ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ‘ವೇದಾವತಿ’ ದಾಟುವುದೇ ಸವಾಲು

ಹದಗೆಟ್ಟ ಕಾತ್ರಿಕೇನಹಳ್ಳಿ ಒಡ್ಡಿನ ಮಾರ್ಗ
Last Updated 15 ಜನವರಿ 2023, 5:39 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ವೇದಾವತಿ ನದಿ ಮೈದುಂಬಿ ಹರಿದರೆ ರೈತರಿಗೆ ಸಂತಸ. ಹಲವು ವರ್ಷಗಳ ನಂತರ ವೇದಾವತಿ ನದಿ ತುಂಬಿ ಹರಿದ ಸಂಭ್ರಮ ಮನೆ ಮಾಡಿದೆ. ಆದರೆ ತುಂಬಿದ ನದಿಯ ನೀರು ಯಾವಾಗ ಇಳಿಯುವುದೋ ಎಂದು ಕಾಯುವ ಸರದಿ ಇಲ್ಲಿನ ಕೆಲ ವಿದ್ಯಾರ್ಥಿಗಳದ್ದು.

ನದಿ ಮೈದುಂಬಿದರೆ ಇವರಲ್ಲಿ ಸಂತಸ ಕಾಣುವುದಿಲ್ಲ. ಬದಲಾಗಿ ಸಂಕಟ. ನದಿ ನೀರು ಇಳಿದರೆ ಶಾಲೆಗೆ ಹೋಗಬಹುದು ಎಂದು ಕಾಯುವ ಸ್ಥಿತಿ ಇವರದು.

ತಾಲ್ಲೂಕಿನ ಕಾತ್ರಿಕೇನಹಳ್ಳಿಯ ಕಾವಲ್ ಗ್ರಾಮದ ಮಕ್ಕಳ ವ್ಯಥೆಯ ಕಥೆ ಇದು..

ವೇದಾವತಿ ಮೈದುಂಬಿದರೆ ಇಲ್ಲಿನ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿಯಬೇಕಾಗುತ್ತದೆ. 2 ಕಿ.ಮೀ. ದೂರದಲ್ಲಿರುವ ಶಾಲೆಗೆ ಹೋಗಲು 10 ಕಿ.ಮೀ. ಸುತ್ತಿಕೊಂಡು ಬರಬೇಕಿದೆ. ನದಿಯಲ್ಲಿ ನೀರಿನ ಹರಿವು ಕಡಿಮೆ ಇದ್ದಲ್ಲಿ ದೊಡ್ಡವರ ಸಹಾಯದೊಂದಿಗೆ ಮಾತ್ರ ನದಿ ದಾಟಲು ವಿದ್ಯಾರ್ಥಿಗಳಿಗೆ ಸಾಧ್ಯ.

ಹಿರಿಯೂರು ಕಾತ್ರಿಕೇನಹಳ್ಳಿಯ ಕಾವಲ್ ಗ್ರಾಮದ ಹಟ್ಟಿಯಲ್ಲಿ 30 ಮನೆಗಳಿದ್ದು, ಕಾತ್ರಿಕೇನಹಳ್ಳಿಯಲ್ಲಿರುವ ಪ್ರಾಥಮಿಕ ಶಾಲೆಗೆ, ಅಮ್ಮನಹಟ್ಟಿಯಲ್ಲಿರುವ ಪ್ರೌಢಶಾಲೆಗೆ ವೇದಾವತಿ ನದಿಗೆ ನಿರ್ಮಿಸಿರುವ ಒಡ್ಡನ್ನು ದಾಟಿಯೇ ಹೋಗಬೇಕು.

89 ವರ್ಷಗಳ ನಂತರ ವಾಣಿವಿಲಾಸ ಜಲಾಶಯ ತುಂಬಿ ಕೋಡಿ ಹರಿದಿದೆ ಎಂದು ಲಕ್ಷಾಂತರ ಜನ ಖುಷಿ ಪಡುತ್ತಿದ್ದರೆ, ಈ ಹಟ್ಟಿಯ ಮಕ್ಕಳು ಕೋಡಿಯ ನೀರು ಯಾವಾಗ ನಿಲ್ಲುತ್ತದೋ ಎಂದು ದಿನಗಣನೆ ಮಾಡುವಂತಾಗಿದೆ. ಜಲಾಶಯ ಕೋಡಿ ಬಿದ್ದ ದಿನದಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಆಗುತ್ತಿಲ್ಲ. ಶಾಲೆ ಬಿಡಿಸಲು ಮನಸ್ಸಾಗದ ಪಾಲಕರು ಮಕ್ಕಳನ್ನು ಬೀರೇನಹಳ್ಳಿ ಮೂಲಕ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಅಮ್ಮನಹಟ್ಟಿಯ ಮೀಸೆ ಪಾರ್ಥ, ಬಸವರಾಜ್ ಸಮಸ್ಯೆ ತೆರೆದಿಟ್ಟರು.

ಒಡ್ಡಿನಿಂದ ಆಚೆಗೆ ಇರುವ ಕಾವಲಿಗೆ, ರೈತರ ಜಮೀನುಗಳಿಗೆ ಹೋಗಲು ಮೈಸೂರು ಒಡೆಯರ ಕಾಲದಲ್ಲಿಯೇ ವೇದಾವತಿ ನದಿಗೆ ಪೈಪ್ ಜೋಡಿಸಿ, ಅದರ ಮೇಲೆ ರಸ್ತೆ ನಿರ್ಮಿಸಲಾಗಿತ್ತು. ಈ ವರ್ಷ ನದಿಯಲ್ಲಿನ ನೀರಿನ ರಭಸಕ್ಕೆ ರಸ್ತೆ ಕೊಚ್ಚಿ ಹೋಗಿದೆ.

ಮಕ್ಕಳು, ರೈತರು ಅನಿವಾರ್ಯವಾಗಿ ಒಡ್ಡಿನ ನೀರಿನಲ್ಲಿ ನಡೆದು ಬರುವಂತಾಗಿದೆ. ರಸ್ತೆ ಸರಿಪಡಿಸುವಂತೆ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸದ್ಯಕ್ಕೆ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಮಳೆಗಾಲ ಆರಂಭವಾದಲ್ಲಿ ಮತ್ತೆ ಸಮಸ್ಯೆ ಎದುರಾಗುತ್ತದೆ. ಒಡ್ಡಿನಿಂದ ಆಚೆಗೆ ಜಮೀನು ಹೊಂದಿರುವ ರೈತರು, ಶಾಲೆಗೆ ಬಂದು ಹೋಗುವ ಮಕ್ಕಳ ಕಷ್ಟ ಕೇಳುವವರು ಯಾರು ಎಂದು ಪ್ರಶ್ನಿಸುತ್ತಾರೆ ಯುವಕ ಪುನೀತ್.

ಶಾಶ್ವತ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವ

ಬಹಳಷ್ಟು ವರ್ಷಗಳ ನಂತರ ನದಿಯಲ್ಲಿ ನೀರು ರಭಸವಾಗಿ ಹರಿದಿರುವುದರಿಂದ ರಸ್ತೆ ಕೊಚ್ಚಿ ಹೋಗಿ ಜನರಿಗೆ ತೊಂದರೆಯಾಗಿರುವುದು ನಿಜ. ತಾತ್ಕಾಲಿಕವಾಗಿ ಪೈಪ್ ಜೋಡಿಸಿ ಜನರ ಓಡಾಟಕ್ಕೆ ಮೂರ್ನಾಲ್ಕು ದಿನದಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು. ಶಾಶ್ವತ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ವಿಶ್ವೇಶ್ವರಯ್ಯ ನೀರಾವರಿ ನಿಗಮದ ಎಇಇ ಚಂದ್ರಮೌಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT