ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರೋನ್‌ ಕಣ್ಣಿಗೂ ಕಾಣದ ಆನೆ

ಸಲಗ ಪತ್ತೆಗೆ ದಿನವಿಡೀ ಕಾರ್ಯಾಚರಣೆ
Last Updated 17 ಫೆಬ್ರುವರಿ 2020, 6:03 IST
ಅಕ್ಷರ ಗಾತ್ರ

ಚಿತ್ರದುರ್ಗ: ದಾಂಡೇಲಿ ಅರಣ್ಯದಿಂದ ದಾರಿತಪ್ಪಿ ಬಂದು ಜಿಲ್ಲೆಯಲ್ಲಿ ಕಾಣಿಸಿಕೊಂಡ ಕಾಡಾನೆ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ದಿನವಿಡೀ ಕಾರ್ಯಾಚರಣೆ ನಡೆಸಿದರು. ಹೆಜ್ಜೆ ಗುರುತು ಹಾಗೂ ಲದ್ದಿಯ ಹೊರತಾಗಿ ಆನೆ ಕಣ್ಣಿಗೆ ಬೀಳಲಿಲ್ಲ.

ಡ್ರೋನ್‌ ಕ್ಯಾಮೆರಾದ ನೆರವು ಪಡೆದು ಕಾಡಾನೆ ಪತ್ತೆಗೆ ಪ್ರಯತ್ನಿಸಲಾಯಿತು. ಆದರೆ, ಆನೆ ಮಾತ್ರ ಡ್ರೋನ್‌ ಕಣ್ಣಿಗೂ ಬೀಳಲಿಲ್ಲ. ಕಾರಿಡಾರ್‌ ಮೂಲಕ ಆನೆಯು ಚಿತ್ರದುರ್ಗ ಜಿಲ್ಲೆಯ ಗಡಿ ದಾಟಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಹಾಗೂ ಚಿತ್ರದುರ್ಗ ವಲಯ ವ್ಯಾಪ್ತಿಯ ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ಬೆಳಿಗ್ಗೆಯಿಂದ ರಾತ್ರಿ 7 ಗಂಟೆಯವರೂ ಆನೆ ಪತ್ತೆಗೆ ಕಾರ್ಯಾಚರಣೆ ನಡೆಸಿದರು. ತೇಕಲವಟ್ಟಿ, ಕಸವನಹಳ್ಳಿ, ವಿ.ವಿ. ಸಾಗರದ ಸಮೀಪದ ಜಮೀನುಗಳಲ್ಲಿ ಆನೆಯ ಹೆಜ್ಜೆಗುರುತು ಸಿಕ್ಕಿವೆ. ಅಲ್ಲಲ್ಲಿ ಆನೆಯ ಲದ್ದಿ ಕಾಣಿಸಿಕೊಂಡಿವೆ.

ಹೆಜ್ಜೆಗುರುತು ಹಾಗೂ ಲದ್ದಿಯ ಜಾಡು ಹಿಡಿದು ಸಾಗಿದ ಅರಣ್ಯಾಧಿಕಾರಿಗಳಿಗೆ ಆನೆ ಕಾಣಿಸಲಿಲ್ಲ. ಡ್ರೋನ್‌ ಕ್ಯಾಮೆರಾದ ಸಹಾಯ ಪಡೆದು ಪತ್ತೆ ಹಚ್ಚಲು ನಡೆಸಿದ ಪ್ರಯತ್ನ ಕೂಡ ಫಲ ನೀಡಲಿಲ್ಲ. ಬೆಟ್ಟ ಹಾಗೂ ಅರಣ್ಯ ಪ್ರದೇಶದಲ್ಲಿ ಹೆಜ್ಜೆಗುರುತು ಗೋಚರಿಸಿಲ್ಲ. ಬಾಳೆ ತೋಟ, ಅಡಿಕೆ ತೋಟದಲ್ಲಿ ಮಾತ್ರ ಕುರುಹು ಬಿಟ್ಟು ಹೋಗಿದೆ.

‘ತೇಕಲವಟ್ಟಿ ಮಾರ್ಗವಾಗಿ ಬುಕಾಪಟ್ಟಣದ ಮೂಲಕ ಹಾಸನ ಜಿಲ್ಲೆಗೆ ಅಥವಾ ಹೊಸದುರ್ಗ, ಲಕ್ಕಿಹಳ್ಳಿ ಮೂಲಕ ಭದ್ರಾ ಅಭಯಾರಣ್ಯಕ್ಕೆ ತಲುಪಿರುವ ಸಾಧ್ಯತೆ ಇದೆ. ನಿತ್ಯ 40 ಕಿ.ಮೀ ಸಂಚರಿಸುವ ಆನೆ ಶನಿವಾರ ರಾತ್ರಿಯೇ ಜಿಲ್ಲೆಯ ಗಡಿ ದಾಟಿರಬಹುದು. ಇಲ್ಲವೇ, ಬೆಟ್ಟದ ಸಾಲಿನ ಪೊದೆಯೊಳಗೆ ಅವಿತಿರಬಹುದು’ ಎಂದು ಅರಣ್ಯಾಧಿಕಾರಿಯೊಬ್ಬರು ಶಂಕೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT