ಶನಿವಾರ, ಮಾರ್ಚ್ 6, 2021
30 °C
ಶಿಕ್ಷಕರ ದಿನಾಚರಣೆ

ವರ್ಗಾವಣೆಗೆ ಅವಕಾಶ ಕಲ್ಪಿಸಲು ಆಗ್ರಹ: ಸರ್ಕಾರದ ಗಮನ ಸೆಳೆಯಲು ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿತ್ರದುರ್ಗ: ಎರಡು ವರ್ಷಗಳಿಂದ ಸ್ಥಗಿತಗೊಂಡಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸಿ, ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಶಿವಾನಂದ ಒತ್ತಾಯಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವರ್ಗಾವಣೆ ವಿಷಯದಲ್ಲಿ ಶಿಕ್ಷಕರು ನಂಬಿಕೆ ಕಳೆದುಕೊಂಡಿದ್ದಾರೆ. ಕುಟುಂಬಗಳಿಂದ ದೂರವಿದ್ದು ತೊಂದರೆ ಅನುಭವಿಸುತ್ತಿದ್ದಾರೆ. ಅಂತರ್‌ ಜಿಲ್ಲಾ ವರ್ಗಾವಣೆಗೆ ತಕ್ಷಣ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

‘ಸೆ. 5 ರಂದು ನಮ್ಮ ದಿನ, ನಮ್ಮ ಶಾಲೆ, ನಮ್ಮ ಬೇಡಿಕೆ ಅಭಿಯಾನದ ಮೂಲಕ ಎಲ್ಲ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಿದ್ದೇವೆ. ಶಿಕ್ಷಕರ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಎಲ್ಲ ಜನಪ್ರತಿನಿಧಿಗಳಿಗೆ ಏಕಕಾಲಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ’ ಎಂದರು.

‘6ನೇ ವೇತನ ಆಯೋಗದ ಅಂತಿಮ ವರದಿಯನ್ನು ಯಥಾವತ್ತಾಗಿ ಒಪ್ಪಿಕೊಳ್ಳಬೇಕು. ವಿಶೇಷ ಬಡ್ತಿ ಹೊಂದಿರುವ ಎಲ್ಲ ಹಂತದ ಶಿಕ್ಷಕರಿಗೆ ಕಾಲಮಿತಿ ವೇತನ ಬಡ್ತಿ ಸೌಲಭ್ಯವನ್ನು ದೊರಕಿಸಿಕೊಡಬೇಕು. ನೂತನ ಪಿಂಚಣಿ ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು’ ಎಂದು ಮನವಿ ಮಾಡಿದರು.

‘ಬಡ್ತಿಗಾಗಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನಿಗಧಿಗೊಳಿಸಿರುವ ಪರೀಕ್ಷೆಯನ್ನು ರದ್ದುಗೊಳಿಸಿ, ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಬೇಕು. ಎಲ್ಲ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರು ಎಂದು ಪರಿಗಣಿಸಬೇಕು. ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಬದಲಾಯಿಸಿ ಅವರಿಗೂ ಬಡ್ತಿ ಅವಕಾಶ ನೀಡಬೇಕು’ ಎಂದರು.

‘ಸರ್ಕಾರಿ ಪ್ರಾಥಮಿಕ ಶಾಲೆಗಳ ಸಬಲೀಕರಣಕ್ಕೆ ತರಗತಿಗೊಬ್ಬ ಶಿಕ್ಷಕರನ್ನು ನೀಡಬೇಕು. ಬಜೆಟ್‌ನಲ್ಲಿ ಘೋಷಿಸಿದಂತೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಬೇಕು. ಜತೆಗೆ ಪ್ರತಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿಯನ್ನು ಆರಂಭಿಸಬೇಕು’ ಎಂದು ವಿನಂತಿಸಿಕೊಂಡರು.

‘ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸಿ, ಪರಿಹಾರ ದೊರಕಿಸಿಕೊಡಬೇಕು. 2017ರ ವರ್ಗಾವಣೆ ಕಾಯ್ದೆಯ ಲೋಪದೋಷಗಳನ್ನು ಹಾಗೂ ಹೆಚ್ಚುವರಿ ಶಿಕ್ಷಕರ ಸಮಸ್ಯೆಗಳನ್ನು ಸರಿಪಡಿಸಿ, ಶಾಲೆಗೊಬ್ಬ ಮುಖ್ಯ ಶಿಕ್ಷಕರನ್ನು ನಿಯುಕ್ತಿಗೊಳಿಸಬೇಕು. 1, 2 ಮತ್ತು 3 ತರಗತಿ ಮಕ್ಕಳಿಗೆ ಒಟ್ಟಿಗೆ ಬೋಧಿಸುವ ವ್ಯವಸ್ಥೆಯನ್ನು ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಬಿ.ಮಹಂತೇಶ್, ಉಪಾಧ್ಯಕ್ಷ ಬಿ.ಎಚ್.ಶಿವಪ್ರಕಾಶ್, ತಾಲ್ಲೂಕು ಗೌರವಾಧ್ಯಕ್ಷ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿಗಳಾದ ಆರ್.ಕೃಷ್ಣಪ್ಪ, ಕೆಂಚಪ್ಪ, ಕೆ.ಎಸ್. ಮಂಜುನಾಥ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು