ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಳಕಾಲ್ಮುರು: ಟೊಮೆಟೊ ದರ ಕುಸಿತ; ಬೆಳೆಗಾರರಿಗೆ ಆತಂಕ

Published : 11 ಆಗಸ್ಟ್ 2024, 5:58 IST
Last Updated : 11 ಆಗಸ್ಟ್ 2024, 5:58 IST
ಫಾಲೋ ಮಾಡಿ
Comments

ಮೊಳಕಾಲ್ಮುರು: ಟೊಮೆಟೊ ದರ ಏಕಾಏಕಿ ಕುಸಿಯುತ್ತಿರುವ ಪರಿಣಾಮ ಲಾಭದ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.

ಕಳೆದ ವರ್ಷ ಪ್ರತಿ ಬಾಕ್ಸ್‌ ಟೊಮೆಟೊ ದರ ₹ 2000 ಇತ್ತು. ಈ ಬಾರಿಯೂ ಉತ್ತಮ ದರ ದೊರಕುವ ನಿರೀಕ್ಷೆಯಲ್ಲಿ ರೈತರು ಹೆಚ್ಚಿನ ಪ್ರದೇಶದಲ್ಲಿ ನಾಟಿ ಮಾಡಿದ್ದರು. ಕಳೆದ ಒಂದು ತಿಂಗಳಿನಿಂದ ಮಾರುಕಟ್ಟೆಗೆ ಜಿಲ್ಲೆಯ ಟೊಮೆಟೊ ಬರುತ್ತಿದೆ. ಆರಂಭದಲ್ಲಿ ಹೆಚ್ಚಿನ ದರಕ್ಕೆ ಮಾರಾಟವಾಗಿದ್ದು 3-4 ದಿನಗಳಿಂದ ದರ ಕುಸಿತವಾಗಿದೆ.

ಇಲ್ಲಿ ಬೆಳೆದ ಟೊಮೆಟೊ ಹೆಚ್ಚಾಗಿ ಕೋಲಾರ, ಬೆಂಗಳೂರು, ಬಳ್ಳಾರಿ ಹಾಗೂ ತೆಲಂಗಾಣದ ಅನಂತಪುರ ಮಾರುಕಟ್ಟೆಗಳಿಗೆ ರವಾನೆಯಾಗುತ್ತದೆ. ಸದ್ಯಕ್ಕೆ 1,000 ಹೆಕ್ಟೇರ್‌ ಪ್ರದೇಶದಲ್ಲಿನ ಹಣ್ಣು ಮಾರುಕಟ್ಟೆಗೆ ಬರುತ್ತಿರುವ ಅಂದಾಜಿದ್ದು, 15 ದಿನಗಳ ನಂತರ ಆವಕ ಹೆಚ್ಚಾಗಲಿದೆ. ಈಗ ಸರಾಸರಿ 15 ಕೆ.ಜಿಯ ಪ್ರತಿ ಬಾಕ್ಸ್‌ಗೆ ₹ 200 ರಿಂದ ₹ 300 ವರೆಗೆ ದರ ಇದೆ.

‘ಜಿಲ್ಲೆಯಲ್ಲಿ ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಹೆಚ್ಚಾಗಿ ಟೊಮೆಟೊ ಬೆಳೆಯಲಾಗುತ್ತಿದೆ. ಈ ಭಾಗದ ಮಣ್ಣು, ಹವಾಮಾನವು ಟೊಮೆಟೊ ಬೆಳೆಗೆ ಸೂಕ್ತವಾಗಿರುವುದು ನಾಟಿ ಹೆಚ್ಚಳಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

‘ಜಿಲ್ಲೆಯಲ್ಲಿ ಈ ವರ್ಷ 4,800 ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೊ ನಾಟಿಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 2,300 ರಿಂದ 2,400, ಹಿರಿಯೂರು ತಾಲ್ಲೂಕಿನಲ್ಲಿ 1500 ಹೆಕ್ಟೇರ್‌ ಮತ್ತು ಮೊಳಕಾಲ್ಮುರು ತಾಲ್ಲೂಕಿನಲ್ಲಿ ಅಂದಾಜು 600 ಹೆಕ್ಟೇರ್‌ನಲ್ಲಿ ನಾಟಿಯಾಗಿದೆ. ತಡವಾಗಿ ನಾಟಿ ಮಾಡಿದ ಕಾರಣ ಸ್ವಲ್ಪ ಇಳುವರಿ ಕಡಿಮೆಯಾಗಿದೆ. ಬಿರು ಬಿಸಿಲಿನ ಕಾರಣ ಜೂನ್‌, ಜುಲೈನಲ್ಲಿ ಹೆಚ್ಚು ನಾಟಿ ಮಾಡಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಶರಣಬಸಪ್ಪ ಬೋಗಿ ಮಾಹಿತಿ ನೀಡಿದರು.

‘ಕೋಲಾರ ಮಾರುಕಟ್ಟೆಗೆ ಚಿತ್ರದುರ್ಗ ಭಾಗದಿಂದ ಪ್ರತಿದಿನ 25,000 ರಿಂದ 30,000 ಬಾಕ್ಸ್‌ ಟೊಮೆಟೊ ಬರುತ್ತಿದೆ. 20 ದಿನಗಳ ಹಿಂದೆ ಉತ್ತಮ ದರವಿತ್ತು. ಶನಿವಾರ ₹ 50 ರಿಂದ ₹ 450ರ ವರೆಗೆ ಮಾರಾಟವಾಗಿದೆ. ಇಲ್ಲಿಂದ ದೆಹಲಿ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಬಾಂಗ್ಲಾದೇಶಕ್ಕೂ ಕಳಿಸಲಾಗುತ್ತಿತ್ತು. ದೇಶದ ಎಲ್ಲ ರಾಜ್ಯಗಳಲ್ಲೂ ಟೊಮೆಟೊ ಸೀಸನ್‌ ಆರಂಭವಾಗುತ್ತಿರುವುದು ಬೇಡಿಕೆ ಕುಸಿತಕ್ಕೆ ಕಾರಣವಾಗುತ್ತಿದೆ’ ಎಂದು ಟೊಮೆಟೊ ಸಗಟು ವ್ಯಾಪಾರಿಯೊಬ್ಬರು ಮಾಹಿತಿ ನೀಡಿದರು. 

ದರ ಕುಸಿತದಲ್ಲಿ ಮಾರುಕಟ್ಟೆಗೆ ಆವಕ ಕಡಿಮೆಯಾಗಲು ಆರಂಭವಾಗುತ್ತದೆ. ಬಾಡಿಗೆ ಸೇರಿ ಇತರೆ ಖರ್ಚು ತಗ್ಗಿಸಲು ಬೆಳೆಗಾರರು ಸ್ಥಳೀಯ ಮಾರುಕಟ್ಟೆಗೆ ಹಣ್ಣು ಕಳಿಸುತ್ತಾರೆ. ತೀವ್ರ ದರ ಕುಸಿತವಾದರೆ ಹಣ್ಣು ಬಿಡಿಸುವುದನ್ನೇ ಕೈಬಿಡುತ್ತಾರೆ.

ಪ್ರತಿ ಬಾಕ್ಸ್‌ಗೆ ಬಾಡಿಗೆ, ಕಮಿಷನ್‌, ಕೂಲಿ ಸೇರಿ ₹ 100 ಖರ್ಚು ಬರುತ್ತದೆ. ನಿರ್ವಹಣೆ, ಕೂಲಿ ಲೆಕ್ಕ ಹಾಕಿದರೆ ಟೊಮೆಟೊ ಕೃಷಿ ದುಬಾರಿಯಾಗುತ್ತಿದೆ ಎನ್ನುತ್ತಾರೆ ಬೆಳೆಗಾರರು.

ಅಧಿಕ ಮಳೆಗೆ ಗಿಡದಲ್ಲೇ ಉಳಿದ ಟೊಮೆಟೊ

ಚಿಕ್ಕಜಾಜೂರು: ಜುಲೈ ತಿಂಗಳಿನಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಟೊಮೆಟೊ ಬೆಳೆದ ರೈತರು ಕಂಗಾಲಾಗಿದ್ದಾರೆ. ಒಂದೆಡೆ ಬೆಲೆ ಕುಸಿತ ಹಾಗೂ ಕೆಸರಿನಲ್ಲಿ ಕೊಯ್ಲು ಮಾಡಲಾಗದ ಅತಂತ್ರ ಸ್ಥಿತಿಯಲ್ಲಿ ಬೆಳೆಗಾರರು ಸಿಲುಕಿಕೊಂಡಿದ್ದಾರೆ.

‘ಟೊಮೆಟೊ ಸಸಿ ತಂದು ಒಂದೂವರೆ ಎಕರೆ ಜಮೀನಿನಲ್ಲಿ ನಾಟಿ ಮಾಡಿದ್ದೇನೆ. ಬೇಸಾಯ, ಸಸಿ, ತಳಗೊಬ್ಬರ, ಮೇಲು ಗೊಬ್ಬರ, ಎರಡು ಬಾರಿ ಔಷಧಿ ಸಿಂಪಡಣೆ, ಟೊಮೆಟೊ ಬಳ್ಳಿಯನ್ನು ಕಟ್ಟಲು ಕೋಲು ಹಾಗೂ ವಯರ್‌, ಕಳೆ, ಕೊಯ್ಲಿಗೆಂದು ಈವರೆಗೆ ಅಂದಾಜು ₹ 1 ಲಕ್ಷ ಖರ್ಚು ಮಾಡಿದ್ದೇನೆ’ ಎನ್ನುತ್ತಾರೆ ಸಮೀಪದ ಸಾಸಲುಹಳ್ಳದ ರೈತ ಶಿವಮೂರ್ತಿ. 

‘ಮಳೆ ಹಾಗೂ ಬೆಲೆ ಕುಸಿತದಿಂದ ಟೊಮೆಟೊವನ್ನು ಖರೀದಿಸುವವರೇ ಇಲ್ಲದಂತಾಗಿದೆ. ಕಳೆದ ತಿಂಗಳು ಮೊದಲ ಬಾರಿಗೆ ಕೊಯ್ಲು ಮಾಡಿದಾಗ ಬಾಕ್ಸ್‌ ಒಂದಕ್ಕೆ ₹ 1,000 ದಂತೆ ಮಾರಾಟ ಮಾಡಿದ್ದೆ. ನಂತರದ ದಿನಗಳಲ್ಲಿ ಬೆಲೆ ಕುಸಿಯಲಾರಂಭಿಸಿತು. ಈಗ ಒಂದು ಬಾಕ್ಸ್‌ಗೆ ₹ 100ಕ್ಕೆ ಕೇಳುತ್ತಿದ್ದಾರೆ. ಕೊಯ್ಲು ಮಾಡುವ ಕೂಲಿಯವರಿಗೆ ದಿನಕ್ಕೆ ₹ 300 ಕೊಡಬೇಕು’ ಎಂದು ಶಿವಮೂರ್ತಿ ಬೇಸರ ವ್ಯಕ್ತಪಡಿಸಿದರು.

‘ಐದು ಜನ ಕೂಲಿಯವರು ಬಂದು ಕೊಯ್ಲು ಮಾಡಿದರೆ ದಿನಕ್ಕೆ ₹ 1,500 ಕೊಡಬೇಕು. ಶನಿವಾರ 23 ಬಾಕ್ಸ್‌ ಹಣ್ಣು ಸಿಕ್ಕಿದೆ. ಆದರೆ, ಖರೀದಿದಾರರೇ ಇಲ್ಲದಂತಾಗಿದೆ. ಕೇವಲ 5 ಬಾಕ್ಸ್‌ಗಳನ್ನು ₹ 100 ರಂತೆ ಮಾರಾಟ ಮಾಡಿದೆ. ಸಂಜೆಯಾದರೂ ಖರೀದಿದಾರರು ಬಾರದಿದ್ದರಿಂದ ಉಳಿದ ಎಲ್ಲ ಹಣ್ಣನ್ನು ರಸ್ತೆಗೆ ಹಾಕುವಂತಾಯಿತು’ ಎಂದು ಹೇಳಿದರು.

ಬಿ. ದುರ್ಗ ಹೋಬಳಿಯ ಚಿಕ್ಕಜಾಜೂರು, ಹನುಮನಹಳ್ಳಿ, ಹಿರಿಯೂರು, ಕಾಗಳಗೆರೆ ಮೊದಲಾದ ಗ್ರಾಮಗಳ ಹತ್ತಾರು ರೈತರು ಟೊಮೆಟೊ ಬೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT