ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಸುಧಾರಣೆಯತ್ತ ‘ಶುದ್ಧ ನೀರಿನ’ ವ್ಯವಸ್ಥೆ

Last Updated 8 ಮಾರ್ಚ್ 2021, 5:19 IST
ಅಕ್ಷರ ಗಾತ್ರ

ಚಿತ್ರದುರ್ಗ: ಶುದ್ಧ ನೀರು ಪೂರೈಕೆಯ ಉದ್ದೇಶದಿಂದ ಜಿಲ್ಲೆಯಲ್ಲಿ ನಿರ್ಮಿಸಿದ ‘ಶುದ್ಧ ಕುಡಿಯುವ ನೀರಿನ ಘಟಕ’ಗಳ ನಿರ್ವಹಣೆಯಲ್ಲಿ ಸುಧಾರಣೆ ಕಾಣಿಸುತ್ತಿದೆ. ನಿರ್ವಹಣೆಯ ಹೊಣೆಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಹೆಗಲಿಗೆ ಹಾಕಿದ ನಂತರ ಜನರಲ್ಲಿ ಆಶಾಭಾವನೆ ಮೂಡಿದೆ.

ಕುಡಿಯುವ ನೀರಿಗೆ ಗ್ರಾಮೀಣ ಪ್ರದೇಶದ ಜನರು ಎದುರಿಸುತ್ತಿದ್ದ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಸರ್ಕಾರ ‘ಶುದ್ಧ ಕುಡಿಯುವ ನೀರಿನ ಘಟಕ’ ಯೋಜನೆಯನ್ನು ಅನುಷ್ಠಾನಕ್ಕೆ ತಂದಿತು. ಬರ ಪರಿಸ್ಥಿತಿ, ಫ್ಲೋರೈಡ್‌ ಸಮಸ್ಯೆಯಿಂದ ಬಳಲುತ್ತಿದ್ದ ಜನರಿಗೆ ಶುದ್ಧ ನೀರು ಹೊಸ ಭರವಸೆ ಮೂಡಿಸಿತ್ತು. ಆದರೆ, ನಿರ್ವಹಣೆಯ ಕೊರತೆಯಿಂದ ಘಟಕಗಳಲ್ಲಿ ಶುದ್ಧ ನೀರು ಸಿಗುತ್ತಿರಲಿಲ್ಲ. ಈ ಬಗ್ಗೆ ಜನರು ಅಸಮಾಧಾನಗೊಂಡಿದ್ದರು. ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ ಎಂಬ ಆರೋಪವೂ ಕೇಳಿಬಂದಿತ್ತು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‍ಐಡಿಎಲ್), ಸಂಸದರು, ಶಾಸಕರ ಅನುದಾನ ಹಾಗೂ ಸಹಕಾರ ಸಂಘಗಳ ನೆರವಿನಿಂದ ಜಿಲ್ಲೆಯಲ್ಲಿ 1,080 ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಅನುಮೋದನೆ ಸಿಕ್ಕಿದೆ. ಇದರಲ್ಲಿ 1,052 ಘಟಕಗಳನ್ನು ನಿರ್ಮಿಸಲಾಗಿದೆ. ಈ ಪೈಕಿ ಸರಾಸರಿ 50ಕ್ಕೂ ಹೆಚ್ಚು ಘಟಕಗಳು ನಿತ್ಯವೂ ದುರಸ್ತಿಯಲ್ಲಿವೆ.

