ಮಂಗಳವಾರ, ಜುಲೈ 27, 2021
24 °C

ಸಂಕಷ್ಟದ ಸುಳಿಗೆ ಸಿಲುಕಿದ ಹೋಟೆಲ್‌ ಉದ್ಯಮ

ಜಿ.ಬಿ. ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೊರೊನಾ ಸೋಂಕು ಸೃಷ್ಟಿಸಿದ ಬಿಕ್ಕಟ್ಟು ಹಾಗೂ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಸರ್ಕಾರ ಹೇರಿದ ಲಾಕ್‌ಡೌನ್‌ ಕಾರಣಕ್ಕೆ ಹೋಟೆಲ್‌ ಉದ್ಯಮ ಸಂಕಷ್ಟದ ಸುಳಿಗೆ ಸಿಲುಕಿದೆ. ಹೋಟೆಲ್‌ ಮಾಲೀಕರು ಹಾಗೂ ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿಯೂ ಹೋಟೆಲ್‌ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಪಾರ್ಸಲ್‌ಗೆ ಅನುಮತಿ ಸಿಕ್ಕಿದೆ. ಹಂತ ಹಂತವಾಗಿ ಸಡಿಲಗೊಳ್ಳುತ್ತಿರುವ ಲಾಕ್‌ಡೌನ್‌ ನಿಯಮದಲ್ಲಿಯೂ ಆತಿಥ್ಯ ವಲಯಕ್ಕೆ ವಿನಾಯಿತಿ ನೀಡಲಾಗಿದೆ. ಗ್ರಾಹಕರೇ ಹೋಟೆಲ್‌ ಮೆಟ್ಟಿಲು ತುಳಿಯದಿದ್ದರೆ ವಹಿವಾಟು ನಡೆಯುವುದಾದರೂ ಹೇಗೆ ಎಂಬ ಪ್ರಶ್ನೆ ಮಾಲೀಕರನ್ನು ಕಾಡುತ್ತಿದೆ.

ಪ್ರವಾಸೋದ್ಯಮದೊಂದಿಗೆ ತಳುಕು ಹಾಕಿಕೊಂಡಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಹೋಟೆಲ್‌ ಉದ್ಯಮ ಉತ್ತಮ ಬೆಳವಣಿಗೆ ಹೊಂದಿತ್ತು. ವಸತಿ ಸೌಲಭ್ಯ ಹೊಂದಿದ ಹಾಗೂ ಟೀ–ಕಾಫಿಗೆ ಸೀಮಿತವಾದ ಮಳಿಗೆಗಳು ಸೇರಿ ಜಿಲ್ಲೆಯಲ್ಲಿ ಸುಮಾರು 850 ಹೋಟೆಲ್‌ಗಳಿವೆ. ಹೋಟೆಲ್‌ ಮಾಲೀಕರ ಸಂಘದಲ್ಲಿ 150ಕ್ಕೂ ಹೆಚ್ಚು ಹೋಟೆಲ್‌ಗಳು ನೋಂದಣಿಯಾಗಿವೆ. ಅಂದಾಜು 2,500 ಜನರಿಗೆ ಈ ಉದ್ಯಮ ಉದ್ಯೋಗ ನೀಡಿದೆ.

ಪ್ರತಿವರ್ಷ ಜನವರಿಯಿಂದ ಆಗಸ್ಟ್‌ವರೆಗೂ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಗರಿಗೆದರುತ್ತಿತ್ತು. ಇದೇ ಸಂದರ್ಭದಲ್ಲಿ ಹೋಟೆಲ್‌ ವಹಿವಾಟು ಏರಿಕೆ ಕಾಣುತ್ತಿತ್ತು. ಹೋಟೆಲ್‌ ಮಾಲೀಕರು ಈ ಅವಧಿಯಲ್ಲಿ ಹೆಚ್ಚು ವಹಿವಾಟು, ಲಾಭದ ನಿರೀಕ್ಷೆ ಮಾಡುತ್ತಿದ್ದರು. ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಲಾಭದ ನಿರೀಕ್ಷೆಯನ್ನು ಮಾಲೀಕರು ಕೈಬಿಟ್ಟಿದ್ದಾರೆ. ಉದ್ಯಮ ಉಳಿಸಿಕೊಳ್ಳಲು ಹಲವು ರೀತಿಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.

‘ಒಂದೂವರೆ ವರ್ಷದ ಹಿಂದೆ ಆರಂಭವಾದ ಸಂಕಷ್ಟದ ದಿನಗಳು ಕೊನೆಯಾಗುತ್ತಿಲ್ಲ. ಉದ್ಯಮವನ್ನು ಉಳಿಸಿಕೊಳ್ಳಲು ಸಾಕಷ್ಟು ರೀತಿಯಲ್ಲಿ ಪ್ರಯತ್ನಿಸುತ್ತಿದ್ದೇವೆ. ಕಟ್ಟಡದ ಬಾಡಿಗೆ ಪಾವತಿಸಲು, ವಿದ್ಯುತ್, ನೀರಿನ ಶುಲ್ಕಕ್ಕೆ ಅನೇಕರು ಪರದಾಡುತ್ತಿದ್ದಾರೆ. ಸರ್ಕಾರ ಏನಾದರೂ ಸಹಾಯ ಮಾಡಬಹುದು ಎಂಬ ನಿರೀಕ್ಷೆ ಇದೆ’ ಎನ್ನುತ್ತಾರೆ ಹೋಟೆಲ್‌ ಮಾಲೀಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌. ಅರುಣ್‌ಕುಮಾರ್‌.

2020ರ ಮಾರ್ಚ್‌ ಅಂತ್ಯದಲ್ಲಿ ಲಾಕ್‌ಡೌನ್‌ ಘೋಷಣೆಯಾದಾಗ ಹೋಟೆಲ್‌ಗಳು ಬಾಗಿಲು ಮುಚ್ಚಿದವು. ಪೂರ್ಣ ಪ್ರಮಾಣದಲ್ಲಿ ಹೋಟೆಲ್‌ ತೆರೆಯಲು ಜುಲೈವರೆಗೂ ಅವಕಾಶ ಸಿಗಲಿಲ್ಲ. ಸಂಕಷ್ಟದ ಸಮಯ ದೂರವಾಗಿ ವಹಿವಾಟು ವೃದ್ಧಿಸುವ ಸಂದರ್ಭದಲ್ಲಿ ಕೋವಿಡ್‌ ಎರಡನೇ ಅಲೆಯ ಆತಂಕ ಶುರುವಾಯಿತು. ಮನೆಯ ಹೊರಗೆ ಊಟ, ತಿಂಡಿ ಸೇವಿಸದಂತಹ ಪರಿಸ್ಥಿತಿ ಸೃಷ್ಟಿಯಾಯಿತು. ಹೋಟೆಲ್‌ಗಳು ಭಣಗುಡುತ್ತಿದ್ದ ಸಂದರ್ಭದಲ್ಲಿಯೇ ಸರ್ಕಾರ ಮತ್ತೊಂದು ಸುತ್ತಿನ ಲಾಕ್‌ಡೌನ್‌ ಘೋಷಣೆ ಮಾಡಿತು. ಅಂದಿನಿಂದ ಅನೇಕ ಹೋಟೆಲ್‌ಗಳು ಬಾಗಿಲು ಮುಚ್ಚಿವೆ.

‘ಜಿಲ್ಲೆಯಲ್ಲಿ ಶೇ 20ರಷ್ಟು ಹೋಟೆಲ್‌ಗಳು ಮಾತ್ರ ಬಾಗಿಲು ತೆರೆದಿವೆ. ಪಾರ್ಸೆಲ್‌ಗಷ್ಟೇ ಅವಕಾಶ ಇರುವುದರಿಂದ ಪರಿಪೂರ್ಣವಾಗಿ ಹೋಟೆಲ್‌ ತೆರೆಯಲು ಸಾಧ್ಯವಾಗುತ್ತಿಲ್ಲ. ಕೆಲವೇ ತಿನಿಸು ಸಿದ್ಧಪಡಿಸುವುದು ಕಷ್ಟವಾಗುತ್ತದೆ. ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚಳವಾಗುತ್ತದೆ. ನಂಬಿಕಸ್ಥ ಗ್ರಾಹಕರನ್ನು ಹೊಂದಿದವರು ಹಾಗೂ ಸಣ್ಣ ಪ್ರಮಾಣದ ಹೋಟೆಲ್‌ಗಳು ಮಾತ್ರವೇ ಬಾಗಿಲು ತೆರೆದಿವೆ’ ಎನ್ನುತ್ತಾರೆ ಅರುಣ್‌ಕುಮಾರ್‌.

ಜಿಲ್ಲೆಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೂ ಜನಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೂ, ದೂರದ ಊರುಗಳಿಂದ ನಗರಕ್ಕೆ ಬರುವವರ ಸಂಖ್ಯೆ ಕಡಿಮೆ ಇದೆ. ಹಳ್ಳಿಯ ಜನರು ನಗರಕ್ಕೆ ಭೇಟಿ ನೀಡಿದರೂ ಮಾರುಕಟ್ಟೆಯ ಕಾರ್ಯ ಮುಗಿದ ತಕ್ಷಣ ಮನೆಗೆ ಮರಳುತ್ತಿದ್ದಾರೆ. ಅಂತರ ಜಿಲ್ಲಾ ಪ್ರವೇಶ ನಿರ್ಬಂಧ, ಬಸ್‌ ಸಂಚಾರಕ್ಕೆ ಅವಕಾಶ ಇಲ್ಲದಿರುವ ಪರಿಣಾಮ ಹೋಟೆಲ್‌ ಗ್ರಾಹಕರಲ್ಲಿ ಏರಿಕೆ ಕಾಣುತ್ತಿಲ್ಲ.

ಹಲವು ನಿರ್ಬಂಧಗಳ ನಡುವೆಯೇ ಮದುವೆ, ಗೃಹ ಪ್ರವೇಶ, ನಾಮಕರಣ, ಜನ್ಮದಿನಾಚರಣೆಯಂತಹ ಶುಭಕಾರ್ಯ ನಡೆಯುತ್ತಿವೆ. ಈ ಸಮಾರಂಭಗಳಿಗೂ ಹಲವು ರೀತಿಯ ನಿರ್ಬಂಧಗಳನ್ನು ವಿಧಿಸಲಾಗಿದೆ. ಶುಭಕಾರ್ಯದಲ್ಲಿ ಸೇರುವ ಅತಿಥಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆ ಆಗಿದೆ. ಕ್ಯಾಟರಿಂಗ್‌ ವಹಿವಾಟು ಕುಸಿದಿದೆ. ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡುವವರ ಪ್ರಮಾಣ ಇಳಿಕೆಯಾಗಿದೆ. ಇದು ಹೋಟೆಲ್‌ ಉದ್ಯಮಕ್ಕೆ ಬಲವಾದ ಏಟು ನೀಡಿದೆ.

ಅನೇಕ ಹೋಟೆಲ್‌ ಹಾಗೂ ವಸತಿ ಗೃಹಗಳು ಸಂಪೂರ್ಣ ಬಾಗಿಲು ಮುಚ್ಚಿವೆ. ಏಪ್ರಿಲ್‌ ಅಂತ್ಯದಿಂದ ಈವರೆಗೆ ಗ್ರಾಹಕರಿಗೆ ಸೇವೆ ಒದಗಿಸಲಿಲ್ಲ. ಕೆಲಸ ಮಾಡುವ ಕಾರ್ಮಿಕರು ಗ್ರಾಮಗಳನ್ನು ಸೇರಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಕಟ್ಟಡದ ಬಾಡಿಗೆ, ವಿದ್ಯುತ್‌ ಶುಲ್ಕ, ನೀರಿನ ಶುಲ್ಕ, ಆಸ್ತಿ ತೆರಿಗೆ ಪಾವತಿಸಬೇಕಿದೆ. ಶುಲ್ಕ ಹಾಗೂ ತೆರಿಗೆ ಪಾವತಿಯಲ್ಲಿ ವಿನಾಯಿತಿ ನೀಡುವಂತೆ ಹೋಟೆಲ್‌ ಮಾಲೀಕರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದಾರೆ. ಇದಕ್ಕೆ ಸರ್ಕಾರಗಳು ಹೇಗೆ ಸ್ಪಂದಿಸಲಿವೆ ಎಂಬುದರ ಆಧಾರದ ಮೇಲೆ ಉದ್ಯಮದ ನಷ್ಟದ ಪ್ರಮಾಣ ನಿರ್ಧಾರವಾಗಲಿದೆ.

ಈ ನಡುವೆ ಊಟ, ತಿಂಡಿಯನ್ನು ಮನೆಬಾಗಿಲಿಗೆ ತಲುಪಿಸುವ ‘ಸ್ವಿಗ್ಗಿ’ ಹಾಗೂ ‘ಜೊಮ್ಯಾಟೊ’ ಸಂಸ್ಥೆಗಳಿಗೆ ಉತ್ತಮ ಪ್ರತಿಸ್ಪಂದನ ಸಿಕ್ಕಿದೆ. ಹೋಟೆಲ್‌ ತಿನಿಸು ಪಾರ್ಸೆಲ್‌ಗೆ ಅವಕಾಶ ಕಲ್ಪಿಸಿದ್ದು, ಆನ್‌ಲೈನ್‌ ವಹಿವಾಟಿಗೆ ಅನುಕೂಲಕರ ಪರಿಸ್ಥಿತಿ ಸೃಷ್ಟಿಸಿತು. ಗ್ರಾಹಕರಿಂದ ಪಡೆದ ಆರ್ಡರ್‌ನ್ನು ಹೋಟೆಲ್‌ಗೆ ತಲುಪಿಸಿ ಸಿದ್ಧಪಡಿಸಿದ ಆಹಾರವನ್ನು ಗ್ರಾಹಕರ ಮನೆಬಾಗಿಲಿಗೆ ಪೂರೈಸಿದರು. ಇದು ಅನೇಕರಿಗೆ ನೆರವಾಗಿದೆ.

ನೆಲದ ಬಾಡಿಗೆ ಕಟ್ಟುವಷ್ಟೂ ಆದಾಯವಿಲ್ಲ

ಹಿರಿಯೂರು: ‘ಹತ್ತು ವರ್ಷಗಳಿಂದ ಡಾಬಾ ನಡೆಸುತ್ತಿದ್ದೇನೆ. ಸ್ವಂತ ಜಮೀನು ಇದ್ದರೂ ಡಾಬಾ ನಡೆಸುವುದು ಬಿಟ್ಟರೆ ಬೇರೆ ಉದ್ಯೋಗ ಗೊತ್ತಿಲ್ಲ. ₹ 13 ಸಾವಿರ ನೆಲ ಬಾಡಿಗೆ ಕೊಡುತ್ತಿದ್ದೇನೆ. ಲಾಕ್‌ಡೌನ್ ಆರಂಭವಾದಾಗಿನಿಂದ ನೆಲದ ಬಾಡಿಗೆಯೂ ಉಳಿಯುತ್ತಿಲ್ಲ. ಏನು ಮಾಡುವುದೆಂದು ತಿಳಿಯದೆ ಪಾರ್ಸೆಲ್ ಸೇವೆ ಮುಂದುವರಿಸಿದ್ದೇನೆ...’

ನಗರದ ಹುಳಿಯಾರು ರಸ್ತೆಯಲ್ಲಿ ಡಾಬಾ ನಡೆಸುತ್ತಿರುವ 30 ವರ್ಷದ ಯುವಕ ಅಕ್ಷಯ್‌ಕುಮಾರ್ ಮಾತುಗಳಿವು. ಕೊರೊನಾ ಸೋಂಕಿನ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿರುವ ಅವರು ಉದ್ಯಮದ ಬಗ್ಗೆ ಮಾತಾಡಿದ್ದಾರೆ.

‘ಕಳೆದ ವರ್ಷ ಒಂದೂವರೆ ತಿಂಗಳು ಡಾಬಾ ಬಂದ್ ಮಾಡಿದ್ದೆವು. ಈ ವರ್ಷ ಪಾರ್ಸೆಲ್ ಸೇವೆಗೆ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶವಿದೆ. ಡಾಬಾ ವ್ಯಾಪಾರ ಆರಂಭವಾಗುವುದೇ ಮಧ್ಯಾಹ್ನ 1 ಗಂಟೆಯ ನಂತರ. ಸಾಮಾನ್ಯ ದಿನಗಳಲ್ಲಿ ನಿತ್ಯ ₹ 12 ಸಾವಿರದಿಂದ ₹ 15 ಸಾವಿರದವರೆಗೆ ವ್ಯಾಪಾರ ಆಗುತ್ತಿತ್ತು. ಈಗ ₹ 2 ಸಾವಿರ ಆದಾಯ ಬರುವುದೂ ಕಷ್ಟ’ ಎನ್ನುತ್ತಾರೆ ಅಕ್ಷಯ್‌ಕುಮಾರ್‌.

ಇಬ್ಬರು ಬಾಣಸಿಗರು, ಇಬ್ಬರು ಸಪ್ಲೇಯರ್‌ ಹಾಗೂ ಒಬ್ಬರು ಕ್ಲೀನರ್ ಇಲ್ಲಿದ್ದಾರೆ. ಸಿಬ್ಬಂದಿಯ ವೇತನಕ್ಕೆ ತಿಂಗಳಿಗೆ ₹ 60 ಸಾವಿರ ಬೇಕು. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ವಿ.ವಿ.ಪುರ ರಸ್ತೆ, ಚಳ್ಳಕೆರೆ ರಸ್ತೆ ಒಳಗೊಂಡಂತೆ 20ಕ್ಕೂ ಹೆಚ್ಚು ಡಾಬಾಗಳಿವೆ. ಎಲ್ಲರದ್ದೂ ಇದೇ ಸ್ಥಿತಿ. ಡಾಬಾ ನಂಬಿಕೊಂಡು 200–250 ಕುಟುಂಬಗಳಿವೆ.

ನ್ಯೂಕೃಷ್ಣ ಡಾಬಾ ಮಾಲೀಕ ನವೀನ್ ಅವರು ಡಾಬಾದ ಉಸ್ತುವಾರಿಯನ್ನು ಸಂಪೂರ್ಣವಾಗಿ ಬಾಣಸಿಗರಿಗೆ ಬಿಟ್ಟಿದ್ದಾರೆ. ಪಾರ್ಸೆಲ್‌ ವ್ಯವಹಾರ ನಡೆಸಿ ಬಾಣಸಿಗರು ಜೀವನ ನಡೆಸುತ್ತಿದ್ದಾರೆ.

‘ರೋಟಿ ಬಿಸಿ ಇದ್ದರೆ ಮಾತ್ರ ತಿನ್ನಲು ರುಚಿ. ಪಾರ್ಸೆಲ್ ತೆಗೆದುಕೊಂಡು ಹೋಗಲು ಗ್ರಾಹಕರು ಇಷ್ಟಪಡುವುದಿಲ್ಲ. ಮೂವರು ಬಾಣಸಿಗರಿಗೆ ಡಾಬಾ ನಡೆಸಿಕೊಂಡು ಹೋಗಲು ಹೇಳಿದ್ದೇನೆ. ₹ 18 ಸಾವಿರ ಮಾಸಿಕ ನೆಲ ಬಾಡಿಗೆ ನಾನೇ ಕಟ್ಟುತ್ತಿದ್ದೇನೆ. 20 ವರ್ಷದ ಡಾಬಾ ಬದುಕಿನಲ್ಲಿ ಇಂತಹ ಕಷ್ಟವನ್ನು ಎದುರಿಸಿರಲಿಲ್ಲ’ ಎನ್ನುತ್ತಾರೆ ನವೀನ್‌. 

ಗ್ರಾಹಕರ ಕೈಗೆ ಬಿಸಿ ಬಿಸಿ ಆಹಾರ

ಚಳ್ಳಕೆರೆ: ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿರುವ ಉಡುಪಿ ಗಾರ್ಡನ್ ಹೋಟೆಲ್, ಲಾಕ್‍ಡೌನ್ ಜಾರಿಯಾದಾಗಿನಿಂದ ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಶುಚಿ ಹಾಗೂ ರುಚಿಕರ ತಿಂಡಿ, ಊಟವನ್ನು ಗ್ರಾಹಕರಿಗೆ ತಲುಪಿಸಿ ಯಶಸ್ಸು ಕಂಡಿದೆ.

ಉಡುಪಿ ಹಾಗೂ ಉತ್ತರ ಭಾರತದವರು ಸೇರಿ ಆರು ಜನರು ಹೋಟೆಲ್‍ನಲ್ಲಿ ಅಡುಗೆ ತಯಾರಿಸುತ್ತಾರೆ. ರೈತರಿಂದ ಖರೀದಿಸಿದ ಸೊಪ್ಪು, ತರಕಾರಿಗಳನ್ನು ಶುದ್ಧ ನೀರಿನಲ್ಲಿ ತೊಳೆದು ಶುಚಿಗೊಳಿಸುತ್ತಾರೆ. ಗುಣಮಟ್ಟದ ಶೇಂಗಾ ಎಣ್ಣೆ ಮತ್ತು ಅಕ್ಕಿಯಿಂದ ತಯಾರಿಸಿದ ರೈಸ್‍ ಭಾತ್, ಟೊಮೊಟೊ ಭಾತ್, ನಿಂಬುರೈಸ್, ಘೀ ರೈಸ್‌-ಜೀರಾ ರೈಸ್, ಪಾಲಕ್‍ ರೈಸ್ ಮುಂತಾದ ತಿಂಡಿಗಳನ್ನು ಬೇಡಿಕೆಗೆ ಅನುಗುಣವಾಗಿ ತಯಾರಿಸುತ್ತಾರೆ.

ಮಾಂಸಾಹಾರ, ಹೈದರಾಬಾದ್ ಧಮ್‌ ಬಿರಿಯಾನಿ, ಮೊಟ್ಟೆ ಖಾದ್ಯವನ್ನು ರುಚಿಕರವಾಗಿ ನೀಡುತ್ತಾರೆ. ಗ್ರಾಹಕರಿಂದ ದೂರವಾಣಿ ಮೂಲಕ ಮೊದಲೇ ಪಡೆದ ಆರ್ಡರ್‌ಗೆ ವಾಹನದಲ್ಲಿ ತಲುಪಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಅನೇಕರು ಈ ಸೇವೆ ಪಡೆದಿದ್ದಾರೆ. ಸರ್ಕಾರ ಆಹಾರ ವಿತರಣೆಗೆ ಅನುಮತಿ ನೀಡಿದ್ದರಿಂದ ಪರ್ಯಾಯ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದರಿಂದ ಅಡುಗೆ ಸಿಬ್ಬಂದಿಗೂ ಕೆಲಸ ದೊರೆತಿದೆ.

‘ಕೊರೊನಾ ಸೋಂಕಿನ ಭೀತಿಯಿಂದ ನಗರದಲ್ಲಿ ಬಹುತೇಕ ಹೋಟೆಲ್‌ಗಳು ಸಂಪೂರ್ಣವಾಗಿ ಬಾಗಿಲು ಮುಚ್ಚಿದ್ದವು. ಹಸಿವಿನಿಂದ ಪರದಾಡುವ ಅನೇಕ ಗ್ರಾಹಕರನ್ನು ನಾವು ಕಂಡೆವು. ಅವರ ಹಸಿವು ನೀಗಿಸುವ ಉದ್ದೇಶದಿಂದ ನಿತ್ಯ ಹೋಟೆಲ್‍ನಲ್ಲಿ ಆಹಾರ ತಯಾರಿಸಿ ವಿತರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡೆವು. ದೂರದ ಊರುಗಳಿಂದ ಬಂದು ಕಚೇರಿಯಲ್ಲಿ ಕೆಲಸ ನಿರ್ವಹಿಸುವ ನೌಕರರು, ಬ್ಯಾಂಕ್ ಸಿಬ್ಬಂದಿ, ಕಾರ್ಮಿಕರಿಗೆ ಅನುಕೂಲವಾಯಿತು’ ಎನ್ನುತ್ತಾರೆ ಮಾಲೀಕ ಜಯಪ್ರಕಾಶ್‍ ಶೆಟ್ಟಿ.

 ಮಾಲೀಕರ ಬೇಡಿಕೆ ಏನು: 
ಲಾಕ್‌ಡೌನ್‌ ಅವಧಿಯ ವಿದ್ಯುತ್‌, ನೀರಿನ ಶುಲ್ಕಕ್ಕೆ ವಿನಾಯಿತಿ ನೀಡಿ

ಜಿಎಸ್‌ಟಿ, ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ಘೋಷಣೆ ಮಾಡಿ

ಬ್ಯಾಂಕ್‌ಗಳಿಂದ ಪಡೆದ ಸಾಲ ಮನ್ನಾ ಅಥವಾ ಮರುಪಾವತಿ ಅವಧಿ ವಿಸ್ತರಿಸಿ

ಕಾರ್ಮಿಕರ ಇಎಸ್‌ಐ, ಪಿಎಫ್‌ ಸರ್ಕಾರವೇ ಭರಿಸಿದರೆ ಅನುಕೂಲ

ಹೋಟೆಲ್‌ ಉದ್ಯಮ ಉತ್ತೇಜಿಸಲು ವಿಶೇಷ ಪ್ಯಾಕೇಜ್‌ ಘೋಷಿಸಿ

ಅಸಂಘಟಿತ ಕಾರ್ಮಿಕರ ಹಿತ ಕಾಪಾಡುವ ಯೋಜನೆ ರೂಪಿಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು