ಗುರುವಾರ , ಡಿಸೆಂಬರ್ 5, 2019
19 °C
ಕಾಡುಗೊಲ್ಲರ ಕುರಿಗಾಹಿ ಶರಣ ವೀರಚಿಕ್ಕಣ್ಣ

ಚಿತ್ರದುರ್ಗ: ಬುಡಕಟ್ಟು ಸಮುದಾಯದ ಆರಾಧ್ಯ ದೈವ

ಶಿವಗಂಗಾ ಚಿತ್ತಯ್ಯ Updated:

ಅಕ್ಷರ ಗಾತ್ರ : | |

Prajavani

ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯ ಬಯಲು ಸೀಮೆಯ ಕಾವಲುಗಳಲ್ಲಿ ಕಾಡು ಮತ್ತು ಸಾಕುಪ್ರಾಣಿಗಳ ನಡುವೆ ಸಾಮರಸ್ಯವನ್ನು ಕಾಪಾಡಲು ಯತ್ನಿಸಿದ; ಭೂತ, ಭವಿಷ್ಯದ ಘಟನೆಗಳ ಬಗ್ಗೆ ಕಂಡವರಂತೆ ನುಡಿಯುತ್ತ, ಹಲವು ಪವಾಡಗಳನ್ನು ಮಾಡಿ ತೋಳದ ಜತೆ ಹೋರಾಡಿ ಮಡಿದು ಹೋದ ಕಾಡುಗೊಲ್ಲ ಬುಡಕಟ್ಟು ಸಮುದಾಯದ ಆರಾಧ್ಯ ದೈವ ಕುರಿಗಾಹಿ ಶರಣ ವೀರಚಿಕ್ಕಣ್ಣ.

ಇವರು ಚಿಕ್ಕಂದಿನಲ್ಲೇ ತಂದೆ-ತಾಯಿಯನ್ನು ತೊರೆದು ಹಲ್ಲುಗಾವಲುಗಳಲ್ಲಿ ಕುರಿ, ಮೇಕೆ ಹಾಗೂ ದನಗಳನ್ನು ಕಾಯುತ್ತ ಮೂಡಲ ಸೀಮೆಯಿಂದ ತಾಲ್ಲೂಕಿನ ಸಾಣೀಕೆರೆ ಬಡವನಹಳ್ಳಿ ಕಾವಲಿಗೆ ಬಂದು ಇಲ್ಲಿಯೇ ನೆಲೆಯೂರಿ ತಮ್ಮ ಕಾಯಕ ನಿಷ್ಠೆಯನ್ನು ಮೆರೆದರು.

ಇವರು ಪ್ರಾಣಿ ಸಂಕುಲಗಳ ಮೇಲಿನ ಪ್ರೀತಿಗಾಗಿ ಹುಲ್ಲುಗಾವಲುಗಳಲ್ಲಿ ಕಾಡುಪ್ರಾಣಿಗಳಾದ ತೋಳ, ನಾಯಿ, ನರಿ, ಜಿಂಕೆ ಮರಿಗಳನ್ನು ಸಾಕುಪ್ರಾಣಿಗಳಾದ ಕುರಿ, ಮೇಕೆ ಮತ್ತು ದನಗಳನ್ನು ಜೊತೆಯಲ್ಲೇ ಸಾಕುವ ಮೂಲಕ ಅವುಗಳ ನಡುವೆ ಬಾಂಧವ್ಯ ಬೆಸೆದ ಶರಣರು.

ಬೆಳಿಗ್ಗೆಯೇ ಮಡಿಯಾಗಿ ಶಿವ ಪೂಜೆ ಮುಗಿಸಿ ಜೆನಿಗೆ ಹಿಡಿದು ಸಾಕುಮರಿಗಳಿಗೆ ಸೊಪ್ಪು, ಹುಲ್ಲು ನೀರು ಒದಗಿಸಿ ಅವುಗಳ ಆರೈಕೆ ಮಾಡುವ ನಿತ್ಯ ಕಾಯಕ ಕುರಿಗಾಹಿ ವೀರಚಿಕ್ಕಣ್ಣ ಅವರದು. ತಮ್ಮ ನಾಲಗೆಗೆ ಉಪ್ಪು, ಹುಳಿ ಹಾಗೂ ಖಾರದ ರುಚಿಯನ್ನು ತೋರಿಸದೇ ತಾವೇ ತೋಡಿದ ಹಳ್ಳದ (ಚಿಲುಮೆ) ಒರತೆ ನೀರನ್ನೇ ಕುಡಿಯುತ್ತ, ಬೆಲ್ಲದನ್ನಕ್ಕೆ ಹಾಲು ಬೆರೆಸಿ ಹುಗ್ಗಿ (ಹಾಲುಗ್ಗಿ)ಯ ಅಂಬಲಿ ತಯಾರಿಸಿಕೊಂಡು ನಿತ್ಯ ಸಾತ್ವಿಕ ಆಹಾರವನ್ನು ಸೇವಿಸುವುದು ಅವರಿಗೆ ರೂಢಿಯಾಗಿತ್ತು.

ಅಪ್ಪಟ ಮಡಿವಂತಿಕೆಯ ಶರಣರಾಗಿ ಶಿವಭಕ್ತಿಯ ಜೊತೆ ಕುರಿ, ಮೇಕೆ ಹಾಗೂ ದನಗಳನ್ನು ಕಾಯುವ ಮೂಲಕ ಹಸಿರು ಕಾಡಿನ ಕಾಳಜಿ, ಪ್ರಾಣಿಗಳ ಮೇಲೆ ಅತೀವ ಪ್ರೀತಿ ಇರಿಸಿಕೊಂಡಿರುವುದನ್ನು ಅವರ ಬಗೆಗಿನ ಜನಪದರು ಕಟ್ಟಿರುವ ಕಥನಗಳಲ್ಲಿ ಕಾಣಬಹುದು ಎಂದು ಬರಹಗಾರ ಸಾಣಿಕೆರೆ ರಘು ಹೇಳಿದರು.

ವೀರಚಿಕ್ಕಣ್ಣನ ಗುಡಿ: ತಾಲ್ಲೂಕಿನ ಸಾಣೀಕೆರೆ ಮತ್ತು ಗೋಪನಹಳ್ಳಿ ಗ್ರಾಮದ ಮಧ್ಯದ (ಹೊಲಮಾರು) ಎಡ ಭಾಗದ ಪ್ರದೇಶದಲ್ಲಿ ಕುರಿಗಾಹಿ ವೀರಚಿಕ್ಕಣ್ಣ ಅವರು ತೋಳದ ಜೊತೆ ಹೋರಾಡಿ ಮಡಿದಿದ್ದು, ಅಲ್ಲೇ ಸಮಾಧಿಯ ಜೊತೆ ಮಣ್ಣಿನ ಗುಡಿ ನಿರ್ಮಿಸಲಾಗಿದೆ.

ಕಂದಕದ ರೂಪದಲ್ಲಿ ಕಂಡುಬರುವ ಗರ್ಭಗುಡಿಯ ಒಳ ಭಾಗದಲ್ಲಿ 3.5 ಅಡಿ ಎತ್ತರ ಮತ್ತು 2.5 ಅಡಿ ಅಗಲದ ಅರ್ಧ ಚಂದ್ರಾಕೃತಿಯ ಕಪ್ಪುಬಣ್ಣದ ವೀರಗಲ್ಲು ನೆಡಲಾಗಿದೆ.

ವೀರಗಲ್ಲು: ಕಲ್ಲಿನ ಮೇಲ್ಭಾಗದ ಮಧ್ಯೆ ಶಿವಲಿಂಗ. ಎಡ ಮತ್ತು ಬಲ ಭಾಗದಲ್ಲಿ ನಂದಿ, ನಾಯಿ, ನರಿ, ಕುರಿ, ಮೇಕೆ, ದನಗಳ ಚಿತ್ರ ಮತ್ತು ಜಡೆಗಟ್ಟಿದ ತಲೆಗೂದಲು, ಸೊಂಟಕ್ಕೆ ಕಚ್ಚೆ ಸುತ್ತಿ, ಕಾಲಿಗೆ ಕಡಗ ಹಾಕಿ ಎಡಗೈಯಲ್ಲಿ ಕೋಲು ಹಿಡಿದು ನಿಂತಿರುವ ವೀರ. ಅವರ ಮೇಲೆ ಎರಗಲು ರೋಷದಿಂದ ಯತ್ನಿಸಿದ ತೋಳವನ್ನು ಬಲಗೈ ಭರ್ಚಿಯಿಂದ ಇರಿಯುತ್ತಿರುವ ಚಿತ್ರಗಳನ್ನು ವೀರಗಲ್ಲಿನಲ್ಲಿ
ಕೆತ್ತಲಾಗಿದೆ.

ಕಲ್ಲುಗಳ ಸುಳಿದಾರಿ: ಮಹಾ ಭಾರತದ ಚಕ್ರವ್ಯೂಹವನ್ನು ನೆನಪಿಸುವ ಹಿಡಿಗಲ್ಲುಗಳಿಂದಲೇ ರಚಿತವಾದ ತಂತ್ರಗಾರಿಕೆಯ ಕಲಾತ್ಮಕ ಚಿತ್ರವಿದೆ. ಈ ವೃತ್ತಾಕಾರದ ರಚನೆಯನ್ನು ಇಲ್ಲಿಯ ಜನ ಏಳು ಸುತ್ತಿನಕೋಟೆ ಎಂತಲೂ ಕರೆಯುತ್ತಾರೆ.

ವಿಶಿಷ್ಟ ಆಚರಣೆ: ವೀರಚಿಕ್ಕಣ್ಣ ಅವರನ್ನು ಸಾಂಸ್ಕೃತಿಕ ವೀರನನ್ನಾಗಿ ಆರಾಧಿಸುತ್ತಿರುವ ಕಾಡುಗೊಲ್ಲರು, ಪ್ರತಿ ಮುಂಗಾರು ಆರಂಭದಲ್ಲಿ ಅವರ ಗುಡಿಗೆ ಹೋಗಿ ಮೀಸಲು ಹಾಲು ಮತ್ತು ಮೊಸರಿನ ನೈವೇದ್ಯ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸುತ್ತಾರೆ. ಕುರಿ, ದನಗಳನ್ನು ಗುಡಿಯ ಸುತ್ತಲೂ 3 ಸುತ್ತು ಹಾಕಿಸುತ್ತಾರೆ. ಇದರಿಂದ ಕುರಿ, ದನ ಹಾಗೂ ಕರುಗಳಿಗೆ ಯಾವುದೇ ರೋಗ-ರುಜಿನಗಳು ಅಂಟಿಕೊಳ್ಳುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ.

ಹರಕೆ: ಕುರಿ, ದನಗಳಿಗೆ ಉಣ್ಣೆ ಬಿದ್ದಾಗ, ಹಾವು, ಚೇಳು ಕಾಣಿಸಿಕೊಂಡಾಗ ಮತ್ತು ಬದುಕಿನ ಸಂಕಷ್ಟಗಳ ನಿವಾರಣೆಗಾಗಿ ಮಾಡಿಕೊಂಡ ಹರಕೆಗಳನ್ನು ಭಕ್ತರು ತೀರಿಸುತ್ತಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು