ಬುಧವಾರ, ಆಗಸ್ಟ್ 10, 2022
23 °C
₹ 322 ಕೋಟಿ ವೆಚ್ಚದ ಗುತ್ತಿಗೆ ಕರೆದ ವಿಶ್ವೇಶ್ವರಯ್ಯ ಜಲ ನಿಗಮ

ಕೆರೆಗೆ ನೀರು ತುಂಬಿಸಲು ಟೆಂಡರ್: ರೈತರ ಹರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲ್ಲೂಕಿನ ಕಾತ್ರಾಳು, ಯಳಗೋಡು, ಮುದ್ದಾಪುರ, ಸುಲ್ತಾನಿಪುರ ಕೆರೆಗಳಿಗೆ ನೀರು ತುಂಬಿಸಲು ವಿಶ್ವೇಶ್ವರಯ್ಯ ಜಲ ನಿಗಮ ಈಚೆಗೆ ₹ 322 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್‌ ಕರೆದಿದೆ. ನಾಲ್ಕು ಕೆರೆಗಳಿಗೆ ಕೊಳವೆ ಮಾರ್ಗದ ಮೂಲಕ ನೀರು ಪೂರೈಕೆ ಮಾಡುವ ಕಾಮಗಾರಿಗೆ ಎರಡೂವರೆ ವರ್ಷ ಸಮಯಾವಕಾಶ ನಿಗದಿಪಡಿಸಿದ್ದು, ಈ ಅವಧಿಯೊಳಗೆ ಪೂರ್ಣಗೊಳಿಸಲು ನಿಗಮ ತೀರ್ಮಾನಿಸಿದೆ.

ನಿಗಮ ಟೆಂಡರ್ ಕರೆದ ಬೆನ್ನಲ್ಲೇ ರೈತ ಸಂಘದ ಕಾರ್ಯಕರ್ತರು ಭಾನುವಾರ ಕಾತ್ರಾಳು ಕೆರೆ ಸಮೀಪ ಪಪ್ಪಾಯಿ ಹಣ್ಣು ಸೇವಿಸುವ ಮೂಲಕ ಸಂಭ್ರಮದಲ್ಲಿ ತೇಲಾಡಿದರು. ಮುಂದಿನ 3 ವರ್ಷದ ಅವಧಿಯೊಳಗೆ ಖಂಡಿತವಾಗಿಯೂ ನೀರು ಕೆರೆಗಳಿಗೆ ಹರಿದು ಬರುತ್ತದೆ ಎಂಬ ವಿಶ್ವಾಸದ ಜತೆಗೆ ಅವರ ಮುಖದಲ್ಲಿ ಸಂತಸ ಎದ್ದು ಕಾಣುತ್ತಿತ್ತು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ‘ಇದು ರೈತರ ಹೋರಾಟದ ಫಲವಾಗಿದೆ. ಕಾತ್ರಾಳು ಕೆರೆಗೆ ನೀರು ಹರಿದು ಬಂದಲ್ಲಿ ಈ ಭಾಗದ ರೈತರ ಬದುಕು ಹಸನಾಗಲಿದೆ. ಅಂತರ್ಜಲ ಮಟ್ಟವೂ ಹೆಚ್ಚಲಿದೆ. ಆದರೆ, ನೀರು ಹರಿಯುವವರೆಗೂ ಸುಮ್ಮನೆ ಕೂರುವಂತಿಲ್ಲ. ರೈತರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಯೋಜನೆಯಿಂದ ನೀರು ಹರಿದು ಬರುವ ಮುನ್ನ ನಾಲ್ಕು ಕೆರೆಗಳ ಹೂಳನ್ನು ಎತ್ತಬೇಕು. ಅದಕ್ಕಾಗಿ ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕಬೇಕು. ಪ್ರತಿ ಕೆರೆಯ ಅಚ್ಚುಕಟ್ಟುದಾರರು ಸಂಘ ಮಾಡಿಕೊಂಡು ಹೋರಾಟಕ್ಕೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ನೀರಾವರಿ ಹೋರಾಟ ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ‘ಜಗಳೂರಿನ 2 ಹಾಗೂ ಚಿತ್ರದುರ್ಗ ತಾಲ್ಲೂಕಿನ 4 ಕೆರೆ ಸೇರಿ ಒಟ್ಟು ₹ 1,358 ಕೋಟಿ ವೆಚ್ಚದಲ್ಲಿ ನಿಗಮದಿಂದ ಟೆಂಡರ್ ಕರೆಯಲಾಗಿದೆ. ಕೆರೆಗೆ ನೀರು ಹರಿದು ಬಂದಲ್ಲಿ ರೈತರು ಕೖಷಿಯಿಂದ ವಿಮುಖರಾಗುವುದು ತಪ್ಪುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸಮಿತಿ ಸಂಚಾಲಕ ಕೆ.ಆರ್. ದಯಾನಂದ, ರೈತ ಮುಖಂಡರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮುದ್ದಾಪುರ ನಾಗರಾಜ್, ನೀಲಜ್ಜಿ ಮುರಿಗೇಂದ್ರಪ್ಪ, ಸಿದ್ದವ್ವನದುರ್ಗ ಶಿವಕುಮಾರ್, ಬಿ.ಟಿ. ಬಸವರಾಜ್, ಮೇಘರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.