ಘಟಕ ನಿರ್ಮಿಸುವ ಸಂಸ್ಥೆ ಐದು ವರ್ಷ ನಿರ್ವಹಣೆ ಮಾಡಬೇಕು ಎಂಬುದು ಸರ್ಕಾರ ರೂಪಿಸಿದ ನಿಯಮ. ಆದರೆ, ಬಹುತೇಕ ಸಂಸ್ಥೆಗಳು ಘಟಕ ಸ್ಥಾಪಿಸಿದ ಬಳಿಕ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದವು. ಇದರಿಂದ ಬಹುತೇಕ ಕಡೆಗಳಲ್ಲಿ ನೀರು ಸಕಾಲಕ್ಕೆ ಸಿಗುತ್ತಿರಲಿಲ್ಲ. ಗ್ರಾಮೀಣ ಕುಡಿಯುವ ನೀರು ಇಲಾಖೆ ಮೇಲುಸ್ತುವಾರಿ ನೋಡಿಕೊಳ್ಳಲು ಆರಂಭಿಸಿದ ನಂತರ ಘಟಕಗಳ ಮೇಲೆ ನಿಗಾ ಹೆಚ್ಚಾಗಿದೆ. ಐದು ವರ್ಷ ಪೂರೈಸಿದ ಬಳಿಕ ಮರು ಟೆಂಡರ್‌ ಕರೆದು ನಿರ್ವಹಣೆಯ ಹೊಣೆಯನ್ನು ಮತ್ತೊಂದು ಸಂಸ್ಥೆಗೆ ನೀಡಲಾಗುತ್ತಿದೆ.

43 ಘಟಕಗಳು ಸಹಕಾರ ಸಂಸ್ಥೆ, ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಸೇರಿ ಇತರ ಸಂಸ್ಥೆಗಳ ನಿರ್ವಹಣೆಯಲ್ಲಿವೆ. ಜನರಿಂದ ಸಂಗ್ರಹವಾಗುವ ಹಣವನ್ನು ನಿರ್ವಹಣೆಗೆ ವ್ಯಯಿಸಲಾಗುತ್ತಿದೆ. ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯ (ಡಿಎಂಎಫ್‌) ಕೆಲ ಭಾಗವನ್ನು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಮೀಸಲಿಡಲಾಗಿದೆ. ಜಿಲ್ಲೆಯಲ್ಲಿ 27 ಘಟಕಗಳ ಸ್ಥಾಪನೆಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ.

20 ಲೀಟರ್‌ ಶುದ್ಧ ಕುಡಿಯುವ ನೀರಿಗೆ ₹ 5 ಬೆಲೆ ನಿಗದಿ ಮಾಡಲಾಗಿದೆ. ₹ 5 ಕಾಯಿನ್‌ ಸಮಸ್ಯೆಯ ಕಾರಣಕ್ಕೆ ಸ್ಮಾರ್ಟ್‌ ಕಾರ್ಡ್‌ ಕೂಡ ಬಳಕೆಗೆ ಬಂದಿದೆ. ಎಟಿಎಂ ಕಾರ್ಡ್‌ ಮಾದರಿಯಲ್ಲಿರುವ ಇದಕ್ಕೆ ಹಣ ಹಾಕಿ ರಿಚಾರ್ಜ್‌ ಮಾಡಿಸಿಕೊಳ್ಳಬೇಕು. ಸೆನ್ಸಾರ್‌ ತಂತ್ರಜ್ಞಾನದ ಮೂಲಕ ಇದು ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ಇದು ಸಮಸ್ಯೆ ಆಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.

ನೀರಿನಲ್ಲಿ ಕರಗುವ ಒಟ್ಟು ಲವಣಗಳ ಪ್ರಮಾಣದ (ಟಿಡಿಎಸ್‌) ಬಗ್ಗೆ ಜನರಲ್ಲಿ ಇನ್ನೂ ಅನುಮಾನಗಳಿವೆ. ಟಿಡಿಎಸ್‌ ಪ್ರಮಾಣವನ್ನು ಕಾಲ ಕಾಲಕ್ಕೆ ಪರಿಶೀಲಿಸುವ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಖನಿಜಯುಕ್ತ ನೀರಿನಲ್ಲಿ 200ರಿಂದ 500 ಟಿಡಿಎಸ್‌ ಮಾನದಂಡ ನಿಗದಿ ಮಾಡಲಾಗಿದೆ. ಆದರೆ, ನಿಗದಿಗಿಂತ ಕಡಿಮೆ ಹಾಗೂ ಹೆಚ್ಚು ಪ್ರಮಾಣ ಟಿಡಿಎಸ್‌ ಇರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ.

ಪ್ರಸಕ್ತ ವರ್ಷ ಬಿದ್ದ ಮಳೆಯು ಘಟಕಗಳ ನೀರಿನ ಕೊರತೆಯನ್ನು ನೀಗಿಸಿದೆ. ಬೇಸಿಗೆ ಸಂದರ್ಭದಲ್ಲಿ ಕೊಳವೆಬಾವಿ ಸ್ಥಗಿತಗೊಂಡು ಆರ್‌ಒ ಘಟಕಗಳಿಗೆ ನೀರು ಪೂರೈಕೆ ಆಗುತ್ತಿರಲಿಲ್ಲ. ಇದರಿಂದ ಸಕಾಲಕ್ಕೆ ನೀರು ಪಡೆಯಲು ಸಾಧ್ಯವಾಗದ ಸ್ಥಿತಿ ಇತ್ತು. ಟ್ಯಾಂಕರ್‌ ಮೂಲಕವೂ ಘಟಕಗಳಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ‘ಆದರೆ, ಈ ವರ್ಷ ಇಂತಹ ನೀರಿಗೆ ಕೊರತೆ ಉಂಟಾಗಿಲ್ಲ. ಬಹುತೇಕ ಎಲ್ಲ ಕೊಳವೆಬಾವಿಗಳಲ್ಲಿಯೂ ನೀರು ಬರುತ್ತಿದೆ‘ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಜ್ಞಾನೇಶ್‌.

ಶುದ್ಧ ನೀರು ಕುಡಿದರೆ ಶೀತ!

ನಾಯಕನಹಟ್ಟಿ: ಶುದ್ಧ ಕುಡಿಯುವ ನೀರಿನ ಘಟಕಗಳ (ಆರ್‌ಒ ಪ್ಲಾಂಟ್‌) ನೀರು ಸೇವಿಸಿದರೆ ಕೆಮ್ಮು, ಶೀತವಾಗುತ್ತದೆ ಎಂಬ ಪೂರ್ವಗ್ರಹ ಗ್ರಾಮೀಣ ಪ್ರದೇಶದ ಜನರಲ್ಲಿ ಇನ್ನೂ ಬೇರೂರಿದೆ. ಶುದ್ಧ ನೀರು ಕುಡಿಯಲು ಹಲವರು ಹಿಂದೇಟು ಹಾಕುತ್ತಿರುವುದರಿಂದ ಅನೇಕ ಘಟಕಗಳು ಬಳಕೆಯಾಗದೇ ಹಾಳಾಗುತ್ತಿವೆ.

ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಬಹುತೇಕ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದೆ. ಈಗಾಗಲೇ ಶೇ 90ರಷ್ಟು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪನೆಯಾಗಿವೆ. ಕೆಲವು ಗ್ರಾಮಗಳಲ್ಲಿ ಘಟಕದ ಯಂತ್ರಗಳು ದೂಳು ಹಿಡಿಯುತ್ತಿವೆ.

ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ನಿರಂತರವಾಗಿ ಬರ ಆವರಿಸಿ ಸಕಾಲಕ್ಕೆ ಮಳೆಯಿಲ್ಲದೆ ಅಂತರ್ಜಲದ ಮಟ್ಟ ಕುಸಿದಿದೆ. ಈ ಭಾಗದಲ್ಲಿ ನಿರಂತರವಾಗಿ ನೀರು ಹರಿಯುವ ಯಾವುದೇ ಶಾಶ್ವತ ನದಿ, ತೊರೆಗಳಿಲ್ಲ. ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳಗಳು, ಕೆರೆಕಟ್ಟೆಗಳಲ್ಲಿ ಮಾತ್ರ ನೀರು ನಿಲ್ಲುವ ವ್ಯವಸ್ಥೆ ಇದೆ. ಎರಡು ದಶಕದಿಂದ
ನಿರೀಕ್ಷಿತ ಮಳೆ ಬೀಳದೇ ಇರುವುದರಿಂದ ಕುಡಿಯುವ ನೀರಿಗೆ
ಹಾಹಾಕಾರ ಉಂಟಾಗುತ್ತಿದೆ.

ಕೊಳವೆಬಾವಿಯಲ್ಲಿ 600 ಅಡಿಗಳಷ್ಟು ಆಳದಲ್ಲಿ ದೊರೆಯುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದೆ. ಈ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ. ಇಂತಹ ನೀರನ್ನೇ ನಿರಂತರವಾಗಿ ಸೇವಿಸಿದರೆ ಹಲ್ಲು, ಮೂಳೆ, ಕೈಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹಲವು ಸ್ವರೂಪದ ಗಂಭೀರ ಕಾಯಿಲೆಗಳಿಗೆ ತುತ್ತಾಗಬೇಕಾದ ಸಂಭವ ಹೆಚ್ಚು. ಆದರೂ, ಗ್ರಾಮೀಣ ಪ್ರದೇಶದ ಹಿರಿಯರು ಶುದ್ಧ ಕುಡಿಯುವ ನೀರಿನ ಘಟಕಗಳ ಬಗೆಗಿನ ತಪ್ಪು ಕಲ್ಪನೆಯಿಂದ ಹೊರಬಂದಿಲ್ಲ.

ನಾಯಕನಹಟ್ಟಿ ಹೋಬಳಿಯ ಗೌಡಗೆರೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸುಸ್ಥಿತಿಯಲ್ಲಿದ್ದರೂ ನೀರು ಬಳಸುತ್ತಿಲ್ಲ. ಗ್ರಾಮದಲ್ಲಿ ದೊರೆಯುವ ಗೋಕಟ್ಟೆಯ ಕೊಳವೆಬಾವಿ ನೀರು ಉತ್ತಮವಾಗಿದೆ ಎಂಬ ಅಭಿಪ್ರಾಯ ಜನರಲ್ಲಿದೆ. ಶುದ್ಧ ಕುಡಿಯುವ ನೀರಿನಲ್ಲಿ ರಾಸಾಯನಿಕ ಮಿಶ್ರಣವಿರುತ್ತದೆ ಎಂಬ ನಂಬಿಕೆ ಇದೆ. ಅಂತಹ ನೀರನ್ನು ಕುಡಿಯಬಾರದು ಎಂಬುದು ಇಲ್ಲಿನ ಹಿರಿಯ ನಾಗರಿಕರ ಕಲ್ಪನೆ.

ನೆಲಗೇತನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಶುದ್ಧ ಕುಡಿಯುವ ನೀರು ಬಳಸಲು ಜನರು ಹಿಂದೇಟು ಹಾಕಿದ್ದರು. ಇದರಿಂದ ಯಂತ್ರಗಳು ದೂಳು ಮತ್ತು ತುಕ್ಕು ಹಿಡಿಯುತ್ತವೆ ಎಂದು ನಿತ್ಯ ಯಂತ್ರಗಳನ್ನು ಚಾಲನೆಗೊಳಿಸಿ ಶುದ್ಧ ನೀರನ್ನು ಚರಂಡಿಗೆ ಹರಿಸಿದ ನಿದರ್ಶನವಿದೆ. ಮೂರು ತಿಂಗಳವರೆಗೂ ಉಚಿತವಾಗಿ ನೀರು ಸರಬರಾಜು ಮಾಡಿದ ನಂತರ ಜನರು ಈ ನೀರಿನ್ನು ಬಳಸುತ್ತಿದ್ದಾರೆ.

ನೀರಿಗೆ ಐದು ಕಿ.ಮೀ. ಅಲೆದಾಟ

ಹಿರಿಯೂರು: ತಾಲ್ಲೂಕಿನ ಆರನಕಟ್ಟೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿ ಎಂಟು ತಿಂಗಳು ಕಳೆದಿದ್ದರೂ ಸಂಬಂಧಿಸಿದ ಅಧಿಕಾರಿಗಳು ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ. ಇದರಿಂದ ಗ್ರಾಮಸ್ಥರು ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

‘ಗ್ರಾಮದಲ್ಲಿ ಹಲವು ದಿನಗಳಿಂದ ಶುದ್ಧ ಕುಡಿಯುವ ನೀರಿನ ಘಟಕದ ಬಾಗಿಲನ್ನೇ ತೆರೆದಿಲ್ಲ. ನಿತ್ಯ ಬೈಕು, ಸೈಕಲ್‌ನಲ್ಲಿ ಐದಾರು ಕಿ.ಮೀ. ದೂರದಲ್ಲಿರುವ ಕುಂದಲಗುರ, ನಾಗೇನಹಳ್ಳಿ, ರಂಗನಾಥಪುರಕ್ಕೆ ಹೋಗಿ ನೀರು ತರುತ್ತಿದ್ದೇವೆ’ ಎನ್ನುತ್ತಾರೆ ಎಸ್.ಬಿ. ಶಿವಕುಮಾರ್.

ಜವನಗೊಂಡನಹಳ್ಳಿ ಹೋಬಳಿಯ ಸೂರಪ್ಪನಹಟ್ಟಿ ವ್ಯಾಪ್ತಿಯಲ್ಲಿರುವ ಹಲವು ಹಳ್ಳಿಗಳ ಜನರಿಗೆ ಶುದ್ಧ ಕುಡಿಯುವ ನೀರು ಇಂದಿಗೂ ಮರೀಚಿಕೆಯಾಗಿದೆ. ಸರಸ್ವತಿಹಟ್ಟಿ, ಹೊಸಹಟ್ಟಿ, ಲಂಬಾಣಿ ತಾಂಡಾ, ಜವರಯ್ಯನಹಟ್ಟಿ, ದನವಿನ ಕರಿಯಜ್ಜನಹಟ್ಟಿ, ಕೊಟ್ಟಿಗೇರಹಟ್ಟಿ, ಭೋವಿ ಕಾಲೊನಿ, ಕೆರೆಮುಂದಲಹಟ್ಟಿ, ಬಸವನಹಟ್ಟಿ, ಪಿಲ್ಲಾಲಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆ ಸಮರ್ಕವಾಗಿಲ್ಲ.

‘ತಾಲ್ಲೂಕಿನ ಬಹುತೇಕ ಘಟಕಗಳನ್ನು ಗ್ರಾಮ ಪಂಚಾಯಿತಿ ನಿರ್ವಹಣೆ ಮಾಡುತ್ತಿವೆ. ಇಲಾಖೆ ವ್ಯಾಪ್ತಿಯಲ್ಲಿರುವ ಏಳು ಹಳ್ಳಿಗಳಲ್ಲಿ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಮ್ಯಾಕ್ಲೂರಹಳ್ಳಿಯಲ್ಲಿ ನೀರು ಲಭ್ಯವಿಲ್ಲದ ಕಾರಣ ಸ್ಥಗಿತಗೊಂಡಿದೆ. ಕೋಡಿಹಳ್ಳಿ ಲಂಬಾಣಿ ತಾಂಡಾದಲ್ಲಿ ಘಟಕದ ಕ್ಯಾಬಿನ್ ಅನ್ನು ದುಷ್ಕರ್ಮಿಗಳು ಒಡೆದು ಹಾಕಿದ್ದಾರೆ’ ಎನ್ನುತ್ತಾರೆ ಗ್ರಾಮೀಣ ನೀರು ಸರಬರಾಜು ಇಲಾಖೆ ಎಇಇ ರಾಮಚಂದ್ರ ನಾಯಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT