ಕರ್ತವ್ಯ ಲೋಪವೂ ಅಪರಾಧ: ವಸ್ತ್ರಮಠ

7
ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಕಾರ್ಯಾಗಾರ

ಕರ್ತವ್ಯ ಲೋಪವೂ ಅಪರಾಧ: ವಸ್ತ್ರಮಠ

Published:
Updated:

ಚಿತ್ರದುರ್ಗ: ಕೊಲೆ, ಸುಲಿಗೆಯಂತೆ ಕರ್ತವ್ಯ ಲೋಪವೂ ಅಪರಾಧ. ವೇತನ ಪಡೆದು ಕೆಲಸ ಮಾಡದಿರುವುದು ಸರ್ಕಾರಕ್ಕೆ ಮಾಡುವ ವಂಚನೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಮಂಗಳವಾರ ಏರ್ಪಡಿಸಿದ್ದ ‘ಬೋಧನೆಯ ಗುಣಮಟ್ಟ ಹೆಚ್ಚಿಸುವ’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಖಾಸಗಿ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಹೊಂದುತ್ತಿವೆ. ಸರ್ಕಾರಿ ಶಾಲೆ–ಕಾಲೇಜುಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಬಹುತೇಕ ಕಾಲೇಜುಗಳ ಕಟ್ಟಡಗಳು ಸುಣ್ಣ–ಬಣ್ಣ ಕಂಡಿಲ್ಲ. ಶೌಚಾಲಯ ಹೊಂದಿರದ ಶಾಲೆಗಳನ್ನು ನೋಡಿ ಬೇಸರವಾಗುತ್ತಿದೆ’ ಎಂದರು.

‘ದ್ವಿತೀಯ ಪಿಯು ಫಲಿತಾಂಶ ಜಿಲ್ಲೆಯಲ್ಲಿ ಕುಸಿದಿರುವುದು ಮುಜುಗರವುಂಟು ಮಾಡಿದೆ. ಬೋಧನಾ ಗುಣಮಟ್ಟ ಹೆಚ್ಚಿಸುವ ಅಗತ್ಯವಿದೆ ಎಂಬುದು ಜಿಲ್ಲಾಡಳಿತಕ್ಕೂ ಮನವರಿಕೆಯಾಗಿದೆ. ಮತದಾನ, ಪ್ರಕರಣಗಳ ವಿಲೇವಾರಿಯಲ್ಲಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಪದವಿ ಪೂರ್ವ ಶಿಕ್ಷಣದ ಫಲಿತಾಂಶದಲ್ಲಿ ಸುಧಾರಣೆಯಾಗಬೇಕಿದೆ’ ಎಂದು ಪ್ರತಿಪಾದಿಸಿದರು.

‘ಶಿಕ್ಷಕರನ್ನು ಸಮಾಜ ದೇವರ ಸ್ಥಾನದಲ್ಲಿ ಕಾಣುತ್ತದೆ. ಇವರನ್ನು ಅವಹೇಳನ ಮಾಡುವುದನ್ನು ಯಾರೂ ಸಹಿಸುವುದಿಲ್ಲ. ಶಿಕ್ಷಕ ವೃತ್ತಿಯ ಘನತೆಗೆ ಕುಂದುಂಟಾಗದಂತೆ ನೋಡಿಕೊಳ್ಳಿ. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತ, ಸಮಾಜಮುಖಿಯಾಗಿ ಕೆಲಸ ಮಾಡಿ’ ಎಂದು ಹೇಳಿದರು.

‘1ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ವಿದ್ಯಾರ್ಥಿಗಳು ಕಂಠಪಾಠ ಮಾಡಿ ಪರೀಕ್ಷೆ ಬರೆಯುತ್ತಾರೆ. ಪಿಯು ಹಂತದ ಬಳಿಕ ಪರೀಕ್ಷೆಯ ವಿಧಾನ ಬದಲಾಗುತ್ತದೆ. ಮಕ್ಕಳ ಮನಸನ್ನು ಗೆದ್ದು, ನೀತಿ ಪಾಠದ ಜೊತೆ ಬೋಧನೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಶಿಕ್ಷಕರ ವೇಷಭೂಷಣ ವಿದ್ಯಾರ್ಥಿಗಳ ಮನಸಿನ ಮೇಲೆ ಪ್ರಭಾವ ಬೀರುತ್ತದೆ. ಕಾಲೇಜಿನಲ್ಲಿ ಸಿನಿಮಾ ನಟರಂತೆ ವರ್ತಿಸುವುದನ್ನು ಬಿಡಬೇಕು. ವಿದ್ಯಾರ್ಥಿಗಳೊಂದಿಗೆ ಪ್ರಜ್ಞಾಪೂರ್ವಕವಾಗಿ ಮಾತನಾಡಬೇಕು. ಕೌಟುಂಬಿಕ ಸಮಸ್ಯೆಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳಬಾರದು’ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ್‌ ಎಂ.ಜೋಷಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್‌.ರವೀಂದ್ರ, ಡಿಡಿಪಿಯು ಎಂ.ಸಿ. ಶೋಭಾ, ನ್ಯಾಯಾಧೀಶ ಎಸ್‌.ಆರ್‌. ದಿಂಡಲಕೊಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !