ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಸರ್ಕಾರದ ವಿರುದ್ಧ ಬೀದಿಗಿಳಿದ ಕಾರ್ಮಿಕರು

ದೇಶವ್ಯಾಪಿ ಮುಷ್ಕರಕ್ಕೆ ಜಿಲ್ಲೆಯ ಹಲವು ಸಂಘಟನೆಗಳ ಬೆಂಬಲ
Last Updated 26 ನವೆಂಬರ್ 2020, 12:55 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ರೈತ ವಿರೋಧಿ ನೀತಿಯಗಳನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಕರೆನೀಡಿದ್ದ ದೇಶವ್ಯಾಪಿ ಮುಷ್ಕರದ ಅಂಗವಾಗಿ ಜಿಲ್ಲೆಯಲ್ಲಿ ಹಲವು ಸಂಘಟನೆಗಳು ಗುರುವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದವು.

ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಧರಣಿ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕೇಂದ್ರ ಸರ್ಕಾರ ಹಲವು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರುತ್ತಿದೆ. ಕಾರ್ಮಿಕ ಸಮುದಾಯದ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಿಲ್ಲ. ಕಾರ್ಪೊರೇಟ್‌ ಕಂಪನಿಗಳ ಹಿತಾಸಕ್ತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದೆ. ಕಾರ್ಮಿಕ ಸಂಘಟನೆಯ ಹಕ್ಕುಗಳನ್ನು ಮೊಟಕುಗೊಳಿಸುವ ಹುನ್ನಾರ ಮಾಡುತ್ತಿದೆ. ಕಾರ್ಮಿಕರನ್ನು ಬಂಡವಾಳಶಾಹಿಗಳ ಕೈಗೊಂಬೆಯಾಗಿ ರೂಪಿಸುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌, ರೈಲ್ವೆ ಸೇರಿ ಹಲವು ಉದ್ಯಮಗಳ ಖಾಸಗೀಕರಣಕ್ಕೆ ಪ್ರಕ್ರಿಯೆ ಆರಂಭವಾಗಿವೆ. ಇದರಿಂದ ಸಾರ್ವಜನಿಕ ಜನಜೀವನ ಇನ್ನಷ್ಟು ದುರ್ಬರವಾಗಲಿದೆ. ಕೆಲ ಕಾರ್ಪೊರೇಟ್‌ ಕಂಪನಿಗಳಿಗೆ ಸಹಾಯ ಮಾಡಲು ಜನರ ಹಿತಾಸಕ್ತಿಯನ್ನು ಬಲಿಕೊಡಲಾಗುತ್ತಿದೆ. ಜನವಿರೋಧಿ ಕಾನೂನುಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಸುರೇಶ್‍ಬಾಬು ಮಾತನಾಡಿ, ‘ಕೇಂದ್ರ ಸರ್ಕಾರ ಕಾರ್ಮಿಕರ ಹಿತಾಸಕ್ತಿ ಕಾಪಾಡುತ್ತಿಲ್ಲ. ಅಂಬಾನಿ, ಅದಾನಿ ರೀತಿಯ ಬಂಡವಾಳಶಾಹಿಗಳನ್ನು ಓಲೈಕೆ ಮಾಡುತ್ತಿದೆ. ಸಾರ್ವಜನಿಕ ಉದ್ದಿಮೆ ಖಾಸಗೀಕರಣಕ್ಕೆ ಮುಂದಾಗಿದೆ. ಇಂತಹ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೆಸೆಯಬೇಕು’ ಎಂದು ಹೇಳಿದರು.

ಕಾರ್ಮಿಕ ಸಂಘಟನೆಗಳ ಮುಖಂಡರಾದ ಗೌಸ್‌ಪೀರ್‌, ತ್ರಿವೇಣಿ ಸೇನ್‌, ಟಿ.ಆರ್‌.ಉಮಾಪತಿ, ಸತ್ಯಕೀರ್ತಿ, ರಾಧಮ್ಮ, ಸಾವಿತ್ರಮ್ಮ ಇದ್ದರು.

***

ದೆಹಲಿಗೆ ತೆರಳುತ್ತಿದ್ದ ರೈತರು ಮತ್ತು ಕಾರ್ಮಿಕರನ್ನು ಬಂಧಿಸುವ ಮೂಲಕ ಹಕ್ಕು ಧಮನಕ್ಕೆ ಸರ್ಕಾರ ಮುಂದಾಗಿದೆ. ಜನರ ಅಹವಾಲು ಆಲಿಸುವ ಮನಸ್ಥಿತಿಯನ್ನು ಸರ್ಕಾರ ಬೆಳೆಸಿಕೊಳ್ಳುವ ಅಗತ್ಯವಿದೆ.

ನುಲೇನೂರು ಶಂಕರಪ್ಪ
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ

***

ರೈಲ್ವೆ, ವಿದ್ಯುತ್‌ ಖಾಸಗೀಕರಣ ಮಾಡುವುದರಿಂದ ಜನರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಎಲ್ಲ ಸಮುದಾಯ ಒಗ್ಗೂಡಿ ಸರ್ಕಾರವನ್ನು ಪ್ರಶ್ನಿಸಬೇಕಿದೆ. ಜನ ವಿರೋಧಿ ನೀತಿ ಖಂಡಿಸಬೇಕಿದೆ.

ರವಿಕುಮಾರ್‌
ಯುಟಿಯುಸಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT