ತಿಮ್ಮಣ್ಣನಾಯಕನ ಕೆರೆ; ಸ್ವಚ್ಛತಾ ಕಾರ್ಯಕ್ಕೆ ಚಾಲನೆ

7
ಸಂಘ ಸಂಸ್ಥೆ, ನಾಗರಿಕರ ನೆರವಿಗೂ ಮಾನವ ಬಂಧುತ್ವ ವೇದಿಕೆಯಿಂದ ಮನವಿ

ತಿಮ್ಮಣ್ಣನಾಯಕನ ಕೆರೆ; ಸ್ವಚ್ಛತಾ ಕಾರ್ಯಕ್ಕೆ ಚಾಲನೆ

Published:
Updated:
Deccan Herald

ಚಿತ್ರದುರ್ಗ: ಮತ್ತಿ ತಿಮ್ಮಣ್ಣನಾಯಕನ ಕೆರೆ ಅಭಿವೃದ್ಧಿ ಆಗಬೇಕೆಂಬ ದಶಕಕ್ಕೂ ಹಿಂದಿನ ಕೂಗಿಗೆ ವಿವಿಧ ಸಂಘ ಸಂಸ್ಥೆಗಳು, ಕೆಲ ನಾಗರಿಕರು ಕೈಜೋಡಿಸಿ ಮಾದರಿಯಾಗಿದ್ದಾರೆ. ಈ ಮೂಲಕ ಹೇರಳವಾಗಿ ಬೆಳೆದಿರುವ ಜಾಲಿ ಮರಗಳ ಅಂಗಳವಾಗಿದ್ದ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಶನಿವಾರ ಭರದಿಂದ ಸಾಗಿದೆ...

ಕೆರೆಯ ಅಂದವನ್ನೇ ಮಂಕು ಮಾಡಿದ್ದ ಕಳೆ ಗಿಡಗಳನ್ನು ಕಿತ್ತು ಹಾಕಿ ಅಂಗಳ­ವನ್ನು ಸ್ವಚ್ಛಗೊಳಿಸುತ್ತಿದ್ದ ಜೆಸಿಬಿ ಯಂತ್ರಗಳು ಅವುಗಳನ್ನು ಒಂದೆಡೆ ಸೇರಿಸುತ್ತಿದ್ದ ದೃಶ್ಯ ಕಂಡು ಬಂತು.

ಸಾಮಾನ್ಯವಾಗಿ ಈ ಕೆರೆ ಮುಂಗಾರು ಮಳೆ ಸಂದರ್ಭದಲ್ಲಿ ತುಂಬಿದರೆ, ಡಿಸೆಂಬರ್ ಅಂತ್ಯದವರೆಗೂ ಕೆರೆಯ ನಡುವಿನ ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ಆದರೆ, ಎರಡ್ಮೂರು ವರ್ಷವನ್ನು ಪರಿಗಣಿಸಿದರೆ ನವೆಂಬರ್‌ ವೇಳೆಗೆ ನೀರಿಲ್ಲದೇ ಪ್ರಾಣಿ ಪಕ್ಷಿಗಳು ಪರದಾಡುವಂತಾಗಿತ್ತು ಎನ್ನುತ್ತಾರೆ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು.

ಈ ಕೆರೆ ಪ್ರಾಣಿ ಪಕ್ಷಿಗಳಿಗೆ ನೀರಾಸರೆಯ ತಾಣ. ಚಿರತೆ, ಕರಡಿ, ನವಿಲು, ಕೊಂಡು ಕುರಿಗಳೆಲ್ಲ ನೀರಿಗಾಗಿ ಈ ಕೆರೆ ಆಶ್ರಯಿಸಿವೆ. ಮುಂದಿನ ಮಳೆಗಾಲ ಶುರುವಾಗುವುದರೊಳಗೆ ಸ್ವಚ್ಛಗೊಳಿಸುವುದು ಉತ್ತಮ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಇದು ಐತಿಹಾಸಿಕ ಕೆರೆಯೂ ಹೌದು. ವಿಶಾಲವಾದ ವಿಸ್ತೀರ್ಣ ಹೊಂದಿರುವ ಇಂತಹ ಕೆರೆ ಬತ್ತಿ ಹೋಗಿದ್ದು, ಸ್ವಚ್ಛಗೊಳಿಸುವ ಕಾರ್ಯ ಸಂತಸದ ವಿಚಾರ ಎಂದು ನೆರೆದಿದ್ದ ನಾಗರಿಕರು ಮಾತನಾಡಿಕೊಳ್ಳುತ್ತಿದ್ದರು.

ಭೂಮಿ ಪೂಜೆ ನಂತರ ಚಾಲನೆ:

ಸಂಸದ ಬಿ.ಎನ್.ಚಂದ್ರಪ್ಪ ಸ್ವಚ್ಛತಾ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿ, ‘ಐತಿಹಾಸಿಕ ಕೆರೆ ಸ್ವಚ್ಛಗೊಳಿಸುವ ಕಾರ್ಯಕ್ಕೆ ಕೆಲ ಸಂಘ, ಸಂಸ್ಥೆಗಳು ಕೈಜೋಡಿಸಿರುವುದು ನಿಜಕ್ಕೂ ಶ್ಲಾಘನೀಯ. ಸಿಹಿನೀರು ಹೊಂಡ ಹೂಳೆತ್ತುವ ಸಂದರ್ಭದಲ್ಲಿ ನಾಗರಿಕರಿಂದ ಉತ್ತಮ ಪ್ರೋತ್ಸಾಹ ದೊರೆತ್ತಿತ್ತು. ಈಗಲೂ ಅದೇ ರೀತಿಯಲ್ಲಿ ಉತ್ತಮ ಕಾರ್ಯಕ್ಕೆ ಸ್ಪಂದನೆ ಸಿಗುವ ವಿಶ್ವಾಸವಿದೆ’ ಎಂದರು.

ಸ್ವಚ್ಛಗೊಳಿಸುವ ಸಮಯ:

‘ಈ ಬಾರಿ ಸಮರ್ಪಕವಾಗಿ ಮಳೆಯಾಗದೆ, ಬರವಿರುವ ಕಾರಣ ಕೆರೆಯ ನೀರು ಬತ್ತಿ ಹೋಗಿದೆ. ಇಂತಹ ಸಮಯದಲ್ಲಿ ಹೂಳೆತ್ತುವುದು ಸೂಕ್ತ ಎಂದು ಸಂಘ, ಸಂಸ್ಥೆ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ’ ಎಂದು ವೇದಿಕೆ ಅಧ್ಯಕ್ಷ ಎಚ್. ಅಂಜಿನಪ್ಪ ತಿಳಿಸಿದರು.

‘ವಿವಿಧ ಸಂಘ ಸಂಸ್ಥೆಯವರು ಮನವಿಗೆ ಸ್ಪಂದಿಸಿ ವಾಹನಗಳ ವ್ಯವಸ್ಥೆ ಮಾಡಿದ್ದರಿಂದ ಸ್ವಚ್ಛಗೊಳಿಸಲು ಮುಂದಾಗಿದ್ದೇವೆ. ನಾಗರಿಕರು, ಸಂಘ ಸಂಸ್ಥೆಯವರು ಮುಂದೆ ಬಂದು ಮತ್ತಷ್ಟು ವಾಹನಗಳ ವ್ಯವಸ್ಥೆ ಮಾಡಿದರೆ ಐತಿಹಾಸಿಕ ಕೆರೆ ಸಂರಕ್ಷಣೆಗೆ ಅನುಕೂಲವಾಗಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಪಾತ್ಯರಾಜನ್, ಕಾಂಗ್ರೆಸ್ ಮುಖಂಡ ಬಿ.ಟಿ. ಜಗದೀಶ್, ನಾಗು ಆರ್ಟ್ಸ್‌ನ ನಾಗರಾಜ್, ಛಾಯಾ ಚಿತ್ರಗ್ರಾಹಕ ನಿಸರ್ಗ ಗೋವಿಂದರಾಜು, ಜಲ ತಜ್ಞ ದೇವರಾಜ ರೆಡ್ಡಿ ಅವರೂ ಇದ್ದರು.

ಮಾನವ ಬಂಧುತ್ವ ವೇದಿಕೆ, ಸಾಯಿ ಅಸೋಸಿಯೇಟ್ ಅಂಡ್ ಡೆವಲಪರ್ಸ್, ಎಜಿವಿ ಇನ್‌ಫಾಟ್ರಕ್ಟರ್ ಪ್ರೈವೇಟ್‌ ಲಿಮಿಟೆಡ್‌ನಿಂದ ಸ್ವಚ್ಛತಾ ಕಾರ್ಯ ಆಯೋಜಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !