕಾರಿ ನೇಮಕದ ನಿರ್ಧಾರ ಅಚಲ: ಸಾಣೇಹಳ್ಳಿ ಶ್ರೀ

Last Updated 8 ನವೆಂಬರ್ 2019, 15:58 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠಕ್ಕೆ ಉತ್ತರಾಧಿಕಾರಿ ನೇಮಕದ ನಿರ್ಧಾರ ಕೈಬಿಡುವಂತೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಲ್ಲಿ ಕೆಲವು ಭಕ್ತರು ಶುಕ್ರವಾರ ಮನವಿ ಮಾಡಿದರು.

ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಉತ್ತರಾಧಿಕಾರಿ ನೇಮಕಕ್ಕೆ ಮನವಿ ಮಾಡಿದ್ದರಿಂದ ಆತಂಕಗೊಂಡ ಕೆಲವು ಭಕ್ತರು ಮಠಕ್ಕೆ ಭೇಟಿ ನೀಡಿ, ‘ಉತ್ತರಾಧಿಕಾರಿ ನೇಮಕದ ನಿಲುವು ಪುನರ್‌ ಪರಿಶೀಲಿಸಿ. ನಿಮ್ಮ ಆರೋಗ್ಯ ಉತ್ತಮವಾಗಿದೆ. ಶ್ರೀಮಠದ ಚಟುವಟಿಕೆ ನಿರ್ವಹಿಸುವ ಸಾಮರ್ಥ್ಯ ನಿಮಗಿದೆ. ಈಗಲೇ ಇಂತಹ ನಿರ್ಧಾರ ಕೈಗೊಳ್ಳಬೇಡಿ’ ಎಂದು ಹಲವರು ಮನವಿ ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪಂಡಿತಾರಾಧ್ಯ ಶ್ರೀ, ‘ಉತ್ತರಾಧಿಕಾರಿ ನೇಮಕದ ನಿರ್ಧಾರ ಅಚಲ. ಇದು ವಯೋಸಹಜ ತೀರ್ಮಾನ. ನಮಗೆ ವಯಸ್ಸಾಗಿದ್ದು, ಜೀವಕ್ಕೆ ಏನಾದರೂ ತೊಂದರೆಯಾದರೆ ಶ್ರೀಮಠಕ್ಕೆ ಅನಾಥ ಪ್ರಜ್ಞೆ ಕಾಡಬಾರದು. ಹಾಗಾಗಿ, ಯೋಗ್ಯ ಉತ್ತರಾಧಿಕಾರಿ ನೇಮಕ ಮಾಡಿ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.

‘ಉತ್ತರಾಧಿಕಾರಿ ನೇಮಕವಾದ ತಕ್ಷಣ ಶ್ರೀಮಠದಿಂದ ದೂರ ಸರಿಯುವುದಿಲ್ಲ. ಇಲ್ಲಿಯೇ ಇದ್ದು ನಮ್ಮ ಸೇವಾ ಕಾರ್ಯ ಮುಂದುವರಿಸುತ್ತೇನೆ. ಮಠದ ಆಡಳಿತಾತ್ಮಕ ಜವಾಬ್ದಾರಿ ಉತ್ತರಾಧಿಕಾರಿಗೆ ನೀಡಲಾಗುತ್ತದೆ. ನಾವಿರುವಾಗಲೇ ಉತ್ತರಾಧಿಕಾರಿ ಇದ್ದಲ್ಲಿ ಅವರಿಗೂ ಸೇವಾ ಕಾರ್ಯಗಳ ತರಬೇತಿ ಸಿಕ್ಕಂತಾಗುತ್ತದೆ ಎಂಬುದು ನನ್ನ ನಿರ್ಧಾರ’ ಎಂದು ಭಕ್ತರಿಗೆ ತಿಳಿಸಿದರು.

ಹಲವರು ದೂರವಾಣಿ ಸಂದೇಶಗಳ ಮೂಲಕವೂ ಉತ್ತರಾಧಿಕಾರಿ ನೇಮಕದ ನಿರ್ಧಾರ ಕೈಬಿಡುವಂತೆ ಮನವಿ ಮಾಡಿದ್ದಾರೆ. ಮತ್ತೆ ಕೆಲವರು ನಿಮ್ಮ ನಿರ್ಧಾರ ಸೂಕ್ತವಾಗಿದೆ ಎಂದು ಸಹ ತಿಳಿಸಿದ್ದಾರೆ ಎಂದು ಸಾಣೇಹಳ್ಳಿ ಶ್ರೀ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT