ಚಿಕ್ಕಜಾಜೂರು: 6 ದಶಕಗಳು ಕಳೆದರೂ ಸರ್ಕಾರಿ ಶಾಲೆಗಿಲ್ಲ ಮೂಲಸೌಕರ್ಯ. ಶಿಥಿಲಾವಸ್ಥೆಯ ಕಟ್ಟಡದಲ್ಲೇ ವಿದ್ಯಾರ್ಥಿಗಳಿಗೆ ಪಾಠ. ಆತಂಕದಲ್ಲೇ ಕಾಲ ಕಳೆಯುವ ಶಿಕ್ಷಕರು, ಪಾಲಕರು.
ಇದು ಸಮೀಪದ ಕೇಶವಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿ. 1961 ಜೂನ್ 24ರಂದು ಆರಂಭವಾದ ಶಾಲೆಯಲ್ಲಿ ಈ ವರ್ಷದ ಶೈಕ್ಷಣಿಕ ಸಾಲಿನಲ್ಲಿ 24 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳೇ ಹೆಚ್ಚಾಗಿದ್ದಾರೆ.
ಹೊಳಲ್ಕೆರೆ ತಾಲ್ಲೂಕಿನ ಗಡಿಯ ಅಂಚಿನಲ್ಲಿರುವ ಈ ಗ್ರಾಮಕ್ಕೆ ಯಾವುದೇ ವಾಹನ ಸೌಲಭ್ಯಗಳಾಗಲಿ, ಸುಸಜ್ಜಿತ ರಸ್ತೆಯ ಸೌಲಭ್ಯಗಳು ಇಲ್ಲ. ಕೃಷಿ ಹಾಗೂ ಕೃಷಿ ಆಧಾರಿತವಾಗಿರುವ ಕುಟುಂಬಗಳೇ ಹೆಚ್ಚು. ತಮ್ಮ ಕೃಷಿ ಚಟುವಟಿಕೆಗಳ ನಡುವೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಗ್ರಾಮಸ್ಥರಿಗೆ ಶಾಲೆಯಲ್ಲಿ ಸಮರ್ಪಕ ಸೌಲಭ್ಯಗಳು ಇಲ್ಲದಿರುವ ಚಿಂತೆ ಕಾಡುತ್ತಿದೆ.
ಗ್ರಾಮದಲ್ಲಿ ಉನ್ನತ ಶಿಕ್ಷಣ ಪಡೆದ ವಿದ್ಯಾವಂತರಿದ್ದಾರೆ. ಆದರೆ, ಆಧುನಿಕ ನಗರಗಳಲ್ಲಿ ಸಿಗುತ್ತಿರುವ ಶಿಕ್ಷಣದ ಸೌಲಭ್ಯಗಳು ಗ್ರಾಮದ ಮಕ್ಕಳಿಗೆ ಸಿಗುತ್ತಿಲ್ಲ ಎಂಬುದು ಯುವಕರ ಆರೋಪ.
ಶಾಲೆಯ ಕಟ್ಟಡವು ಹಳೆಯದಾಗಿದ್ದು , ಗೋಡೆಗಳು ಶಿಥಿಲಾವಸ್ಥೆ ತಲುಪಿದ್ದು, ಚಾವಣಿಗೆ ಹಾಕಿರುವ ಕೆಂಪು ಹೆಂಚುಗಳು ಬೀಳುವ ಸ್ಥಿತಿಯಲ್ಲಿವೆ. ಕಾಂಪೌಂಡ್ ಇಲ್ಲ. ಮಳೆ ಬಂದಾಗ ಶಾಲೆಯ ಆವರಣದಲ್ಲಿ ನೀರು ನಿಂತು ವಿದ್ಯಾರ್ಥಿಗಳು ಕೆಸರಿನಲ್ಲಿಯೇ ತರಗತಿ ಒಳಗೆ ಹೋಗುವ ಸ್ಥಿತಿ ಇದೆ. ಅನಿವಾರ್ಯವಾಗಿ ಶಿಕ್ಷಕ ಶಿಥಿಲಾವಸ್ಥೆಯ ಕಟ್ಟಡದಲ್ಲೇ ಪಾಠ ಮಾಡುವ ಸ್ಥಿತಿ ಇದೆ.
‘ಶಾಲೆಗೆ ಇದುವರೆಗೂ ಹೊಸ ಕಟ್ಟಡ ನಿರ್ಮಿಸಲು ಅನುಮತಿ ದೊರೆತಿಲ್ಲ. ಇಲಾಖೆಯ ನಿರ್ಲಕ್ಷ್ಯವೋ ಅಥವಾ ಬೇಜವಾಬ್ದಾರಿಯೋ ತಿಳಿಯುತ್ತಿಲ್ಲ. ಸುಸಜ್ಜಿತ ಶೌಚಾಲಯವಿಲ್ಲ. ಶಾಲಾ ಆವರಣದಲ್ಲೇ ಶುದ್ಧ ನೀರಿನ ಘಟಕವಿದ್ದರೂ, ನಿರ್ವಹಣೆ ಇಲ್ಲದೇ ಸೊರಗುತ್ತಿದೆ. ಇದರಿಂದ ಕೊಳವೆಬಾವಿಯಿಂದ ನೀರು ತರುವ ಸ್ಥಿತಿ ಇದೆ. ಸ್ಥಿತಿವಂತರು ತಮ್ಮ ಮಕ್ಕಳನ್ನು ದೂರದ ನಗರ ಪ್ರದೇಶಗಳ ಕಾನ್ವೆಂಟ್‌ಗಳಿಗೆ ಕಳುಹಿಸುತ್ತಾರೆ. ಆದರೆ, ಕೂಲಿ ಮಾಡಿಕೊಂಡು ಜೀವನ ನಡೆಸುವ ನಮ್ಮಂತಹ ಬಡವರ ಮಕ್ಕಳಿಗೆ ಸರ್ಕಾರದಿಂದ ಕನಿಷ್ಠ ಸೌಲಭ್ಯಗಳಿಲ್ಲ. ಹೀಗಾದರೆ ನಮ್ಮ ಮಕ್ಕಳು ಶಿಕ್ಷಣ ಪಡೆಯುವುದಾದರೂ ಹೇಗೆ’ ಎಂದು ಪ್ರಶ್ನಿಸುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮೋಹನ್‌ಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಅನಸೂಯಾ ಆನಂದ್.
ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯಲು ಉತ್ತಮವಾದ ಕಟ್ಟಡವಾಗಲಿ, ಆಟದ ಮೈದಾನವಾಗಲಿ, ಶುದ್ಧ ಕುಡಿಯುವ ನೀರಿನ ಸೌಕರ್ಯ ಇಲ್ಲ. ಕನಿಷ್ಠ ಇಂತಹ ಸೌಲಭ್ಯ ಒದಗಿಸದಿರುವುದು ವಿಪರ್ಯಾಸ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ’ ಎನ್ನುತ್ತಾರೆ ಮುರುಗೇಂದ್ರಪ್ಪ, ಕೆಂಚಪ್ಪ, ರವಿಕುಮಾರ್.
‘ಶಿಕ್ಷಣ ಇಲಾಖೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಲೆಗೆ ಸುಸಜ್ಜಿತ ಕಟ್ಟಡ ಹಾಗೂ ಮೂಲಸೌಕರ್ಯಗಳನ್ನು ಒದಗಿಸಲು ಗಮನ ಹರಿಸಬೇಕು’ ಎಂದು ಎಸ್‌ಡಿಎಂಸಿ ಅಧ್ಯಕ್ಷೆ ದೀಪಾ ನಾಗರಾಜ್, ಉಪಾಧ್ಯಕ್ಷ ನವೀನ್, ಚಿತ್ರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಿತಾ ಕೆಂಚವೀರಪ್ಪ, ಸದಸ್ಯ ವೆಂಕಟೇಶ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.