ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ದರ ಕುಸಿತ: ಗಿಡಗಳನ್ನು ಕಿತ್ತು ರಸ್ತೆಗೆ ಸುರಿದ ರೈತ

Last Updated 9 ಮಾರ್ಚ್ 2022, 5:49 IST
ಅಕ್ಷರ ಗಾತ್ರ

ಧರ್ಮಪುರ: ದಿನೇ ದಿನೇ ಟೊಮೆಟೊ ದರ ಕುಸಿಯುತ್ತಿರುವುದರಿಂದ ಕಂಗಾಲಾಗಿರುವ ರೈತರು, ಹಣ್ಣುಗಳನ್ನು ಕೀಳದೆ ಗಿಡಗಳನ್ನು ಕಿತ್ತು ರಸ್ತೆಗೆ ಸುರಿಯುತ್ತಿದ್ದಾರೆ.

ಹೋಬಳಿಯಲ್ಲಿ ಸುಮಾರು 500 ಹೇಕ್ಟೇರ್‌ನಲ್ಲಿ ಟೊಮೆಟೊ ನಾಟಿ ಮಾಡಲಾಗಿದ್ದು, ಈಗ ಹಣ್ಣು ಬರಲಾರಂಭಿಸಿದೆ. ಏಕಾಏಕಿ ದರ ಕುಸಿತವಾಗಿರುವುದರಿಂದ ಹಣ್ಣುಗಳನ್ನು ಕೀಳಲಾರದೆ ಗಿಡಗಳನ್ನೇ ಕಿತ್ತು ಬಿಸಾಡುತ್ತಿದ್ದಾರೆ.

ಮಂಗಳವಾರ ಮಾರುಕಟ್ಟೆಯಲ್ಲಿ 15 ಕೆ.ಜಿ. ಕ್ರೇಟ್ ಟೊಮೆಟೊ ಕೇವಲ ₹ 35ರಿಂದ ₹ 40 ದರ ಇದ್ದಿದ್ದರಿಂದ 1 ಕೆ.ಜಿ.ಗೆ ₹ 4 ಸಿಗದಂತಹ ಪರಿಸ್ಥಿತಿ ಎದುರಾಗಿದೆ.

ಇಲ್ಲಿಂದ ಮಾರುಕಟ್ಟೆಗೆ ಲಾರಿ ಮೂಲಕ ಕಳುಹಿಸಬೇಕು. ಈಗ ಲಾರಿ ಬಾಡಿಗೆಯೂ ಸಿಗದೆ ಕೈಯಿಂದ ಕೊಡಬೇಕು ಎಂದು ಹರಿಯಬ್ಬೆ ರೈತ ಪರಮೇಶ್ ಅಳಲು ತೋಡಿಕೊಂಡಿದ್ದಾರೆ.

‘ಧರ್ಮಪುರ ಹೋಬಳಿಯ ಹರಿಯಬ್ಬೆ, ಮುಂಗುಸುವಳ್ಳಿ, ಅರಳೀಕೆರೆ, ಸಕ್ಕರ, ವೇಣುಕಲ್ಲುಗುಡ್ಡ, ಚಿಲ್ಲಹಳ್ಳಿ, ಹಲಗಲದ್ದಿ, ಮದ್ದಿಹಳ್ಳಿ, ಹೊಸಕೆರೆ, ಮದ್ದಿಹಳ್ಳಿ, ಬೆನಕನಹಳ್ಳಿ, ಕೋಡಿಹಳ್ಳಿ, ಶ್ರವಣಗೆರೆ, ಕಣಜನಹಳ್ಳಿ, ಧರ್ಮಪುರ, ಬೆನಕನಹಳ್ಳಿ, ಈಶ್ವರಗೆರೆ ಮತ್ತಿತರ ಕಡೆ ಹೆಚ್ಚಾಗಿ ಟೊಮೆಟೊ ನಾಟಿ ಮಾಡಿದ್ದು ಉತ್ತಮ ಬೆಳೆ ಮತ್ತು ದರ ಸಿಗಬಹುದೆಂದು ಊಹಿಸಿದ್ದೆವು. ಆದರೆ, ಬೆಲೆ ಕುಸಿತದಿಂದ ನಮ್ಮ ಕನಸು ನುಚ್ಚು ನೂರಾಗಿದೆ’ ಎಂದು ಹರಿಯಬ್ಬೆ ರೈತ ಜನಾರ್ದನ ಬೇಸರ ವ್ಯಕ್ತಪಡಿಸಿದರು.

‘ಎರಡು ಮೂರು ತಿಂಗಳ ಹಿಂದೆ ಒಂದು ಕ್ರೇಟಿಗೆ ₹ 1000 ದರವಿತ್ತು. ಇದರಿಂದ ನಾವೆಲ್ಲಾ ಆಶಾದಾಯಕರಾಗಿದ್ದೆವು. ಯಾವುದೇ ರೋಗಬಾಧೆಯೂ ಇರಲಿಲ್ಲ. ಆದರೆ, ಒಮ್ಮೆಲೆ ದರ ಕುಸಿದಿರುವುದರಿಂದ ನಾವು ಹಾಕಿದ ಬಂಡವಾಳ ಸಂಪೂರ್ಣವಾಗಿ ಕೈಸುಡುವಂತ ಪರಿಸ್ಥಿತಿ ಎದುರಾಗಿದೆ’ ಎಂದು ಶ್ರವಣಗೆರೆ ರೈತ ನರಸಿಂಹಪ್ಪ ಬೇಸರ ವ್ಯಕ್ತಪಡಿಸಿದರು.

ರೈತರಿಗೆ ಮಾಹಿತಿ ಅಗತ್ಯ

ರೈತರು ಒಂದೇ ತರಹದ ಬೆಳೆ ಒಮ್ಮೆಲೆ ನಾಟಿ ಮಾಡುವುದರಿಂದ ಈ ಪರಿಸ್ಥಿತಿ ತಲೆದೋರಬಹುದು. ಅದಕ್ಕಾಗಿ ಸರ್ಕಾರ ಮತ್ತು ಇಲಾಖೆಯ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಬೇಕು. ಹಣ್ಣು ಸಂಸ್ಕರಣ ಘಟಕಗಳನ್ನು ಸ್ಥಾಪಿಸಿದರೆ ದರ ಕುಸಿತದ ಸಮಯದಲ್ಲಿ ಬೆಳೆಗಾರರನ್ನು ಸಂರಕ್ಷಿಸಲು ಸಹಾಯವಾಗುತ್ತದೆ ಎಂದು ಪ್ರಗತಿಪರ ರೈತ ಹರಿಯಬ್ಬೆ ಸಿ. ನಾಗರಾಜಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT