ಚಿತ್ರದುರ್ಗ: ಜಿಲ್ಲಾಸ್ಪತ್ರೆಯ ಆವರಣದಲ್ಲಿದ್ದ ಜಿಲ್ಲಾ ಆಯುಷ್ ಆಸ್ಪತ್ರೆ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಮೂಲ ಸೌಲಭ್ಯಗಳ ಕೊರತೆ ಅನುಭವಿಸುತ್ತಿದೆ. ಜೊತೆಗೆ 50 ಹಾಸಿಗೆ ಸಾಮರ್ಥ್ಯದ ಆಯುರ್ವೇದ ಆಸ್ಪತ್ರೆ ಕಾಮಗಾರಿ ಕೂಡ ನನೆಗುದಿಗೆ ಬಿದ್ದಿರುವ ಕಾರಣ ಜಿಲ್ಲೆಯಲ್ಲಿ ಪರ್ಯಾಯ ಚಿಕಿತ್ಸೆ ಮರೀಚಿಕೆಯಾಗಿದೆ.
ಇಂಗ್ಲಿಷ್ ಔಷಧಕ್ಕೆ ಹೊರತಾಗಿ ಆಯುರ್ವೇದ, ಹೋಮಿಯೋಪತಿ, ಯೋಗ, ಪ್ರಕೃತಿ ಮುಂತಾದ ಚಿಕಿತ್ಸೆ ಪಡೆಯುವ ಜನರು ಜಿಲ್ಲೆಯಲ್ಲಿ ಸಾಕಷ್ಟಿದ್ದಾರೆ. ಹಿಂದಿನಿಂದಲೂ ಗರಡಿ ಮನೆಯಲ್ಲಿ ಪಳಗಿರುವ ಹಿರಿಯರು ಆಯುರ್ವೇದ ಚಿಕಿತ್ಸೆಯನ್ನೇ ಇಷ್ಟಪಡುತ್ತಾರೆ. ಆದರೆ, ಜಿಲ್ಲಾ ಕೇಂದ್ರದಲ್ಲಿರುವ ಆಯುಷ್ ಆಸ್ಪತ್ರೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ಅಲ್ಲಿ ಸಾರ್ವಜನಿಕರಿಗೆ ಸಮರ್ಪಕ ಚಿಕಿತ್ಸೆ ದೊರೆಯದಂತಾಗಿದೆ.
ಸೌಲಭ್ಯಗಳ ಕೊರತೆಯಿಂದಾಗಿ ಆಯುಷ್ ಆಸ್ಪತ್ರೆಯಲ್ಲಿ ರೋಗಿಗಳ ದಾಖಲಾತಿ ನಡೆಯುತ್ತಿಲ್ಲ. ದಿನದ ಚಿಕಿತ್ಸೆ (ಡೇ ಕೇರ್) ಮಾತ್ರ ನಡೆಯುತ್ತಿದೆ. ದಾಖಲಾಗಿ ಚಿಕಿತ್ಸೆ ಪಡೆಯಲು ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ ಮುಂತಾದೆಡೆಗೆ ತೆರಳಬೇಕಾದ ಪರಿಸ್ಥಿತಿ ಇದೆ. ವಿವಿಧ ರೀತಿಯ ನೋವು ಅನುಭವಿಸುತ್ತಿರುವ ರೋಗಿಗಳು ಅನಿವಾರ್ಯವಾಗಿ ಇಂಗ್ಲಿಷ್ ಔಷಧಿಯನ್ನೇ ಪಡೆಯಬೇಕಾಗಿದೆ.
‘ನಾನು ಡಿಸ್ಕ್ ಸಮಸ್ಯೆಯಿಂದ ಬಳಲುತ್ತಿದ್ದು ಖಾಸಗಿ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯಗಳಿಲ್ಲದ ಕಾರಣ ಹೆಚ್ಚು ಖರ್ಚು ಮಾಡಬೇಕಾಗಿದೆ’ ಎಂದು ರೋಗಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 32 ಚಿಕಿತ್ಸಾಲಯ: ಆಯುಷ್ ಇಲಾಖೆಯಡಿ ಜಿಲ್ಲೆಯಾದ್ಯಂತ 32 ಚಿಕಿತ್ಸಾಲಯಗಳಿವೆ. ಚಳ್ಳಕೆರೆ ತಾಲ್ಲೂಕೊಂದರಲ್ಲೇ 13 ಆಸ್ಪತ್ರೆಗಳಿದ್ದರೆ, ಹೊಸದುರ್ಗ ತಾಲ್ಲೂಕಿನಲ್ಲಿ 8 ಚಿಕಿತ್ಸಾಲಯಗಳಿವೆ. ಆದರೆ ಸೌಲಭ್ಯಗಳ ಕೊರತೆಯಿಂದಾಗಿ ಯಾವ ಆಸ್ಪತ್ರೆಯಲ್ಲೂ ದಾಖಲಾತಿ ದೊರೆಯುತ್ತಿಲ್ಲ. ರೋಗಿಗಳ ತಪಾಸಣೆಗಷ್ಟೇ ಈ ಚಿಕಿತ್ಸಾಲಯಗಳು ಸೀಮಿತವಾಗಿವೆ.
ಜಿಲ್ಲಾಸ್ಪತ್ರೆಯಿಂದ ಹೊರಕ್ಕೆ: ಜಿಲ್ಲಾಸ್ಪತ್ರೆಯು ವೈದ್ಯಕೀಯ ಮಹಾವಿದ್ಯಾಲಯವಾಗಿ ಮೇಲ್ದರ್ಜೆಗೇರಿದ ಕಾರಣ ಅದೇ ಆವರಣದಲ್ಲಿದ್ದ ಆಯುಷ್ ಆಸ್ಪತ್ರೆ, ನರ್ಸಿಂಗ್ ಕಾಲೇಜು ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಆಯುಷ್ ಆಸ್ಪತ್ರೆ ಈಗ ಚಳ್ಳಕೆರೆ ರಸ್ತೆಯಲ್ಲಿರುವ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ.
ಸರ್ಕಾರದ ನಿಯಮಾನುಸಾರ ಆಯುಷ್ ಆಸ್ಪತ್ರೆ ಕೂಡ ಜಿಲ್ಲಾಸ್ಪತ್ರೆಯ ಅಂಗಳದಲ್ಲೇ ಇರಬೇಕು. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಜಿಲ್ಲಾಸ್ಪತ್ರೆಯಿಂದ ಹೊರಹಾಕಿರುವುದು ವೈದ್ಯರು ಹಾಗೂ ರೋಗಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ವೈದ್ಯಕೀಯ ಕಾಲೇಜು, ಜಿಲ್ಲಾಸ್ಪತ್ರೆ ಹೊಸದಾಗಿ ನಿರ್ಮಾಣಗೊಂಡರೂ ಅಲ್ಲಿ ಆಯುಷ್ ಆಸ್ಪತ್ರೆಗೆ ಜಾಗ ನೀಡದಿರುವುದು ಆಕ್ರೋಶಕ್ಕೆ ಗುರಿಯಾಗಿದೆ.
‘ವೈದ್ಯಕೀಯ ಕಾಲೇಜು ನೀಲನಕ್ಷೆಯಲ್ಲಿ ಆಯುಷ್ ಆಸ್ಪತ್ರೆಗೆ ಜಾಗ ನೀಡಿಲ್ಲ. ಈ ಕುರಿತು ಆಯುಷ್ ಇಲಾಖೆಗೆ ದೂರು ನೀಡಲಾಗಿದ್ದು ಜಿಲ್ಲಾಸ್ಪತ್ರೆ ಆವರಣದಲ್ಲಿ ಜಾಗ ಪಡೆಯಲು ಹೋರಾಟ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಹೇಳಿದರು.
ಆಯುಷ್ ಆಸ್ಪತ್ರೆಗಳಲ್ಲಿ ದಾಖಲಾತಿ ಸೌಲಭ್ಯವಿಲ್ಲ ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾದ ಅನಿವಾರ್ಯತೆ ಜಿಲ್ಲಾಸ್ಪತ್ರೆ ಆವರಣದಿಂದ ಆಯುಷ್ ಆಸ್ಪತ್ರೆ ಹೊರಕ್ಕೆ
ಪಾಳುಬಿದ್ದ ಆಯುರ್ವೇದ ಆಸ್ಪತ್ರೆ ಜಾಗ 2018ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಆಯುರ್ವೇದ ಆಸ್ಪತ್ರೆ ಘೋಷಣೆ ಮಾಡಿದ್ದರು. ನಂತರ ತಾಲ್ಲೂಕಿನ ಇಂಗಳದಾಳು ಗ್ರಾಮದ ಬಳಿ 5 ಎಕರೆ ಜಾಗವನ್ನೂ ಮೀಸಲಿಡಲಾಗಿತ್ತು. ಆದರೆ ಇಲ್ಲಿಯವರೆಗೂ ಅನುದಾನ ಬಿಡುಗಡೆಯಾಗದ ಕಾರಣ ಆಯುರ್ವೇದ ಆಸ್ಪತ್ರೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಆಸ್ಪತ್ರೆಗೆ ಮೀಸಲಿಟ್ಟಿದ್ದ ಜಾಗ ಪಾಳು ಬಿದ್ದಿದೆ. ‘ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ (ಕೆಎಂಇಆರ್‌ಸಿ) ಅನುದಾನದಡಿ ಆಯುರ್ವೇದ ಆಸ್ಪತ್ರೆ ನಿರ್ಮಾಣ ಮಾಡುವ ಬಗ್ಗೆ ಜಿಲ್ಲಾಧಿಕಾರಿ ಚಿಂತಿಸಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳನ್ನೂ ಈ ಬಗ್ಗೆ ಮನವಿ ಮಾಡಲಾಗಿದೆ’ ಎಂದು ಜಿಲ್ಲಾ ಆಯುಷ್ ಅಧಿಕಾರಿ ಹೇಳಿದರು.
ಕಾಡುತ್ತಿದೆ ವೈದ್ಯರ ಕೊರತೆ ಜಿಲ್ಲೆಯಲ್ಲಿರುವ ಆಯುಷ್ ಆಸ್ಪತ್ರೆಗಳಿಗೆ 42 ವೈದ್ಯರ ಮಂಜೂರಾತಿ ಇದೆ. ಆದರೆ ಸದ್ಯ 21 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಇತರ ಸಿಬ್ಬಂದಿಯ ಕೊರತೆಯೂ ಆಸ್ಪತ್ರೆಗಳನ್ನು ಕಾಡುತ್ತಿದೆ. ‘ಅಲೋಪತಿಯಲ್ಲಿ ಜಿಲ್ಲಾಧಿಕಾರಿಗಳೇ ವೈದ್ಯರನ್ನು ನೇಮಕ ಮಾಡಿಕೊಳ್ಳುತ್ತಾರೆ. ಆದರೆ ಆಯುಷ್ ವೈದ್ಯರ ನೇಮಕಾತಿಗೆ ಜಿಲ್ಲಾಧಿಕಾರಿಗೆ ಅಧಿಕಾರವಿಲ್ಲ. ಆಯುಷ್ ವೈದ್ಯರನ್ನೂ ಜಿಲ್ಲಾಧಿಕಾರಿಯೇ ನೇಮಕ ಮಾಡಿಕೊಳ್ಳುವಂತಾಗಬೇಕು’ ಎಂದು ವೈದ್ಯರೊಬ್ಬರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.