ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಗೆ ನಮನ

ಪರಿನಿರ್ವಾಣ ದಿನ ಅರ್ಥಪೂರ್ಣ ಆಚರಣೆ– ಮೊಳಗಿದ ಕ್ರಾಂತಿಗೀತೆಗಳು
Last Updated 7 ಡಿಸೆಂಬರ್ 2022, 4:44 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 66ನೇ ಮಹಾ ಪರಿನಿರ್ವಾಣ ದಿನವನ್ನು ಜಿಲ್ಲೆಯಾದ್ಯಂತ ಮಂಗಳವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಅಂಬೇಡ್ಕರ್‌ ಭಾವಚಿತ್ರ ಹಾಗೂ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಸ್ಮರಿಸಲಾಯಿತು.

ನಗರದಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ನಿರಂತರ ಕಾರ್ಯಕ್ರಮಗಳು ನಡೆದವು. ನಗರಸಭೆ ಮುಂಭಾಗದ ಅಂಬೇಡ್ಕರ್‌ ವೃತ್ತದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಮುಖಂಡರು, ಯುವಕರು, ವಿದ್ಯಾರ್ಥಿಗಳು ಹೀಗೆ ಸಾವಿರಾರು ಜನ ಜಮಾಯಿಸಿ ಹೂವಿನ ಹಾರಗಳನ್ನು ಪ್ರತಿಮೆಗೆ ಗೌರವಪೂರ್ವಕವಾಗಿ ಸಮರ್ಪಿಸಿದರು.

ಪರಿನಿರ್ವಾಣ ದಿನದ ಅಂಗವಾಗಿ ಇಡೀ ವೃತ್ತವನ್ನು ಹೂವು, ಬಾಳೆದಿಂಡು, ನೀಲಿ ವರ್ಣದ ಬಟ್ಟೆ, ಬಾವುಟ ಹಾಗೂ ವಿದ್ಯುತ್‌ ದೀಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ದಲಿತರ ಏಕತೆ, ಸ್ವಾಭಿಮಾನದ ಬದುಕಿಗೆ ಸಂಬಂಧಿಸಿದ ಕ್ರಾಂತಿ ಗೀತೆಗಳು ಮೊಳಗಿದವು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ. ಶಿವು ಯಾದವ್‌ ನೇತೃತ್ವದಲ್ಲಿ ವಕೀಲರು ನ್ಯಾಯಾಲಯದಿಂದ ಹೂವಿನ ಹಾರದ ಮೆರವಣಿಗೆ ನಡೆಸಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ವಿವಿಧ ಸಂಘ ಸಂಸ್ಥೆಗಳು ಲಘು ಉಪಾಹಾರದ ವ್ಯವಸ್ಥೆ ಕಲ್ಪಿಸಿದ್ದವು. ಯುವಕರು, ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವೃತ್ತದಲ್ಲಿದ್ದ ಅಂಬೇಡ್ಕರ್‌ ಜ್ಯೋತಿಯಾತ್ರೆ ವಿಶೇಷ ಗಮನ ಸೆಳೆಯಿತು. ಡಿಎಸ್‌ಎಸ್‌ ಸಮನ್ವಯ ಸಮಿತಿ ಹಾಗೂ ವಿವಿಧ ಸಂಘಟನೆ ಸದಸ್ಯರು ವಿದ್ಯಾರ್ಥಿಗಳಿಗೆ ಅಂಬೇಡ್ಕರ್‌ ಕುರಿತು ತಿಳಿಸಿದರು.

ಶೋಷಿತರ ಧ್ವನಿ ಸಂವಿಧಾನ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಪುಷ್ಪನಮನ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಪತ್ರಿಮೆಗೆ ಮಾಲಾರ್ಪಣೆ ಮಾಡಿದರು.

‘ಅಂಬೇಡ್ಕರ್‌ ಅವರ ಚಿಂತನೆಗಳ ಬಗ್ಗೆ ಯುವಪೀಳಿಗೆ ಅಧ್ಯಯನ ನಡೆಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶಕ್ಕೆ ಸಲ್ಲಿಸಿದ ಅನುಕರಣೀಯ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಹೋರಾಟ ಲಕ್ಷಾಂತರ ಜನರಿಗೆ ಭರವಸೆ ತುಂಬಿವೆ’ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.

‘ಸಂವಿಧಾನ ಹಿಂದುಳಿದ ಮತ್ತು ತುಳಿತಕ್ಕೊಳಗಾದವರ ಧ್ವನಿಯಾಗಿದೆ. ಸಶಕ್ತ, ಸಮಾನತೆ, ಸದೃಢ ಭಾರತದ ಕನಸನ್ನು ಅಂಬೇಡ್ಕರ್‌ ಕಂಡಿದ್ದರು ಅಂತಹ ಕನಸನ್ನು ನಾವು ನನಸು ಮಾಡಬೇಕಿದೆ. ಅವರ ತ್ಯಾಗದಿಂದ ನಾವೆಲ್ಲರೂ ಶಾಂತಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ಅವರು ಸದಾ ನಮ್ಮ ಚಿಂತನೆಯಲ್ಲಿ ಇರಬೇಕು’ ಎಂದು ತಿಳಿಸಿದರು.

‌ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್‌.ಜೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಎಸ್‌.ದಿವಾಕರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ, ಹೆಚ್ಚುವರಿ ಜಿಲ್ಲಾಧಿಕಾರಿ ಎ.ಬಾಲಕೃಷ್ಣ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ನಾಗೇಂದ್ರ ನಾಯ್ಕ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್‌, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ರೇಖಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಓ.ಪರಮೇಶ್ವರಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಂಗಸ್ವಾಮಿ ಇದ್ದರು.

.........

ವಿಶೇಷ ಗೀತ ನಮನ

ಚಿತ್ರದುರ್ಗ: ಇಲ್ಲಿಯ ಕಾಂಗ್ರೆಸ್‌ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಗೀತ ನಮನ ಸಲ್ಲಿಸಲಾಯಿತು.

ಗಾಯಕ ಎಂ.ಕೆ.ಹರೀಶ್‌ ನೇತೃತ್ವದ ತಂಡ ಅಂಬೇಡ್ಕರ್‌ ಕುರಿತ ಗೀತೆಗಳನ್ನು ಹಾಡಿದರು. ಸಭಿಕರು ಸಹ ಧ್ವನಿಗೂಡಿಸುವ ಮೂಲಕ ದಿನವನ್ನು ಅರ್ಥಪೂರ್ಣಗೊಳಿಸಿದರು.

‘ದೇಶಕ್ಕೆ ಸಂವಿಧಾನ ಸಮರ್ಪಣೆ ಮಾಡಿರುವ ಅಂಬೇಡ್ಕರ್‌ ದೈಹಿಕವಾಗಿ ನಮ್ಮನ್ನು ಅಗಲಿರಬಹುದು. ಆದರೆ ಅವರ ಆದರ್ಶ, ಚಿಂತನೆಗಳು ಸದಾ ನಮ್ಮೊಂದಿಗಿವೆ’ ಎಂದುಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ ಅಭಿಪ್ರಾಯಪಟ್ಟರು.

ಜಿಲ್ಲಾ ಕಾಂಗ್ರೆಸ್‌ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಜಯಣ್ಣ, ಲಿಡ್ಕರ್‌ ಮಾಜಿ ಅಧ್ಯಕ್ಷ ಓ.ಶಂಕರ್‌, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‌ ಕುಮಾರ್‌, ಡಿ.ಎನ್‌.ಮೈಲಾರಪ್ಪ, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಎಚ್‌.ಅಂಜಿನಪ್ಪ, ಸೈಯದ್ ಖುದ್ದೂಸ್‌, ರುದ್ರಮುನಿ, ಶೇಷಣ್ಣ, ಬಾಲಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT