ಶನಿವಾರ, ಸೆಪ್ಟೆಂಬರ್ 25, 2021
24 °C
ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಅಭಿಮತ

ಶಿಕ್ಷಕರು ರಾಷ್ಟ್ರ ನಿರ್ಮಿಸುವ ಶಿಲ್ಪಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ಶಿಕ್ಷಕನೇ ನಿಜವಾದ ಕಲಾವಿದ. ಶಿಕ್ಷಕರು ರಾಷ್ಟ್ರದ ಶಿಲ್ಪಿಗಳು. ಮಕ್ಕಳ ಭವಿಷ್ಯದ ನಿರ್ಮಾಪಕರು. ಶಿಕ್ಷಕರು ಕ್ರಿಯಾಶೀಲ ಚಿಂತನೆಗಳನ್ನು ಮೈಗೂಡಿಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಸ್ನೇಹ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಶನಿವಾರ ತರಳಬಾಳು ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸಾಧು ಲಿಂಗಾಯತ ಸಮಾಜದ ಆಶ್ರಯದಲ್ಲಿ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಉತ್ತಮ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಕ್ಷಕ ವೃತ್ತಿ ಸಕಲ ಕಲೆಗಳ ತವರು. ವಿವಿಧ ಕಲೆಗಳ ಮೂಲಕವೇ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ. ಬಿಡುವಿನ ಸಮಯದಲ್ಲಿ ಸಮಾಜ ಉಪಯೋಗಿ
ಕಾರ್ಯದಲ್ಲಿ ತೊಡಗಬೇಕು. ನೈತಿಕ, ಆಧ್ಯಾತ್ಮಿಕ ಬಲ ವೃದ್ಧಿಗೊಳಿಸಿಕೊಳ್ಳಬೇಕು. ಅಕ್ಷರ ಜ್ಞಾನದ ಜೊತೆ ಸಾಂಸ್ಕೃತಿಕ ಅರಿವು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಪ್ರಾಚಾರ್ಯ ಐ.ಜಿ. ಚಂದ್ರಶೇಖರಯ್ಯ, ‘ಸಂಘಟನೆಗಳು ಮಾನವ ಸಮಾಜದ ಉದ್ಧಾರಕ್ಕೆ ಶ್ರಮಿಸಬೇಕು. ವಿಘಟಿಸುವ ಸನ್ನಾಹಗಳನ್ನು ಅಡಗಿಸಬೇಕು. ಹಣಕ್ಕಿಂತ ಗುಣಕ್ಕೆ ಪ್ರಾಧಾನ್ಯತೆ ನೀಡಿ ಅಕ್ಷರದ ಅರಿವಿನ ಮೂಲಕ ಮತ್ತೆ ಕಲ್ಯಾಣದಂತಹ ಸಮಾಜ ನಿರ್ಮಿಸುವತ್ತ ಸಾಗಬೇಕು’ ಎಂದು ಕಿವಿಮಾತು ಹೇಳಿದರು.

ಶಿಕ್ಷಕ ಟಿ.ಪಿ.ಉಮೇಶ್ ಅವರ ‘ದೇವರಿಗೆ ಬೀಗ, ವಚನವಾಣಿ, ಅಪ್ಪ ಕೊಡಿಸಿದ ಮೊದಲ ಪುಸ್ತಕ’ ಎಂಬ ಕೃತಿಗಳನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು.

ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಿ.ಎಂ.ನಾಗರಾಜ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಟಿ.ಪಿ.ಉಮೇಶ್, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಬಸವಂತ ಕುಮಾರ, ರೇಷ್ಮಾ ಫರ್ವೀನ್ ಹಾಗೂ ತಾಲ್ಲೂಕಿನ ವಿವಿಧ ಶಾಲೆಗಳ 20 ಕ್ರಿಯಾಶೀಲ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಎಂ.ಸಿ.ರುದ್ರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಳಬಾಳು ನೌಕರರ ಸಂಘದ ಅಧ್ಯಕ್ಷ ಜಿ.ಎ.ದೇವರಾಜಯ್ಯ ಅಧ್ಯಕ್ಷತೆ ವಹಿಸಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಲೋಕೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ.ಶಿವಪ್ಪ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಕೆ.ಎಂ. ಶಿವಕುಮಾರ್, ಜಿ.ಎನ್.ನಾಗಲಿಂಗಪ್ಪ, ಕೆ.ಎಂ.ರುದ್ರಪ್ಪ, ತರಳಬಾಳು ಸಂಘದ ಕಾರ್ಯದರ್ಶಿ ಜಿ.ಆರ್. ಬಸವರಾಜಪ್ಪ, ಉಪಾಧ್ಯಕ್ಷ ಜಗದೀಶ ಬಾಬು, ಎಂ.ಪ್ರಕಾಶ, ಕಾಂತರಾಜ್ ಇದ್ದರು.

ಗಿರಿಜಮ್ಮ ಹಾಗೂ ಟಿ.ಬಿ. ಅನಿತಾ ವಚನಗೀತೆ ಹಾಡಿದರು. ಎಸ್.ಜಿ. ಹಾಲೇಶ ನಿರೂಪಿಸಿದರು. ಜೈಪ್ರಕಾಶ್ ವಂದಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು