ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಹಿನ್ನೀರು ಎಂಬ ಬಿಸಿಲುಗುದುರೆ

Last Updated 22 ಆಗಸ್ಟ್ 2022, 4:08 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತುಂಗಭದ್ರಾ ಹಿನ್ನೀರಿನಿಂದ ಮೊಳಕಾಲ್ಮುರು ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನತೆಗೆ ಕುಡಿಯುವ ನೀರು ಪೂರೈಸುವ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ.

ತುಂಗಭದ್ರಾ ಹಿನ್ನೀರು ಯೋಜನೆಗೆ ರಾಜ್ಯ ಸರ್ಕಾರ ₹ 2,000 ಕೋಟಿಗೂ ಅಧಿಕ ಹಣ ವೆಚ್ಚ ಮಾಡುತ್ತಿದೆ. ಕೂಡ್ಲಿಗಿ, ಪಾವಗಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಡಿ ಇದೇ ಯೋಜನೆಯಡಿ ನೀರು ಪೂರೈಸಬೇಕಿದೆ. ಚಿತ್ರದುರ್ಗ, ತುಮಕೂರು, ವಿಜಯನಗರ ಜಿಲ್ಲಾ ವ್ಯಾಪ್ತಿಯಲ್ಲಿ ಯೋಜನೆ ಹರಿದು ಹಂಚಿಹೋಗಿರುವ ಕಾರಣಕ್ಕೆಕಾಮಗಾರಿ ಸಮನ್ವಯ ಸಾಧ್ಯವಾಗುತ್ತಿಲ್ಲ. ’ಫ್ಲೋರೈಡ್‌ಮುಕ್ತ’ ನೀರು ಒದಗಿಸಬೇಕು ಎಂಬ ಹೈಕೋರ್ಟ್ ಆದೇಶದ ಆಶಯವೂ ಸಾಕಾರಗೊಳ್ಳುವಂತೆ ಕಾಣುತ್ತಿಲ್ಲ.

ಆದರೆ, ಶುದ್ಧ ನೀರಿನ ಕನವರಿಕೆಯಲ್ಲಿರುವ ಈ ಕ್ಷೇತ್ರಗಳ ವ್ಯಾಪ್ತಿಯ ಜನ ಐದು ವರ್ಷಗಳಿಂದ ಕಾಯುವಂತಾಗಿದೆ.

ಯೋಜನೆ ರೂಪುಗೊಂಡಿದ್ದು ಹೀಗೆ:

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಫ್ಲೋರೈಡ್‌ಯುಕ್ತ ಕುಡಿಯುವ ನೀರು ಪೂರೈಸುವ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತ್ತು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಶುದ್ಧ ನೀರು ಪೂರೈಕೆಗೆ ಸರ್ಕಾರಕ್ಕೆ ತಾಕೀತು ಮಾಡಿತು. ಆಗ ರೂಪುಗೊಂಡಿದ್ದು ತುಂಗಭದ್ರಾ ಹಿನ್ನೀರು ಯೋಜನೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮುರು ಹಾಗೂ ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ
ಗಳನ್ನು ಈ ಯೋಜನೆಯ ವ್ಯಾಪ್ತಿಗೆ ಸೇರಿಸಲಾಯಿತು.

₹ 2,280 ಕೋಟಿ ವೆಚ್ಚದ ಈ ಯೋಜನೆಗೆ 2017ರಲ್ಲಿ ಚಾಲನೆ ದೊರೆತಿದ್ದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಡಾ.ನಂಜುಂಡಪ್ಪ ಅನುಷ್ಠಾನ ಉಸ್ತುವಾರಿ ಸಮಿತಿಯ ಅನುದಾನವನ್ನು ಬಳಕೆ ಮಾಡಿಕೊಳ್ಳ
ಲಾಯಿತು. ಆದರೆ ಕಾಮಗಾರಿ ವೇಗ ಪಡೆಯಲಿಲ್ಲ. ತಾಂತ್ರಿಕ ತೊಂದರೆ ಮುಂದಿರಿಸಿ ಕಾಮಗಾರಿ ವಿಳಂಬವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಕೊಳವೆ ಮಾರ್ಗ ಅಳವಡಿಕೆಗೆ ಅನುಮತಿ ಸಿಗುವುದು ವಿಳಂಬವಾಗಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾಮಗಾರಿ ನಡೆಸಲು ಹಲವು ತೊಡಕುಗಳು ಎದುರಾಗಿವೆ. ಹಿನ್ನೀರು ಪ್ರದೇಶದಲ್ಲಿಯೂ ಹಲವು ಕಾರ್ಯಗಳು ಇನ್ನೂ ಪೂರ್ಣಗೊಂಡಿಲ್ಲ.

58 ಟ್ಯಾಂಕ್‌ ನಿರ್ಮಾಣ: ಮೊಳಕಾಲ್ಮುರು ತಾಲ್ಲೂಕಿನಲ್ಲಿ ಯೋಜನೆ ಅಡಿ 68ರ ಪೈಕಿ
58 ಟ್ಯಾಂಕ್‌ ನಿರ್ಮಾಣ ಪೂರ್ಣಗೊಂಡಿವೆ. ರಾಂಪುರ ಭಾಗದಲ್ಲಿ ಪ್ರಥಮ ಹಂತದ ವಿದ್ಯುತ್ ಸಂಪರ್ಕ ಕಾರ್ಯ ಮುಗಿದಿದೆ. ತಾಲ್ಲೂಕಿನಲ್ಲಿ 314 ಕಿ.ಮೀ. ಕೊಳವೆ ಮಾರ್ಗ ಅಳವಡಿಸಬೇಕಿದ್ದು, 270 ಕಿ.ಮೀ. ಕೊಳವೆ ಮಾರ್ಗ ಪೂರ್ಣಗೊಂಡಿದೆ. ಬಾಂಡ್ರಾವಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ 8 ಕಿ.ಮೀ, ಹೆದ್ದಾರಿ ಬದಿ 15 ಕಿ.ಮೀ, ರಾಂಪುರ ಬಳಿ 6 ಕಿ.ಮೀ ಮತ್ತು ಅಮಕುಂದಿ ಬಳಿ 4 ಕಿ.ಮೀ ಕಾಮಗಾರಿ ನನೆಗುದಿಗೆ ಬಿದ್ದಿದೆ.

ತುಂಗಭದ್ರಾ ಹಿನ್ನೀರು ವ್ಯಾಪ್ತಿಯ ಶಿವಪುರ
ಬಳಿ ಹೆಚ್ಚಿನ ನೀರು ಸಂಗ್ರಹವಾಗಿದೆ. ಇದರಿಂದ ಶುದ್ಧೀಕರಣ ಘಟಕ ಹಾಗೂ ಜಾಕ್‌ವಾಲ್‌ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದೆ. ಐದೂ ಕಡೆಗಳಲ್ಲೂ ಕೊಳವೆ ಮಾರ್ಗ ನಿರ್ಮಾಣ ಕಾಮಗಾರಿ
ಶೇ 85ಕ್ಕೂ ಹೆಚ್ಚು ಪ್ರಮಾಣದಲ್ಲಿ
ಮುಗಿದಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಮುಂದಿನ ಬೇಸಿಗೆ ವೇಳೆಗೆ ಶುದ್ಧ ನೀರು ನೀಡುವುದಾಗಿ ದೃಢವಾಗಿ ಮಾತನಾಡುತ್ತಿದ್ದಾರೆ. ತುಂಗಭದ್ರಾ ಹಿನ್ನೀರು ಸಿಗುವ ಬಗ್ಗೆ ಜನರಲ್ಲಿ ಮಾತ್ರ ಇನ್ನೂ ಭರವಸೆ ಮೂಡಿಲ್ಲ.

......

ಬೇಕಾಬಿಟ್ಟಿ ರಸ್ತೆ ಅಗೆತ

ಜಲಜೀವನ್ ಮಿಷನ್‌ ಮತ್ತು ತುಂಗಭದ್ರಾ ಹಿನ್ನೀರು ಯೊಜನೆ ಕಾಮಗಾರಿ ಅಡಿ ಪೈಪ್ ಅಳವಡಿಸಲು ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆ ಹಾಗೂ ಗ್ರಾಮದ ರಸ್ತೆಗಳನ್ನು ಬೇಕಾಬಿಟ್ಟಿಯಾಗಿ ಅಗಿಯಲಾಗಿದೆ. ಕೋಟ್ಯಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ್ದ ರಸ್ತೆಗಳು ಹಾಳಾಗಿವೆ.

ಡ್ರಿಲ್ಲಿಂಗ್ ಯಂತ್ರದಿಂದ ನೆಲ ಅಗೆಯುವ ಬದಲು ಜೆಸಿಬಿ ಬಳಸಲಾಗಿದೆ. ಶಾಸಕ ಟಿ. ರಘುಮೂರ್ತಿ ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. ಕಾಮಗಾರಿ ಗುತ್ತಿಗೆ ಪಡೆದ ಕಂಪನಿಗಳಿಂದ ಇವುಗಳನ್ನು ಮರು ನವೀಕರಣ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

............

ಶುದ್ಧ ಕುಡಿಯುವ ನೀರಿನ ಸುಳಿವಿಲ್ಲ

ವಿ.ಧನಂಜಯ

ನಾಯಕನಹಟ್ಟಿ: ಶುದ್ಧ ಕುಡಿಯುವ ನೀರಿಗಾಗಿ ಹಾತೊರಿಯುತ್ತಿರುವ
ಚಳ್ಳಕೆರೆ ತಾಲ್ಲೂಕಿನ ತಳಕು ಮತ್ತು ನಾಯಕನಹಟ್ಟಿ ಹೋಬಳಿಗಳ
ಜನರಲ್ಲಿ ತುಂಗಭದ್ರಾ ಹಿನ್ನೀರು ಸಿಗುವ ಭರವಸೆಯೇ ಹೊರಟುಹೋಗಿದೆ.

ಶಾಶ್ವತ ಬರಪೀಡಿತ ಪ್ರದೇಶವಾಗಿರುವ ತಳಕು ಮತ್ತು ನಾಯಕನಹಟ್ಟಿ ಹೋಬಳಿಗಳಿಗೆ ಯಾವುದೇ ಅಣೆಕಟ್ಟೆ, ನೀರಾವರಿ ಅಚ್ಚಕಟ್ಟು ಪ್ರದೇಶಗಳಿಲ್ಲ. ಕುಡಿಯುವ ಮತ್ತು ಕೃಷಿಗಾಗಿ ಕೊಳವೆಬಾವಿ ಅವಲಂಬಿಸಿದ್ದಾರೆ.
ಈ ಎರಡೂ ಹೋಬಳಿ ವ್ಯಾಪ್ತಿಯಲ್ಲಿ 700 ಅಡಿಗಳ ಆಳದವರೆಗೂ ಕೊಳವೆಬಾವಿಗಳನ್ನು ಕೊರೆಯಿಸಿ ಸಾರ್ವಜನಿಕರಿಗೆ ನೀರಿನ ಸರಬರಾಜು ಮಾಡಲಾಗುತ್ತಿದೆ.
ಹಲವು ಗ್ರಾಮಗಳಲ್ಲಿ ಫ್ಲೋರೈಡ್‍ಯುಕ್ತ ನೀರಿನ ಸಮಸ್ಯೆ ಬಿಗಡಾಯಿಸಿದೆ.

ತಳಕು ಹೋಬಳಿಯ ಕೆಲವು ಗ್ರಾಮಗಳಿಗೆ ವೇದಾವತಿ ನದಿಯ ಸೆಳೆತ ಕಂಡುಬಂದರೂ ವರ್ಷಪೂರ್ತಿ ನೀರು ಲಭ್ಯವಾಗುವುದಿಲ್ಲ. ಓಬಳಾಪುರ, ರೇಣುಕಾಪುರ, ಮೈಲಹಳ್ಳಿ, ದೊಡ್ಡಉಳ್ಳಾರ್ತಿ, ಹೀರೆಹಳ್ಳಿ, ಬೇಡರೆಡ್ಡಿಹಳ್ಳಿ, ದೇವರೆಡ್ಡಿಹಳ್ಳಿ, ಗೌರಸಮುದ್ರ, ತಳಕು ಗ್ರಾಮಪಂಚಾಯಿತಿ ವ್ಯಾಪ್ತಿಯ
ಗ್ರಾಮಗಳು ಮತ್ತು ನಾಯಕನಹಟ್ಟಿ ಹೋಬಳಿಯ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಕೊಳವೆ ಬಾವಿ ನೀರೇ ಗತಿ ಎಂಬಂತಾಗಿದೆ.

ಹಿನ್ನೀರು ಯೋಜನೆಯ ಕಾಮಗಾರಿ ನಾಯಕನಹಟ್ಟಿ ಮತ್ತು ತಳಕು ಹೋಬಳಿಗಳಲ್ಲಿ ಶೇ 80ರಷ್ಟು ಪ್ರಗತಿ ಕಂಡಿದೆ. ಪೈಪ್‍ಲೈನ್ ಅಳವಡಿಕೆ,
ಓವರ್‌ ಹೆಡ್‌ ಟ್ಯಾಂಕ್‍ ನಿರ್ಮಿಸಿ ಸುಣ್ಣಬಣ್ಣ ಬಳಿಯಲಾಗಿದೆ. ಆ ಬಳಿಕ ಕಾಮಗಾರಿಯಲ್ಲಿ ಪ್ರಗತಿ ಕಾಣುತ್ತಿಲ್ಲ. ಕಾಮಗಾರಿ ಮುಗಿಯುವ ಯಾವುದೇ ಮನ್ಸೂಚನೆ ಗೋಚರಿಸುತ್ತಿಲ್ಲ.

ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿರುವ ಪರಿಣಾಮವಾಗಿ ಬಹುದಿನಗಳಿಂದ ಕುಡಿಯುವ ನೀರಿನ ನಿರೀಕ್ಷೆಯಲ್ಲಿದ್ದ ಎರಡೂ
ಹೋಬಳಿಗಳ ಜನರಿಗೆ ನಿರಾಸೆ ಉಂಟಾಗಿದೆ. ಜತೆಗೆ ಕುಡಿಯುವ ನೀರಿನ ಬಳಕೆಯ ಭರವಸೆಯೇ ಹೊರಟುಹೋಗಿದೆ.

.............

ಶುದ್ಧ ನೀರು: ಭರವಸೆ ಕಳೆದುಕೊಂಡ ಜನ

ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ತಾಲ್ಲೂಕಿನಾದ್ಯಂತ ನಡೆಯುತ್ತಿರುವ ತುಂಗಭದ್ರಾ ಹಿನ್ನೀರಿನ ಪೈಪ್‍ಲೈನ್ ಕಾಮಗಾರಿ ಅವೈಜ್ಞಾನಿಕವಾಗಿರುವ ಆರೋಪಗಳು ವ್ಯಕ್ತವಾಗಿದ್ದು, ಜನರು ಶುದ್ಧ ಕುಡಿಯುವ ನೀರಿನ ಭರವಸೆಯನ್ನು ಕಳೆದುಕೊಂಡಿದ್ದಾರೆ.

ಚಳ್ಳಕೆರೆ, ಕಾಟಪ್ಪನಹಟ್ಟಿ, ದೊಡ್ಡೇರಿ, ಚೆಲ್ಲೂರು, ದೊಡ್ಡಬೀರನಹಳ್ಳಿ, ಚೌಳೂರು, ಪರಶುರಾಂಪುರ ಮುಂತಾದ ಗ್ರಾಮದಲ್ಲಿ ತಗ್ಗು-ದಿನ್ನೆ ಪ್ರದೇಶವನ್ನು ಗಮನಿಸದೇ ಕೊಳವೆ ಮಾರ್ಗ ಅಳವಡಿಸಲಾಗಿದೆ.

‘ಫ್ಲೋರೈಡ್ ಮಿಶ್ರಿತ ನೀರು ಕುಡಿದ ಪರಿಣಾಮವಾಗಿ ಹಲ್ಲುಗಳು ಹಾಳಾಗಿವೆ. ಮೈ–ಕೈ ನೋವು ಕಾಣಿಸಿಕೊಂಡಿದೆ. ತುಂಗಭದ್ರಾ ಹಿನ್ನೀರಿನಿಂದ ಶುದ್ಧ ನೀರು ಒದಗಿಸಿದರೆ ಅನುಕೂಲವಾಗಲಿದೆ’ ಎನ್ನುತ್ತಾರೆ ಬಾಲೇನಹಳ್ಳಿ ಗ್ರಾಮದ ತಿಪ್ಪೇಸ್ವಾಮಿ.

.........

ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಯೋಜನೆ ರೂಪುಗೊಂಡಿತು. ಗುತ್ತಿಗೆ ಪಡೆದ ಕಂಪೆನಿಗೆ ಐದು ವರ್ಷ ಗಡುವು ನೀಡಲಾಗಿದೆ. ಶೀಘ್ರವೇ ಯೋಜನೆ ಪೂರ್ಣಗೊಳ್ಳುವ ವಿಶ್ವಾಸವಿದೆ.

–ಟಿ. ರಘುಮೂರ್ತಿ, ಶಾಸಕ, ಚಳ್ಳಕೆರೆ

........

₹ 11 ಕೋಟಿ ವೆಚ್ಚದ ರಂಗಯ್ಯನದುರ್ಗ ಕುಡಿಯುವ ನೀರು ಯೋಜನೆ ಸಾಕಾರಗೊಂಡಿಲ್ಲ. ತುಂಗಭದ್ರಾ ಹಿನ್ನೀರು ಯೋಜನೆಯನ್ನು ಚುನಾವಣೆ ಕಾರಣಕ್ಕಾಗಿ ತರಾತುರಿಯಲ್ಲಿ ಲೋಕಾರ್ಪಣೆ ಮಾಡಬೇಡಿ.

–ಜಾಫರ್ ಷರೀಫ್, ಸಿಪಿಐ ಮುಖಂಡ, ಮೊಳಕಾಲ್ಮುರು

.........

ಮಳೆ ಬರದಿದ್ದರೆ ಕೊಳವೆಬಾವಿ ಬತ್ತಿ ಹೋಗಿ ನೀರಿಗೆ ಹಾಹಾಕಾರ ಎದುರಾಗುವುದು ಖಚಿತ. ತುಂಗಭದ್ರಾ ಹಿನ್ನೀರು ಯೋಜನೆ ಎರಡೂ ಹೋಬಳಿಗಳಿಗೆ ಕನಸಾಗಿಯೇ ಉಳಿಯುವ ಅನುಮಾನ ಕಾಡುತ್ತಿದೆ.
–ಜಿ.ಬಿ. ಮುದಿಯಪ್ಪ, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ, ನಾಯಕನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT