ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯತ್ನಾಳ್‌ ಹೇಳಿಕೆಗೆ ಚಿಂತಕರಿಂದ ಖಂಡನೆ

Last Updated 28 ಫೆಬ್ರುವರಿ 2020, 9:53 IST
ಅಕ್ಷರ ಗಾತ್ರ

ಚಿತ್ರದುರ್ಗ: ನಾಡಿನ ಸಾಕ್ಷಿಪ್ರಜ್ಞೆ, ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ, ಜನಪರ ಚಳವಳಿಗಳ ಒಡನಾಡಿ ಎಚ್.ಎಸ್. ದೊರೆಸ್ವಾಮಿ ಅವರ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಜಿಲ್ಲೆಯ ಸಾಮಾಜಿಕ ಚಿಂತಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ವಿಜಯಪುರದಲ್ಲಿ ಈಚೆಗೆ ನಡೆದ ಸಭೆಯೊಂದರಲ್ಲಿ ಶಾಸಕ ಯತ್ನಾಳ್, ಸಂದರ್ಭವೇ ಇಲ್ಲದಿದ್ದರೂ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಕುರಿತು ಪ್ರಸ್ತಾಪಿಸಿ, ಅತ್ಯಂತ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ನಾವೆಲ್ಲರೂ ವಿರೋಧಿಸುತ್ತೇವೆ’ ಎಂದು ಹೇಳಿದ್ದಾರೆ.

‘ಜನಪ್ರತಿನಿಧಿಯೊಬ್ಬರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಹಾಗೂ ಜನಪರ ದನಿಯಾಗಿರುವ ಹಿರಿಯರೊಬ್ಬರ ಕುರಿತು ಇಂತಹ ಹಗುರ ಹೇಳಿಕೆ ನೀಡಿ, ಅವರ ಸಾರ್ವಜನಿಕ ಬದ್ಧತೆ ಅಳ್ಳಕಗೊಳಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ದೊರೆಸ್ವಾಮಿ ಕರ್ನಾಟಕ ಮಾತ್ರವಲ್ಲ, ಈ ದೇಶದ ಆಸ್ತಿ.‌ ಅವರ ಕುರಿತು ಯಾವುದೇ ಉತ್ತಮ ಕೆಲಸ ಮಾಡಿರದ, ಜನರ ಪರವಾದ ಚಿಂತನೆಯಾಗಲಿ, ಕ್ರಿಯೆಯಾಗಲಿ ಇಲ್ಲದ ವ್ಯಕ್ತಿ ಈ ರೀತಿಯ ಮಾತುಗಳನ್ನಾಡುವುದು ಅತ್ಯಂತ ಆಕ್ಷೇಪಾರ್ಹ. ಅವರನ್ನು ಏಕವಚನದಲ್ಲಿ ಮಾತನಾಡಿರುವುದು ಕನ್ನಡಿಗರಾದ ನಮ್ಮೆಲ್ಲರಲ್ಲಿ ಅಪಾರ ಆಕ್ರೋಶ ಹುಟ್ಟಿಸಿದೆ’ ಎಂದು ಅವರು ತಿಳಿಸಿದ್ದಾರೆ.

‘ಸ್ವಾತಂತ್ರ್ಯ ಚಳವಳಿಯಲ್ಲಿ ದೊರೆಸ್ವಾಮಿ ಅವರ ಪಾತ್ರವೇನು ಎಂಬ ಕುರಿತು ಅಧಿಕೃತ ದಾಖಲೆಗಳು ಲಭ್ಯವಿವೆ. ಒಂದು ಸುಂದರ, ಸಮಾನ, ಸಹಬಾಳ್ವೆಯ ಭಾರತ ಕಟ್ಟುವ ಕನಸನ್ನಿಟ್ಟುಕೊಂಡು ನಿರಂತರವಾಗಿ ಶ್ರಮಿಸುತ್ತ ಬಂದ ಅಪರೂಪದ ಗಾಂಧಿವಾದಿ ಹೋರಾಟಗಾರರೂ ಹೌದು. ಆದರೆ, ಯತ್ನಾಳರ ಹೊಣೆಗೇಡಿ ಹೇಳಿಕೆಯಿಂದಾಗಿ ದೊರೆಸ್ವಾಮಿ ಅವರಿಗೆ ಮಾತ್ರವಲ್ಲ, ಇಡೀ ಸ್ವಾತಂತ್ರ್ಯ ಚಳವಳಿಗೇ ಬಗೆದ ಅಪಚಾರವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಯತ್ನಾಳರಿಗಾಗಲಿ ಅವರ ಪಕ್ಷಕ್ಕಾಗಲಿ ಸ್ವಾತಂತ್ರ್ಯ ಚಳವಳಿಯ ಗಂಧಗಾಳಿ ಗೊತ್ತಿಲ್ಲ. ಸಿಎಎ, ಎನ್‌ಪಿಆರ್, ಎನ್‌ಆರ್‌ಸಿಯಂತಹ ಜೀವವಿರೋಧಿತನ ವಿರೋಧಿಸುವವರ ಮೇಲೆ ದಾಳಿ ಮಾಡುತ್ತಿದ್ದಾರೆ. ಸ್ವತಂತ್ರ ಚಿಂತನೆಗೆ ಬೆದರಿಕೆ ಒಡ್ಡುವ ಮೂಲಕ ಅಪ್ರಜಾತಾಂತ್ರಿಕ ನಿಲುವು ತಾಳಿದ್ದಾರೆ. ಇದಕ್ಕಾಗಿ ಸರ್ಕಾರ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಕವಿಗಳು, ಪತ್ರಕರ್ತರು, ಶಿಕ್ಷಕರು, ಹೋರಾಟಗಾರರು, ಸಾರ್ವಜನಿಕರು ಸೇರಿ ಎಲ್ಲರ ಮೇಲೆ ದೇಶದ್ರೋಹದ ಆರೋಪ ಹೊರಿಸುತ್ತ ಬಂಧಿಸಲಾಗುತ್ತಿದೆ’ ಎಂದು ವಿಷಾದಿಸಿದ್ದಾರೆ.

‘ಕೂಡಲೇ ಶಾಸಕ ಯತ್ನಾಳ್ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕು.ದೊರೆಸ್ವಾಮಿ ಕುರಿತು ‘ಗುಂಡಿಗೆ ಬಲಿಯಾಗುತ್ತಾನೆ’ ಎಂಬ ಹೇಳಿಕೆಯನ್ನು ಕೊಲೆಗೆ ಪ್ರಚೋದನೆ ನೀಡಿದ ಆರೋಪದಡಿ ಕ್ರಮ ಜರುಗಿಸಬೇಕು. ಇದರ ಹೊಣೆ ಹೊತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು’ಎಂದು ಕಾದಂಬರಿಕಾರ ಡಾ.ಬಿ.ಎಲ್. ವೇಣು, ಪ್ರೊ.ಎಚ್. ಲಿಂಗಪ್ಪ, ರೈತ ಮುಖಂಡ ನುಲೇನೂರು ಶಂಕರಪ್ಪ, ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜನಪ್ಪ, ಡಾ.ಸಿ. ಶಿವಲಿಂಗಪ್ಪ, ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಡಿ.ಸುರೇಶ್ ಬಾಬು, ಪ್ರೊ. ಚಂದ್ರಶೇಖರ ತಾಳ್ಯ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT