ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ವಿದ್ಯುದ್ದೀಪದ ಬೆಳಕಿಗೆ ಕಾಯುತ್ತಿದೆ ಗ್ರಾಮ!

ಚಿತ್ರದುರ್ಗ ತಾಲ್ಲೂಕಿನ ಯರೇಹಳ್ಳಿಗೆ ಸಿಗದ ಅಧಿಕೃತ ಸಂಪರ್ಕ
Last Updated 2 ಮಾರ್ಚ್ 2023, 3:08 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಧಿಕೃತ ವಿದ್ಯುತ್‌ ಸಂಪರ್ಕ ಪಡೆಯಲು ಸಾಧ್ಯವಾಗದೇ ತಾಲ್ಲೂಕಿನ ಯರೇಹಳ್ಳಿ ಗ್ರಾಮಸ್ಥರು ತೊಳಲಾಡುತ್ತಿದ್ದಾರೆ. ಕೃಷಿ ಪಂಪ್‌ಸೆಟ್‌ಗೆ ಪೂರೈಕೆಯಾಗುವ ವಿದ್ಯುತ್‌ನಲ್ಲಿಯೇ ಹಳ್ಳಿ ಒಂದಷ್ಟು ಬೆಳಕು ಕಾಣುತ್ತಿದೆ. ನಿರಂತರ ವಿದ್ಯುತ್‌ ಪೂರೈಕೆಗೆ ಗ್ರಾಮಸ್ಥರು ಹೋರಾಟ ನಡೆಸಿ ಅಸಹಾಯಕತೆಗೆ ಶರಣಾಗಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಇಂಗಳದಾಳ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರೇಹಳ್ಳಿ, ಜಿಲ್ಲಾ ಕೇಂದ್ರದಿಂದ 35 ಕಿ.ಮೀ ದೂರದಲ್ಲಿದೆ. ಈ ಗ್ರಾಮದಲ್ಲಿ ರಾತ್ರಿ ವೇಳೆ ವಿದ್ಯುತ್ ದೀಪ ಬೆಳಗುವುದು ಮೂರು ಗಂಟೆ ಮಾತ್ರ. ಬ್ಯಾಟರಿ, ಎಣ್ಣೆಯ ದೀಪಗಳನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ.

ಗ್ರಾಮದಲ್ಲಿ 150ಕ್ಕೂ ಹೆಚ್ಚು ಮನೆಗಳಿವೆ. ಕೃಷಿ, ಕುರಿ ಸಾಕಾಣಿಕೆ ಇಲ್ಲಿನ ಜನರ ಮೂಲ ಕಸುಬು. ಜೋಗಿಮಟ್ಟಿ ಅರಣ್ಯದ ಮಡಿಲಿನಲ್ಲಿ ಚಾಚಿಕೊಂಡಿರುವ ಈ ಗ್ರಾಮ ಬೆಟ್ಟ–ಗುಡ್ಡಗಳಿಂದ ಆವರಿಸಿಕೊಂಡಿದೆ. ಚಿತ್ರದುರ್ಗ ತಾಲ್ಲೂಕಿನ ಅಂಚಿನಲ್ಲಿರುವ ಈ ಗ್ರಾಮ 1985ರಲ್ಲಿ ಬೆಂಕಿ ಅವಘಡಕ್ಕೆ ತುತ್ತಾಗಿತ್ತು. ಗುಡಿಸಲು, ಮನೆಗಳು ಭಸ್ಮವಾದ ಬಳಿಕ ಹೊಸ ಗ್ರಾಮ ನಿರ್ಮಾಣವಾಗಿದೆ. ಆದರೆ, ಜನರ ಬದುಕು ಮಾತ್ರ ಹಸನಾಗಿಲ್ಲ. ಶಾಲೆ– ಕಾಲೇಜಿಗೆ ತೆರಳುವ ಗ್ರಾಮದ ವಿದ್ಯಾರ್ಥಿಗಳ ಕಲಿಕೆಗೂ ಇದರಿಂದ ತೀವ್ರ ಸಮಸ್ಯೆ ಎದುರಾಗಿದೆ.

‘ಬೆಂಕಿ ಅವಘಡದಿಂದ ಗ್ರಾಮ ಚೇತರಿಸಿಕೊಳ್ಳಲು ವಿದ್ಯುತ್‌ ಶುಲ್ಕ ಪಾವತಿಯಿಂದ ಸರ್ಕಾರ ವಿನಾಯಿತಿ ನೀಡಿತ್ತು. ಹಲವು ವರ್ಷ ಕಳೆದ ಬಳಿಕ ಅಧಿಕಾರಿಗಳು ವಿದ್ಯುತ್‌ ಬಾಕಿ ವಸೂಲಿಗೆ ಮುಂದಾದರು. ಪ್ರತಿ ಮನೆಗೆ ₹ 20 ಸಾವಿರದಿಂದ ₹ 35 ಸಾವಿರದವರೆಗೆ ವಿದ್ಯುತ್‌ ಬಿಲ್‌ ಬಾಕಿ ಇದೆ ಎಂಬುದಾಗಿ ಬೆಸ್ಕಾಂ ಸಿಬ್ಬಂದಿ ಹೇಳುತ್ತಿದ್ದಾರೆ. ಈ ಬಾಕಿ ಮನ್ನಾ ಮಾಡಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಗ್ರಾಮದ ಮುಖಂಡ ಟಿ.ರಾಮಚಂದ್ರಣ್ಣ.

₹ 9 ಲಕ್ಷ ವಿದ್ಯುತ್‌ ಬಾಕಿ:ಗ್ರಾಮಕ್ಕೆ ಅಧಿಕೃತವಾಗಿ ವಿದ್ಯುತ್‌ ಪೂರೈಕೆ ಆಗುತ್ತಿಲ್ಲ. ಕುಡಿಯುವ ನೀರಿನ ಪೂರೈಕೆಗೆ ಗ್ರಾಮ ಪಂಚಾಯಿತಿ ಅಳವಡಿಸಿದ ವಿದ್ಯುತ್‌ ಪರಿವರ್ತಕದಿಂದ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಳ್ಳಲಾಗಿದೆ. ಕೆಲ ಬೀದಿಗಳಲ್ಲಿ ವಿದ್ಯುತ್‌ ಕಂಬಗಳನ್ನೂ ಅಳವಡಿಸಿಲ್ಲ. ಟಿ.ವಿ.ಗೆ ಸಂಪರ್ಕ ಕಲ್ಪಿಸುವ ಕೇಬಲ್‌ ಮಾದರಿಯಲ್ಲಿ ವಿದ್ಯುತ್‌ ಕೇಬಲ್‌ಗಳನ್ನು ಗ್ರಾಮಸ್ಥರು ಎಳೆದುಕೊಂಡಿದ್ದಾರೆ. ಹಗಲು 4 ಗಂಟೆ ಹಾಗೂ ರಾತ್ರಿ 3 ಗಂಟೆ ಮಾತ್ರ ಈ ಗ್ರಾಮ ವಿದ್ಯುತ್‌ ಬೆಳಕು ಕಾಣುತ್ತಿದೆ.

ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವುದು ಸುಮಾರು ₹ 9 ಲಕ್ಷದಷ್ಟಾಗಿದೆ. ಅಂತೆಯೇ ಅಧಿಕೃತ ವಿದ್ಯುತ್‌ ಪೂರೈಕೆಗೆ ಬೆಸ್ಕಾಂ ಆಸಕ್ತಿ ತೋರುತ್ತಿಲ್ಲ. ಬಾಕಿ ಮೊತ್ತವನ್ನು ಪಾವತಿಸುವಂತೆ ಗ್ರಾಮಸ್ಥರಿಗೆ ಒತ್ತಡ ಹೇರಲಾಗುತ್ತಿದೆ. ಇದರಿಂದ ವಿದ್ಯುತ್‌ಗೆ ಸಂಬಂಧಿಸಿದ ಹೊಸ ಯೋಜನೆಗಳು ಇಲ್ಲಿ ಅನುಷ್ಠಾನಕ್ಕೆ ಬರುತ್ತಿಲ್ಲ. ಜಿಲ್ಲೆಯ ಪ್ರತಿ ಗ್ರಾಮಕ್ಕೂ ನಿರಂತರ ವಿದ್ಯುತ್‌ ಪೂರೈಕೆ ಮಾಡುತ್ತಿದ್ದರೂ ಈ ಗ್ರಾಮ ಮಾತ್ರ ಇನ್ನೂ ಕತ್ತಲಲ್ಲೇ ಉಳಿದಿದೆ.

ತಾಲ್ಲೂಕು ಸರಹದ್ದು ಸಮಸ್ಯೆ

ಯರೇಹಳ್ಳಿ ಚಿತ್ರದುರ್ಗ ತಾಲ್ಲೂಕಿನಲ್ಲಿದ್ದರೂ ಹಿರಿಯೂರು ತಾಲ್ಲೂಕಿನ ಐಮಂಗಲದಿಂದ ವಿದ್ಯುತ್ ಪೂರೈಕೆ ಆಗುತ್ತಿದೆ. ವಿದ್ಯುತ್‌ ನಿರ್ವಹಣೆಯ ಹೊಣೆಯನ್ನು ಹಿರಿಯೂರು ಉಪವಿಭಾಗ ನಿರ್ವಹಿಸುತ್ತಿದೆ. ಹೊಸ ವಿದ್ಯುತ್‌ ಮಾರ್ಗ ನಿರ್ಮಿಸಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವುದು ಕಷ್ಟವಾಗುತ್ತಿದೆ. ಚಿತ್ರದುರ್ಗ ಉಪವಿಭಾಗಕ್ಕೆ ಗ್ರಾಮವನ್ನು ವರ್ಗಾಯಿಸಲು ಪ್ರಯತ್ನಿಸಲಾಗುತ್ತಿದೆ. ವಿದ್ಯುತ್‌ ಬಿಲ್‌ ಬಾಕಿ ಇರುವುದರಿಂದ ಇಲಾಖೆಯಲ್ಲಿ ಇದಕ್ಕೆ ಅನುಮತಿ ಸಿಗುತ್ತಿಲ್ಲ.

‘ನಿರಂತರ ಜ್ಯೋತಿ ವಿದ್ಯುತ್‌ ಯೋಜನೆ 2016ಕ್ಕೆ ಸ್ಥಗಿತಗೊಂಡಿದೆ. ವಿದ್ಯುತ್‌ ಬಿಲ್‌ ಬಾಕಿ ಇರುವುದರಿಂದ ಹೊಸ ಯೋಜನೆಯನ್ನು ಗ್ರಾಮಕ್ಕೆ ಜಾರಿಗೊಳಿಸಲು ಸಾಧ್ಯವಾಗಲಿಲ್ಲ. ಇಂತಹ ಯೋಜನೆ ಇಲ್ಲದಿರುವುದರಿಂದ ಹೊಸ ವಿದ್ಯುತ್‌ ಮಾರ್ಗ ನಿರ್ಮಾಣ ಬೆಸ್ಕಾಂಗೆ ದುಬಾರಿ ಆಗಲಿದೆ’ ಎನ್ನುತ್ತಾರೆ ಅಧಿಕಾರಿಗಳು.

ಮೊಬೈಲ್‌ ಫೋನ್‌ ಸಂಪರ್ಕವೂ ಇಲ್ಲ

ಯರೇಹಳ್ಳಿ ಮೂಲಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ. ರಸ್ತೆ, ಶುದ್ಧ ಕುಡಿಯುವ ನೀರು ಸೇರಿ ಯಾವುದೇ ಸೌಲಭ್ಯಗಳು ಸರಿಯಾಗಿಲ್ಲ. ಮೊಬೈಲ್‌ ಫೋನ್‌ ಸಂಪರ್ಕವೂ ಸಿಗದೇ ಗ್ರಾಮಸ್ಥರು ಪರಿತಪಿಸುತ್ತಿದ್ದಾರೆ.

ಗ್ರಾಮದ ಎಲ್ಲ ಮನೆಯಲ್ಲಿ ಮೊಬೈಲ್‌ ಫೋನ್‌ಗಳಿವೆ. ನೆಟ್‌ವರ್ಕ್‌ ಸಮಸ್ಯೆಯಿಂದ ಸಂಪರ್ಕ ಮಾತ್ರ ಸಿಗುವುದಿಲ್ಲ. ಮೊಬೈಲ್‌ ಫೋನ್‌ನಲ್ಲಿ ಮಾತನಾಡಲು ಗ್ರಾಮಸ್ಥರು ಬೆಟ್ಟದ ಪ್ರದೇಶಕ್ಕೆ ತೆರಳಬೇಕು. ಗ್ರಾಮದ ಹೊರಗೆ ಬಂದು ಸಂವಹನ ನಡೆಸಬೇಕು.

‘ಬೆಳೆ ಸಮೀಕ್ಷೆಗೆ ಸಾಕಷ್ಟು ತೊಂದರೆಯಾಗಿದೆ. ಬೆಳೆಯ ಫೋಟೊ ತೆಗೆದು ಮೊಬೈಲ್‌ ಫೋನ್‌ ನೆಟ್‌ವರ್ಕ್‌ ಸಿಗುವ ಜಾಗದಲ್ಲಿ ಅಪ್ಲೋಡ್‌ ಮಾಡಬೇಕಿದೆ. ಅಡುಗೆ ಅನಿಲವನ್ನು ಮೊಬೈಲ್‌ ಫೋನ್‌ ಮೂಲಕ ತರಿಸಿಕೊಳ್ಳಲು ಪರದಾಡಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಟಿ.ರಾಮಚಂದ್ರಣ್ಣ.

**

ನಿರಂತರವಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಲು ವಿದ್ಯುತ್‌ ಮಾರ್ಗ ಮೇಲ್ದರ್ಜೆಗೆ ಏರಿಸಬೇಕಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವ ಸಲ್ಲಿಕೆಯಾಗಿದ್ದು, ಶೀಘ್ರ ವಿದ್ಯುತ್‌ ಪೂರೈಕೆ ಮಾಡಲಾಗುವುದು.

ಪೀರ್‌ಸಾಬ್‌, ಎಇಇ, ಹಿರಿಯೂರು ಉಪವಿಭಾಗ

ಸಂಜೆ 6ರಿಂದ ರಾತ್ರಿ 9ರವರೆಗೆ ಮಾತ್ರ ವಿದ್ಯುತ್‌. ರಾತ್ರಿ ಉಳಿದ ಸಮಯವನ್ನು ಕತ್ತಲಲ್ಲಿಯೇ ಕಳೆಯಬೇಕು. ನಿರಂತರ ವಿದ್ಯುತ್‌ ಪೂರೈಸಿದರೆ ಬಿಲ್‌ ಪಾವತಿಸುತ್ತೇವೆ, ಬಾಕಿ ನೀಡುವುದಿಲ್ಲ.

-ಲಕ್ಷ್ಮಿದೇವಿ, ಗ್ರಾಮಸ್ಥೆ, ಯರೇಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT