ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವದೇಶಿ ದರ್ಶನ’ದ ವ್ಯಾಪ್ತಿಗೆ ಕೋಟೆನಾಡು

ಕೇಂದ್ರ ಪ್ರವಾಸೋದ್ಯಮ ಸಚಿವ ಶ್ರೀಪಾದ್‌ ಯಶೊ ನಾಯ್ಕ್‌ ಭರವಸೆ
Last Updated 13 ಆಗಸ್ಟ್ 2022, 13:33 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರೂಪಿಸಿದ ‘ಸ್ವದೇಶಿ ದರ್ಶನ‘ದ ವ್ಯಾಪ್ತಿಗೆ ಚಿತ್ರದುರ್ಗ ಸೇರಿಸಿ, ಮುರುಘಾ ಮಠ ನಿರ್ಮಿಸುತ್ತಿರುವ ಬಸವ ಪ್ರತಿಮೆಗೆ ನೆರವು ಒದಗಿಸಲಾಗುವುದು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಶ್ರೀಪಾದ್‌ ಯಶೊ ನಾಯ್ಕ್‌ ಭರವಸೆ ನೀಡಿದರು.

ಮುರುಘಾ ಮಠದ ಅನುಭವ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ‘ಪ್ರವಾಸೋದ್ಯಮ ಮತ್ತು ಅಧ್ಯಾತ್ಮ: ಕರ್ನಾಟಕದ ದೃಷ್ಟಿಕೋನಗಳು’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಕೇಂದ್ರ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಪ್ರತಿಮೆ ನಿರ್ಮಾಣಕ್ಕೆ ನೆರವು ಒದಗಿಸಲಾಗುವುದು. ಇದಕ್ಕೆ ಸಂಬಂಧಿಸಿದ ಪ್ರಸ್ತಾವಕ್ಕೆ ಶೀಘ್ರ ಅನುಮೋದನೆ ನೀಡಲಾಗಲಾಗುವುದು. ಮೈಸೂರಿನ ಚಾಮುಂಡಿಬೆಟ್ಟವನ್ನು ‘ಪ್ರಸಾದ್‌’ ಯೋಜನೆಯ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಹೇಳಿದರು.

‘ನೈಸರ್ಗಿಕ, ಆಧ್ಯಾತ್ಮಿಕ, ಐತಿಹಾಸಿಕ ಹಾಗೂ ಪಾರಂಪರಿಕ ತಾಣಗಳು ದೇಶದಲ್ಲಿವೆ. ಇಂತಹ ತಾಣಗಳಿಗೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರಿಗೆ ಹೊಸ ಅನುಭೂತಿ ಸಿಗುತ್ತಿದೆ. ಧಾರ್ಮಿಕ ಯಾತ್ರಾ ಸ್ಥಳ, ಪಾರಂಪರಿಕ ತಾಣಗಳಲ್ಲಿ ಜೀವನ ದರ್ಶನ ಪಡೆಯಲು ಸಾಧ್ಯವಾಗುತ್ತಿದೆ’ ಎಂದು ಹೇಳಿದರು.

‘ದೇಶದ ಆಂತರಿಕ ಪ್ರವಾಸೋದ್ಯಮದಲ್ಲಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಯಾತ್ರಿಕರೇ ಹೆಚ್ಚು. ಅಧ್ಯಾತ್ಮ ಪ್ರವಾಸೋದ್ಯಮಕ್ಕೆ ಕರ್ನಾಟಕವೂ ಸೇರಿ ದೇಶದಲ್ಲಿ ವಿಪುಲ ಅವಕಾಶಗಳಿವೆ. 2014ರ ಬಳಿಕ ಅಧ್ಯಾತ್ಮ ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ. ದೇಶದ ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸ ರಕ್ಷಣೆಯ ಕಾರ್ಯಕ್ಕೆ ಒತ್ತು ನೀಡಲಾಗಿದೆ’ ಎಂದರು.

‘ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಪ್ರಸಾದ್‌ ಮತ್ತು ಸ್ವದೇಶಿ ದರ್ಶನ ಯೋಜನೆಗಳನ್ನು ರೂಪಿಸಿದೆ. ಧಾರ್ಮಿಕ ಯಾತ್ರ ಸ್ಥಳ, ಪ್ರಮುಖ ದೇಗುಲ, ಆಧ್ಯಾತ್ಮಿಕ ತಾಣಗಳ ಅಭಿವೃದ್ಧಿಪಡಿಸುವುದು ಪ್ರಸಾದ್‌ ಯೋಜನೆಯ ಉದ್ದೇಶ. ಮೈಸೂರಿನ ಚಾಮುಂಡಿ ಬೆಟ್ಟವನ್ನು ‘ಪ್ರಸಾದ್‌’ ವ್ಯಾಪ್ತಿಗೆ ಸೇರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಉತ್ತರಪ್ರದೇಶ, ಮಣಿಪುರ, ಕೇರಳ, ರಾಜಸ್ಥಾನ, ಬಿಹಾರ, ಪಾಂಡಿಚೇರಿ ಮತ್ತು ಮಹಾರಾಷ್ಟ್ರದಲ್ಲಿ ಅಧ್ಯಾತ್ಮ ಪ್ರವಾಸೋದ್ಯಮ ಸರ್ಕ್ಯೂಟ್‌ಗಳನ್ನು ರೂಪಿಸಲಾಗಿದೆ. ರಾಮಾಯಣ, ಬೌದ್ಧ, ಕೃಷ್ಣ ಹಾಗೂ ತೀರ್ಥಂಕರ ಸರ್ಕ್ಯೂಟ್‌ ರೂಪಿಸಿ ಅಧ್ಯಾತ್ಮ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ, ‘ಚಿತ್ರದುರ್ಗದ ಪ್ರವಾಸೋದ್ಯಮ ಅಭಿವೃದ್ಧಿಗೆ ₹ 50 ಕೋಟಿಯ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ವಿ.ವಿ.ಸಾಗರಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ರೂಪಿಸಲಾಗಿದೆ. ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್‌ ರೆಡ್ಡಿ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ’ ಎಂದು ಹೇಳಿದರು.

‘2025ಕ್ಕೆ ಪ್ರತಿಮೆ ಪೂರ್ಣ’
ಬಸವವಣ್ಣನವರ ಕಂಚಿನ ಪ್ರತಿಮೆ ನಿರ್ಮಾಣ ಕಾರ್ಯವನ್ನು 2025ಕ್ಕೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

‘ದವಳಗಿರಿ ಬೆಟ್ಟದಿಂದ ಬಸವ ಪ್ರಮೆಯವರೆಗೆ ಕೇಬಲ್‌ ಕಾರ್‌ ವ್ಯವಸ್ಥೆ ಕಲ್ಪಿಸಲು ಅವಕಾಶವಿದೆ. ಇಂತಹ ಯೋಜನೆ ಸಾಕಾರಗೊಂಡಾಗ ಚಿತ್ರದುರ್ಗ ಇನ್ನಷ್ಟು ಆಕರ್ಷಣೀಯವಾಗಲಿದೆ. ಅಂಜನಾದ್ರಿ, ಚಿನ್ಮುಲಾದ್ರಿ (ಚಿತ್ರದುರ್ಗ), ಹಂಪಿ ಮತ್ತು ಮಂತ್ರಾಲಯ ಸೇರಿಸಿ ಟ್ಯೂರಿಸಂ ಸರ್ಕ್ಯೂಟ್‌ ಮಾಡಿದರೆ ಅನುಕೂಲ’ ಎಂದರು.

‘2012ರಲ್ಲಿ ಬ್ರಿಜಿಲ್‌ಗೆ ಭೇಟಿ ನೀಡಿದ್ದೆ. ದೊಡ್ಡ ಬೆಟ್ಟದ ಮೇಲಿನ ಏಸುಕ್ರಿಸ್ತ ಪ್ರತಿಮೆ ಗಮನ ಸೆಳೆಯಿತು. ಬೃಹತ್‌ ಪ್ರತಿಮೆ ವೀಕ್ಷಣೆಗೆ ಸಾಕಷ್ಟು ಪ್ರವಾಸಿಗರು ಬರುತ್ತಿರುವುದು ಗೊತ್ತಾಯಿತು. ಕೇಬಲ್‌ ಕಾರಿನಲಿ ಪ್ರತಿಮೆ ವೀಕ್ಷಣೆ ಮಾಡಿ ಮರಳಿದ ತಕ್ಷಣ ಬಸವಣ್ಣನವರ ಪ್ರತಿಮೆಯ ಆಲೋಚನೆ ಮೊಳೆಯಿತು’ ಎಂದು ಸ್ಮರಿಸಿಕೊಂಡರು.

ಎಸ್‌ಜೆಎಂ ವಿಶ್ವವಿದ್ಯಾಲಯದ ಸಲಹೆಗಾರ ಬಿ.ಜಿ.ಸಂಗೇಶ್ವರ ಇದ್ದರು.

***

ಬೃಹತ್‌ ಗಾತ್ರದ ಬಸವಣ್ಣನವರ ಪ್ರತಿಮೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಇದು ದೇಶದ ಅತಿ ಎತ್ತರದ ಎರಡನೇ ಪ್ರತಿಮೆ. ಐತಿಹಾಸಿಕ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಸರ್ಕಾರವೂ ಕೈಜೋಡಿಸಬೇಕಿದೆ.
-ಕೆ.ಎಸ್‌.ನವೀನ್‌,ವಿಧಾನಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT