ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇರುಮಲ್ಲೇಶ್ವರ ಬ್ರಹ್ಮರಥೋತ್ಸವಕ್ಕೆ ಜನಸಾಗರ

ದಕ್ಷಿಣ ಕಾಶಿ ಎಂದು ಹೆಸರಾಗಿರುವ ಹಿರಿಯೂರು ನಗರದ ದೇವಸ್ಥಾನ
Last Updated 8 ಫೆಬ್ರುವರಿ 2023, 6:33 IST
ಅಕ್ಷರ ಗಾತ್ರ

ಹಿರಿಯೂರು: ದಕ್ಷಿಣ ಕಾಶಿ ಎಂದು ಖ್ಯಾತಿ ಪಡೆದಿರುವ ನಗರದ ತೇರುಮಲ್ಲೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ ಮಧ್ಯಾಹ್ನ 1.30ಕ್ಕೆ ಸಾವಿರಾರು ಭಕ್ತರ ಭಕ್ತಿ–ಸಂಭ್ರಮದ ನಡುವೆ ಯಶಸ್ವಿಯಾಗಿ ನೆರವೇರಿತು.

ಬೀರೇನಹಳ್ಳಿಯ ಮಜುರೆ ಕರಿಯಣ್ಣನಹಟ್ಟಿ ಗ್ರಾಮದ ವೀರಕರಿಯಣ್ಣ ದೇವರನ್ನು ಬೆಳಿಗ್ಗೆ 9 ಗಂಟೆಗೆ ದೇವಸ್ಥಾನಕ್ಕೆ ಕರೆತರಲಾಯಿತು. ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮತ್ತು ಡಿ.ಟಿ. ಶ್ರೀನಿವಾಸ್ ಅವರು ದೇವರನ್ನು ಪೂಜಿಸುವ ಮೂಲಕ ಬರಮಾಡಿಕೊಂಡರು. ದೇಗುಲ ನಿರ್ಮಾಣಕ್ಕೆ ಕಾರಣಳಾದ ಹೇಮರೆಡ್ಡಿ ಮಲ್ಲಮ್ಮ ಊರುಗೋಲಾಗಿ ಬಳಸುತ್ತಿದ್ದಳು ಎನ್ನಲಾದ ಶಿವಧನುಸ್ಸನ್ನು ಸಮೀಪದ ವೇದಾವತಿ ನದಿಗೆ ಒಯ್ದು ಗಂಗಾಸ್ನಾನ ನೆರವೇರಿಸಿ ತರಲಾಯಿತು. ನಂತರ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಸಮಕ್ಷಮದಲ್ಲಿ ಶಾಸಕಿ ಪೂರ್ಣಿಮಾ ಅವರು ಪತಿ ಡಿ.ಟಿ. ಶ್ರೀನಿವಾಸ್ ಅವರೊಂದಿಗೆ ತೇರುಮಲ್ಲೇಶ್ವರ, ಚಂದ್ರಮೌಳೇಶ್ವರ ಹಾಗೂ ಉಮಾಮಹೇಶ್ವರ ದೇವರುಗಳಿಗೆ ಪೂಜೆ ಸಲ್ಲಿಸಿದರು. ಪೂಜೆಯ ನಂತರ ಚರ್ಮ ವಾದ್ಯದ ನಡುವೆ ಅಲಂಕರಿಸಿದ ರಥಕ್ಕೆ ದೇವರುಗಳನ್ನು ತಂದು ಕೂರಿಸಿದ ತಕ್ಷಣ ರಥೋತ್ಸವಕ್ಕೆ ಚಾಲನೆ ಸಿಕ್ಕಿತು.

ದೇವಸ್ಥಾನದ ಮುಂಭಾಗದಿಂದ ಸಿದ್ದನಾಯಕ ವೃತ್ತದವರೆಗೆ ಅಪಾರ ಜನಸ್ತೋಮದ ಉದ್ಘೋಷದ ನಡುವೆ ರಥ ಸಾಗಿತು. ಉತ್ಸವದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ಮಾಜಿ ಸಚಿವ ಡಿ. ಸುಧಾಕರ್, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಬಿ. ಪಾಪಣ್ಣ, ಆರ್. ನಾಗೇಂದ್ರನಾಯ್ಕ್, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಮೂಡಲಗಿರಿಯಪ್ಪ, ನಿವೃತ್ತ ಎಂಜಿನಿಯರ್ ರವೀಂದ್ರಪ್ಪ, ಗೀತಾ ಗಂಗಾಧರ್, ಗುಂಡೇಶ್ ಕುಮಾರ್, ಟಿ. ಚಂದ್ರಶೇಖರ್, ಖಾದಿ ರಮೇಶ್, ಈರಲಿಂಗೇಗೌಡ, ಕಂದಿಕೆರೆ ಸುರೇಶ್ ಬಾಬು, ಶಿವರಂಜನಿ, ದೇವಸ್ಥಾನದ ಆಡಳಿತಾಧಿಕಾರಿ ಸ್ವಾಮಿ ಅವರೂ ಪಾಲ್ಗೊಂಡಿದ್ದರು. ಸಿದ್ದನಾಯಕ ವೃತ್ತದಲ್ಲಿ ಸಾವಿರಾರು ಭಕ್ತರು ದೇವರಿಗೆ ಹರಕೆ ಸಲ್ಲಿಸಿದರು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ವಿಶೇಷ: ಈ ಬಾರಿ ಬ್ರಹ್ಮರಥಕ್ಕೆ ಮಾಡಿದ್ದ ಹೂವಿನ ಅಲಂಕಾರ ಎದ್ದು ಕಾಣುತ್ತಿತ್ತು. ಮಾಮೂಲಿಯಂತೆ ಮುಂಭಾಗದಲ್ಲಿ ಸೇವಂತಿಗೆ ಹೂವಿನ ಬೃಹತ್ ಹಾರ ಕಣ್ಮನ ಸೆಳೆಯುವಂತಿತ್ತು.

₹ 10 ಲಕ್ಷಕ್ಕೆ ಮುಕ್ತಿ ಬಾವುಟ: ಬ್ರಹ್ಮರಥೋತ್ಸವಕ್ಕೆ ಮೊದಲು ಹರಾಜಾದ ಮುಕ್ತಿ ಬಾವುಟವನ್ನು ಮಾಜಿ ಸಚಿವ ಡಿ. ಸುಧಾಕರ್ ₹ 10 ಲಕ್ಷಕ್ಕೆ ಪಡೆದರು. ತೇರುಮಲ್ಲೇಶ್ವರ ದೇವರಿಗೆ ಕೈ ಮುಗಿದು ಬೆಂಬಲಿಗರೊಂದಿಗೆ ಡಿ. ಸುಧಾಕರ್ ಮುಕ್ತಿ ಬಾವುಟ ಕೈಯಲ್ಲಿ ಹಿಡಿದಾಗ ಭಕ್ತರಿಂದ ಕಿವಿಗಡಚುವ ಚಪ್ಪಾಳೆ, ಜೈಕಾರ ಕೇಳಿ ಬಂದಿತು.

ಮಳೆ–ಬೆಳೆಗೆ ಪ್ರಾರ್ಥನೆ: ‘ಹಿಂದಿನ ವರ್ಷ ವಾಣಿವಿಲಾಸ ಜಲಾಶಯ ಕೋಡಿ ಬೀಳುವಂತೆ ಮಾಡಬೇಕು. ಮಳೆ ಬೆಳೆ ಸಮೃದ್ಧವಾಗಬೇಕು ಎಂದು ದೇವರಲ್ಲಿ ಬೇಡಿಕೊಂಡಿದ್ದೆ. ನನ್ನ ಮೊರೆಯನ್ನು ದೇವರು ಪೂರೈಸಿದೆ. ರೈತರನ್ನೂ ಒಳಗೊಂಡು ಎಲ್ಲ ವರ್ಗದ ಜನರು ನೆಮ್ಮದಿಯ ಬದುಕು ಸಾಗಿಸುವಂತೆ ಮಾಡಲು ಈ ಬಾರಿ ದೇವರನ್ನು ಬೇಡಿಕೊಂಡೆ’ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.

ಮುಸ್ಲಿಮರಿಂದ ಮಜ್ಜಿಗೆ ವಿತರಣೆ: ತೇರುಬೀದಿಯಲ್ಲಿರುವ ಥಿಯಾಸಾಫಿಕಲ್ ಸೊಸೈಟಿ ಸಮೀಪ ಜಾಮಿಯಾ ಮಸೀದಿ ಧರ್ಮಗುರು ಸಿಗಬತ್ ಉಲ್ಲಾ, ಜಾಮಿಯಾ ಮಸೀದಿ ಮಾಜಿ ಅಧ್ಯಕ್ಷ ಬಿ.ಎಸ್. ನವಾಬ್ ಸಾಬ್, ಮುಖಂಡರಾದ ಅಸ್ಗರ್ ಅಹಮದ್, ಕರವೇ ದಾದಾಪೀರ್, ಜಿ. ದಾದಾಪೀರ್, ಜಫೃದ್ದೀನ್ (ಫಂಟು), ನೌಷಾದ್, ನಯಾಜ್ ನೇತೃತ್ವದಲ್ಲಿ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಮಜ್ಜಿಗೆ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT