ಬುಧವಾರ, ನವೆಂಬರ್ 20, 2019
22 °C
ದಾವಣಗೆರೆ ವಿಶ್ವವಿದ್ಯಾಲಯ ಕುಲಸಚಿವ ಡಾ. ಬಸವರಾಜ ಬಣಕಾರ್

ನಿರಂತರ ಕಲಿಕೆ ವಿದ್ಯಾರ್ಥಿಗಳಿಗಷ್ಟೇ ಸೀಮಿತವಲ್ಲ

Published:
Updated:
Prajavani

ಚಿತ್ರದುರ್ಗ: ‘ನಿರಂತರ ಕಲಿಕೆ ಎಂಬುದು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಲ್ಲ. ಶಿಕ್ಷಕರು ಕೂಡ ನಿತ್ಯ ಆ ಕಲಿಕೆಯಲ್ಲಿ ತೊಡಗಿ ಗುಣಮಟ್ಟದ ಬೋಧನೆಗೆ ಮುಂದಾಗಬೇಕು’ ಎಂದು ದಾವಣಗೆರೆ ವಿಶ್ವವಿದ್ಯಾಲಯ ಕುಲಸಚಿವ ಡಾ.ಬಸವರಾಜ ಬಣಕಾರ್ ಸಲಹೆ ನೀಡಿದರು.

ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ, ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ, ದಾವಣಗೆರೆ ವಿಶ್ವವಿದ್ಯಾಲಯ ಪ್ರಶಿಕ್ಷಕರ ಸಂಘ ದಾವಣಗೆರೆ, ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ‘ವೃತ್ತಿ ಅಭಿವೃದ್ಧಿ ತರಬೇತಿ’ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕಂಪ್ಯೂಟರ್‌ ಜ್ಞಾನವಿಲ್ಲದ ಇದ್ದರೆ ಶಿಕ್ಷಕರು ಇಂದಿನ ವಿದ್ಯಾರ್ಥಿಗಳಿಗೆ ಕೌಶಲ, ನೈಪುಣ್ಯತೆ ತುಂಬಲು ಸಾಧ್ಯವಿಲ್ಲ. ಆದ್ದರಿಂದ ಯಾವುದೇ ವಿಷಯದ ಶಿಕ್ಷಕರಾಗಲಿ ಗಣಕಯಂತ್ರದ ಬಗ್ಗೆಯೂ ಆಳವಾದ ಜ್ಞಾನ ಹೊಂದಬೇಕು. ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರದಲ್ಲಿ ಉತ್ತುಂಗಕ್ಕೆ ಕೊಂಡೊಯ್ಯಬೇಕು’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳನ್ನು ಸಾಧಕರನ್ನಾಗಿ ಮಾಡಬೇಕಾದ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಅದೇ ರೀತಿ ನೀವುಗಳು ಸಾಧಕರ ಸಾಲಿನಲ್ಲಿ ನಿಲ್ಲಬೇಕಿದೆ. ಅದಕ್ಕಾಗಿ ಮೊದಲು ಗೃಹ ತ್ಯಾಗಿಗಳಾಗಬೇಕು. ಆರೋಗ್ಯಕ್ಕೆ ಪೂರಕವಾದ ಅಲ್ಪ ಆಹಾರ ಸೇವಿಸಬೇಕು. ವಿದ್ಯಾರ್ಥಿಗಳು ಯಾವುದೇ ಕ್ಷಣದಲ್ಲಿ ಸಮಸ್ಯೆ ಹೇಳಿದರು ಅದನ್ನು ಬಗೆಹರಿಸಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಸಿರಿಗೆರೆ ತರಳಬಾಳು ವಿದ್ಯಾಸಂಸ್ಥೆಯ ನಿವೃತ್ತ ಪ್ರಾಚಾರ್ಯ ಎಚ್.ವಿ. ವಾಮದೇವಪ್ಪ, ‘ಶಿಕ್ಷಣ ಕ್ಷೇತ್ರ ನಿರಂತರವಾಗಿ ಬದಲಾಗುತ್ತಿದೆ. ಇದಕ್ಕೆ ಶಿಕ್ಷಕರು ಕೂಡ ತೆರೆದುಕೊಳ್ಳಬೇಕಿದೆ’ ಎಂದರು.

‘ಪ್ರಸ್ತುತ ದಿನಗಳಲ್ಲಿ ಶಾಲೆಗಳಲ್ಲಿ ನೀಡುತ್ತಿರುವ ಶಿಕ್ಷಣದ ಗುಣಮಟ್ಟ ಕಡಿಮೆಯಾಗಿದೆ. ರಾಷ್ಟ್ರದಾದ್ಯಂತ ಎಂತಹ ಶಿಕ್ಷಕರನ್ನು ರೂಪಿಸುತ್ತೇವೆ ಎಂಬುದರ ಮೇಲೆ ಶಿಕ್ಷಣದ ಗುಣಮಟ್ಟ ನಿರ್ಧಾರವಾಗುತ್ತದೆ’ ಎಂದು ಹೇಳಿದರು.

‘ಶಿಕ್ಷಣದಲ್ಲಿ ಪರಿಮಾಣಾತ್ಮಕ ಬದಲಾವಣೆ ಆಗಿದೆಯೇ ಹೊರತು ಗುಣಾತ್ಮಕ ಬದಲಾವಣೆ ಸಾಧ್ಯವಾಗಿಲ್ಲ. ಶಾಲಾ-ಕಾಲೇಜುಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ ವಿನಾ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕೆಲಸ ಆಗಿಲ್ಲ. ಮೊದಲು ಆ ಕಾರ್ಯ ಆಗಬೇಕು’ ಎಂದು ಒತ್ತಾಯಿಸಿದರು.

ದಾವಣಗೆರೆ ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಕೆ. ವೆಂಕಟೇಶ್, ಹೊಳಲ್ಕೆರೆ ವಲಯ ಅರಣ್ಯಾಧಿಕಾರಿ ರಾಮಮೂರ್ತಿ, ಪ್ರಶಿಕ್ಷಕ ಸಂಘದ ಅಧ್ಯಕ್ಷ ಎಸ್.ಎಂ.ಕೃಷ್ಣ, ಪ್ರಾಚಾರ್ಯ ಕೆ.ಎಸ್. ಗಂಗಾಧರ್, ಪ್ರವಾಚರಾದ ಟಿ.ಜಿ.ಲೀಲಾವತಿ, ಕೆ.ಬಿ.ಪ್ರಸಾದ್, ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ಬಿ. ಬಸವರಾಜಪ್ಪ ಇದ್ದರು. 

ಪ್ರತಿಕ್ರಿಯಿಸಿ (+)