ಬುಧವಾರ, ಸೆಪ್ಟೆಂಬರ್ 29, 2021
20 °C
ಭದ್ರಾ ಮೇಲ್ದಂಡೆ ಯೋಜನೆ: ಮಾಹಿತಿ ಪಡೆದ ಮಾಜಿ ಸಚಿವ ಟಿ.ಬಿ.ಜಯಚಂದ್ರ

ಚಿತ್ರದುರ್ಗ: ಭೂಸ್ವಾಧೀನ ತ್ವರಿತಗೊಳಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ 2023ಕ್ಕೆ ಪೂರ್ಣಗೊಳ್ಳಬೇಕು. ಆದರೆ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ರೈತರ ಮನವೊಲಿಸಿ ಭೂಸ್ವಾಧೀನ ಚುರುಕುಗೊಳಿಸಲು ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಒತ್ತಾಯಿಸಿದರು.

ಇಲ್ಲಿನ ಭದ್ರಾ ಮೇಲ್ದಂಡೆ ಯೋಜನೆ ಕಚೇರಿಯಲ್ಲಿ ಮುಖ್ಯ ಎಂಜಿನಿಯರ್‌ ರಾಘವನ್‌ ಅವರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ಮತ್ತೆ ಬರ ಪರಿಸ್ಥಿತಿ ತಲೆದೋರುವ ಸಾಧ್ಯತೆ ಇದೆ. ಹೀಗಾಗಿ, ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಅಗತ್ಯವಿದೆ. ಗುತ್ತಿಗೆದಾರರಿಗೆ ಬಾಕಿ ಇರುವ ಬಿಲ್‌ಗಳನ್ನು ಶೀಘ್ರ ಪಾವತಿಸಬೇಕು ಎಂದರು.

‘ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು ವಿನಾ ಕಾರಣ ಆರೋಪ ಮಾಡದೇ ಯೋಜನೆ ಅನುಷ್ಠಾನಕ್ಕೆ ಒಲವು ತೋರಬೇಕು. ರಾಷ್ಟ್ರೀಯ ಯೋಜನೆಯ ಮಾನ್ಯತೆ ಸಿಗುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು. ರಾಜಕಾರಣಿಗಳ ಬಗೆಗೆ ಅಸಮಾಧಾನ ವ್ಯಕ್ತಪಡಿಸುವುದನ್ನು ಕೈಬಿಡಬೇಕು’ ಎಂದು ಹೇಳಿದರು.

‘ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಂಡರೆ ಎಸ್‌.ನಿಜಲಿಂಗಪ್ಪ ಅವರಿಗೆ ಗೌರವ ಸಲ್ಲಿಸಿದಂತೆ ಆಗುತ್ತದೆ ಎಂದು ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ.ಕೃಷ್ಣ ಅವರ ಮೇಲೆ ಒತ್ತಡ ತಂದಿದ್ದೆ. ಇದರ ಫಲವಾಗಿ ₹ 2,893 ಕೋಟಿ ವೆಚ್ಚದ ಯೋಜನೆ ಸಿದ್ಧವಾಯಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಇನ್ನಷ್ಟು ಪ್ರಾಮುಖ್ಯತೆ ಸಿಕ್ಕಿತು. ವಿಶ್ವೇಶ್ವರಯ್ಯ ಜಲ ನಿಗಮ ರಚಿಸಲಾಯಿತು. ಈ ಯೋಜನೆ ಮಂಜೂರಾಗಲು ಹೋರಾಟಗಾರ ಜಯಣ್ಣ ಅವರ ಕೊಡುಗೆಯೂ ಇದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು