ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರು, ಅಡುಗೆ ಸಿಬ್ಬಂದಿ ಅಮಾನತು

ಹಲ್ಲಿ ಬಿದ್ದ ಊಟ ಸೇವಿಸಿ 65 ಮಕ್ಕಳು ಅಸ್ವಸ್ಥರಾದ ಪ್ರಕರಣ
Last Updated 6 ನವೆಂಬರ್ 2019, 21:34 IST
ಅಕ್ಷರ ಗಾತ್ರ

ಚಿತ್ರದುರ್ಗ/ನಾಯಕನಹಟ್ಟಿ: ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 65 ಮಕ್ಕಳು ಅಸ್ವಸ್ಥರಾದ ಘಟನೆಗೆ ಸಂಬಂಧಿಸಿ ಚನ್ನಬಸಯ್ಯನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐವರು ಶಿಕ್ಷಕರು ಹಾಗೂ ಮೂವರು ಬಿಸಿಯೂಟ ತಯಾರಕರನ್ನು ಅಮಾನತುಗೊಳಿಸಿ ಡಿಡಿಪಿಐ ಕೆ.ರವಿಶಂಕರ್‌ ರೆಡ್ಡಿ ಆದೇಶಿಸಿದ್ದಾರೆ.

ಬುಧವಾರ ಶಾಲೆಗೆ ಭೇಟಿ ನೀಡಿದ ಅವರು, ಜಿಲ್ಲಾಧಿಕಾರ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ವರದಿ ನೀಡಿದರು. ನಿರ್ಲಕ್ಷ್ಯ ತೋರಿದ ಆರೋಪದ ಮೇರೆಗೆ ನೌಕರರನ್ನು ಅಮಾನತಗೊಳಿಸಲಾಗಿದೆ.

ಪ್ರಭಾರಮುಖ್ಯ ಶಿಕ್ಷಕ ಎಂ.ಬುಡೇನ್‌, ಶಿಕ್ಷಕಿಯರಾದ ಶಾಂತಮ್ಮ, ನವೀದಾ ಬೇಗಂ, ಪ್ರೇಮಕ್ಕ ಹಾಗೂ ಸುನೀತಾ ಅಮಾನತುಗೊಂಡವರು. ಅಡುಗೆ ತಯಾರಕರಾದ ಸುಲೋಚನಮ್ಮ, ರಾಜಮ್ಮ ಹಾಗೂ ಭಾಗ್ಯಮ್ಮ ಅವರನ್ನೂ ಸೇವೆಯಿಂದ ಅಮಾನತು ಮಾಡಲಾಗಿದೆ. ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಡಿಪಿಐ ಮಾಹಿತಿ ನೀಡಿದ್ದಾರೆ.

‘ವಾರದ ಮಟ್ಟಿಗೆ ಈ ಶಾಲೆಯಲ್ಲಿ ಅಡುಗೆ ತಯಾರಿಸುವುದನ್ನು ಸ್ಥಗಿತಗೊಳಿಸಲಾಗುವುದು. ಅಲ್ಲಿಯವರೆಗೂ ನಾಯಕನಹಟ್ಟಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಊಟ ತಯಾರಿಸಿ ಈ ಶಾಲೆಯ ಮಕ್ಕಳಿಗೆ ಪೂರೈಸಬೇಕು’ ಎಂದು ನಾಯಕನಹಟ್ಟಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಗಂಗಣ್ಣ ಅವರಿಗೆ ತಾಕೀತು ಮಾಡಿದರು. ಇದೇ ವೇಳೆ ಘಟನೆಯ ಕುರಿತು ಶಾಲಾ ಮಕ್ಕಳ ಮತ್ತು ಗ್ರಾಮಸ್ಥರ ಹೇಳಿಕೆಗಳನ್ನು ಅವರು ದಾಖಲಿಸಿಕೊಂಡರು.

‘ಶಾಲೆಯಲ್ಲಿ ಅಡುಗೆ ತಯಾರಿಸುವಾಗ ಪ್ರತಿಯೊಂದು ಹಂತದಲ್ಲೂ ಕಾಳಜಿ ವಹಿಸುವುದು ಶಾಲಾ ಸಿಬ್ಬಂದಿಯ ಜವಾಬ್ದಾರಿ. ಆದರೆ, ಚನ್ನಬಸಯ್ಯನಹಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಪ್ರಕರಣ ಪುನರಾವರ್ತನೆ ಆಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಡುಗೆ ತಯಾರಿಕೆಯಲ್ಲಿ ಹಲವು ಮಾನದಂಡಗಳನ್ನು ಅನುಸರಿಸಬೇಕು. ಆದರೆ, ಅವು ಪಾಲನೆ ಆಗಿಲ್ಲ’ ಎಂದು ಹೇಳಿದರು.

‘ಅಡುಗೆ ತಯಾರಕರು ಮೊದಲು ಸ್ವಚ್ಛವಾಗಿರಬೇಕು. ಅಡುಗೆ ತಯಾರಿಸುವಾಗ ಕೈಗವಸು, ತಲೆಗೆ ಮಾಸ್ಕ್‌ ಧರಿಸಬೇಕು. ಅದರೆ ಎಲೆ ಅಡಿಕೆ ಅಗಿಯುತ್ತ ಅಡುಗೆ ತಯಾರಿಸುತ್ತಾರೆ ಎಂಬುದು ಗೊತ್ತಾಗಿದೆ. ಮುಖ್ಯ ಶಿಕ್ಷಕರನ್ನೊಳಗೊಂಡಂತೆ ಶಾಲೆಯ ಎಲ್ಲ ಶಿಕ್ಷಕರು ಅಡುಗೆ ತಯಾರಿಸುವ ಹಾಗೂ ಬಡಿಸುವ ಸಮಯದಲ್ಲಿ ಮೇಲ್ವಿಚಾರಣೆ ನೋಡಿಕೊಳ್ಳಬೇಕು. ಮಕ್ಕಳ ಬಗ್ಗೆ, ಅವರ ಆಹಾರ ಪೂರೈಕೆಯಲ್ಲಿ ಶಾಲಾ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಅಕ್ಷರ ದಾಸೋಹ ರಾಜ್ಯ ಹಿರಿಯ ಸಹಾಯಕ ನಿರ್ದೇಶಕ ಎಸ್.ಸಿ.ಮಂಜುನಾಥ ಮಾತನಾಡಿ, ಅಕ್ಷರ ದಾಸೋಹ ರಾಜ್ಯದಾದ್ಯಂತ ನಂಬಿಕೆಯ ತಳಹದಿಯ ಮೇಲೆ ಸಾಗುತ್ತಿದೆ. ಮಕ್ಕಳಿಗೆ ಮೊದಲು ಅನ್ನ ನೀಡಿ ಅವರ ಆರೋಗ್ಯ ರಕ್ಷಣೆ ಮಾಡಿದ ನಂತರ ಶಿಕ್ಷಣ ಕೋಡುವುದು ನಮ್ಮ ಧ್ಯೇಯ. ಬಿಸಿಯೂಟ ಯಶಸ್ವಿಯಾಗುವುದು ಶಾಲಾ ಶಿಕ್ಷಕರು, ಅಡುಗೆ ತಯಾರಕರಿಂದ ಮಾತ್ರವಲ್ಲ. ಗ್ರಾಮಸ್ಥರ ಸಹಕಾರವೂ ಇದಕ್ಕೆ ಮುಖ್ಯ. ಗ್ರಾಮಸ್ಥರಿಗೆ ಶಾಲೆಯ ಬಗ್ಗೆ ಏನೇ ತಕರಾರುಗಳಿದ್ದರೂ ಅಧಿಕಾರಿಗಳ ಗಮನಕ್ಕೆ ತರಬೇಕು. ಆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದರು.

ಮಂಗಳವಾರ ನಡೆದ ಘಟನೆಯಿಂದ ಭಯಗೊಂಡಿದ್ದ ಕಾರಣ ಹಲವು ಮಕ್ಕಳು ಬುಧವಾರ ಶಾಲೆಗೆ ಬಂದಿರಲಿಲ್ಲ. ಒಟ್ಟು 160 ಮಕ್ಕಳಲ್ಲಿ ಕೇವಲ 20ರಷ್ಟು ಮಕ್ಕಳು ಮಾತ್ರ ಹಾಜರಾಗಿದ್ದರು.

ಜಿಲ್ಲಾ ಆಡಳಿತ ವೈದ್ಯಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ, ಮುಖ್ಯಾಧಿಕಾರಿ ಡಿ.ಭೂತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ, ಜಿಲ್ಲಾ ಪಂಚಾಯಿತಿ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಅಬ್ದುಲ್‌ಬಷೀರ್, ಸಹಾಯಕ ನಿರ್ದೇಶಕ ಎಂ.ತಿಪ್ಪೇಸ್ವಾಮಿ, ಎಸ್‌ಐ ಎಸ್.ರಘುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ಮಧು ಇದ್ದರು.

ಎಸ್‌ಡಿಎಂಸಿ ಮೇಲೆ ಅನುಮಾನ
ಬಿಸಿಯೂಟದಲ್ಲಿ ಹಲ್ಲಿ ಬಿದ್ದಿರುವ ಪ್ರಕರಣ ಮರುಕಳಿಸಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲಾ ಅಭಿವೃದ್ಧಿ ಸಮಿತಿಯ (ಎಸ್‌ಡಿಎಂಸಿ) ಮೇಲೆ ಅನುಮಾನ ವ್ಯಕ್ತಪಡಿಸಿದೆ.

ಜುಲೈ ತಿಂಗಳಲ್ಲಿ ಇದೇ ಅವಘಡ ಸಂಭವಿಸಿತ್ತು. ಮಂಗಳವಾರ (ನ.5) ಇದು ಮರುಕಳಿಸಿದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಸಾಂಬಾರಿನಲ್ಲಿ ಬಿದ್ದ ಹಲ್ಲಿ ಬೆಂದಿಲ್ಲ. ಕುದಿಯುವುದಕ್ಕೂ ಮೊದಲೇ ಬಿದ್ದಿದ್ದರೆ ಅದು ತುಂಡಾಗುತ್ತಿತ್ತು.ಅಡುಗೆ ತಯಾರಿಸಿದ ಬಳಿಕ ಹಲ್ಲಿ ಬಿದ್ದಿರುವ ಸಾಧ್ಯತೆ ಇದೆ. ಉದ್ದೇಶ ಪೂರ್ವಕವಾಗಿ ಹಲ್ಲಿಯನ್ನು ಊಟದಲ್ಲಿ ಹಾಕಲಾಗಿದೆ ಎಂಬುದು ಶಿಕ್ಷಣ ಇಲಾಖೆಯ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಚನ್ನಬಸಯ್ಯನಹಟ್ಟಿ ಸರ್ಕಾರಿ ಶಾಲೆಯ ಎಸ್‌ಡಿಎಂಸಿಗೆ ಸಂಬಂಧಿಸಿದ ವಿವಾದ ಎರಡು ವರ್ಷಗಳಿಂದ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು. ಆರು ತಿಂಗಳ ಹಿಂದೆಯಷ್ಟೇ ಸಮಿತಿ ರಚನೆಯಾಗಿದ್ದು, ಎರಡನೇ ಬಾರಿಗೆ ಇಂತಹ ಅವಘಡ ಸಂಭವಿಸಿದೆ. ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT