ಶನಿವಾರ, ಡಿಸೆಂಬರ್ 7, 2019
25 °C

ಭದ್ರಾ ಮೇಲ್ದಂಡೆ ಯೋಜನೆ ಸಾಕಾರ | ವಿ.ವಿ.ಸಾಗರಕ್ಕೆ ಹರಿಯುತ್ತಿದೆ ಭದ್ರಾ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆ ನಿರ್ಣಾಯಕ ಘಟ್ಟ ತಲುಪಿದೆ. ಭದ್ರಾ ನದಿಯ ನೀರು ವಿ.ವಿ.ಸಾಗರ ಜಲಾಶಯಕ್ಕೆ ಹರಿದು ಬರುತ್ತಿದೆ. ಪ್ರಾಯೋಗಿಕವಾಗಿ ಹರಿಸುತ್ತಿರುವ ಈ ನೀರು ಯೋಜನೆ ಸಾಕಾರಗೊಳ್ಳುವ ಭರವಸೆಯನ್ನು ನೀಡಿದೆ.

ಭದ್ರಾ ಜಲಾಶಯದಿಂದ ವಿ.ವಿ.ಸಾಗರಕ್ಕೆ ಹಳ್ಳದ ಮೂಲಕ ನೀರು ಹರಿಸುವ ಪ್ರಕ್ರಿಯೆ ಶನಿವಾರದಿಂದ ಆರಂಭವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶಾಂತಿಪುರ ಹಾಗೂ ಬೆಟ್ಟತಾವರೆಕೆರೆ ಪಂಪ್‌ಹೌಸಿನಲ್ಲಿ ನೀರನ್ನು ಮೇಲೆತ್ತಿ ಹರಿಸಲಾಗುತ್ತಿದೆ. ಅಜ್ಜಂಪುರ ಸಮೀಪದ ಸುರಂಗ ಹಾಗೂ ಜೋಡಿ ರೈಲು ಮಾರ್ಗ ದಾಟಿ ಚಿತ್ರದುರ್ಗದತ್ತ ನೀರು ಹರಿಯಲಾರಂಭಿಸಿದೆ.

ವಿ.ವಿ.ಸಾಗರಕ್ಕೆ ನೀರು ಹರಿಸಲು ಭದ್ರಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ನಾಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲು ಸಾಧ್ಯವಿಲ್ಲದಿರುವುದರಿಂದ ಹಳ್ಳದ ಮೂಲಕ ವೇದಾವತಿ ನದಿಗೆ ಬಿಡಲಾಗುತ್ತಿದೆ. ಹೊಸದುರ್ಗ ತಾಲ್ಲೂಕು ಪ್ರವೇಶಿಸುವ ಮುನ್ನವೇ ರೈತರು ಹರ್ಷಗೊಂಡಿದ್ದಾರೆ. ನೀರು ಹರಿದು ಬರುವ ದೃಶ್ಯವನ್ನು ಕಾಣಲು ತಂಡೋಪತಂಡವಾಗಿ ಅಜ್ಜಂಪುರ ಸಮೀಪದ ಭದ್ರಾ ನಾಲೆ ಬಳಿಗೆ ತೆರಳುತ್ತಿದ್ದಾರೆ.

ಭದ್ರಾ ನೀರನ್ನು ವಿ.ವಿ.ಸಾಗರಕ್ಕೆ ಹರಿಸಲು ಒಂದೂವರೆ ವರ್ಷದಿಂದ ನಿರಂತರ ಪ್ರಯತ್ನ ನಡೆಯುತ್ತಿದೆ. 2018ರ ಡಿಸೆಂಬರ್‌ ವೇಳೆಗೆ ನೀರು ಬರುವುದಾಗಿ ಸಮ್ಮಿಶ್ರ ಸರ್ಕಾರ ಭರವಸೆ ನೀಡಿತ್ತು. ತಾಂತ್ರಿಕ ತೊಂದರೆ ಎದುರಾಗಿದ್ದರಿಂದ ಈ ಪ್ರಕ್ರಿಯೆ ವಿಳಂಬವಾಗಿತ್ತು. ಲೋಕಸಭಾ ಚುನಾವಣೆಗೂ ಮುನ್ನವೇ ಭದ್ರಾ ನೀರನ್ನು ಚಿತ್ರದುರ್ಗ ಜಿಲ್ಲೆಗೆ ತರುವ ಪ್ರಯತ್ನವೂ ನಡೆದಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಇದರಿಂದ ಜಿಲ್ಲಾ ಉಸ್ತುವಾರಿ ಸಚಿವಾರಾಗಿದ್ದ ವೆಂಕಟರಮಣಪ್ಪ ಅವರು ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.

ಭದ್ರಾ ನದಿ ನೀರನ್ನು ಚಿತ್ರದುರ್ಗ ಜಿಲ್ಲೆಗೆ ಹರಿಸಬೇಕು ಎಂಬುದು ಬಹುದಿನಗಳ ಬೇಡಿಕೆ. ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರ ಕಾಲದಿಂದಲೂ ಈ ಪ್ರಯತ್ನ ನಡೆದಿತ್ತು. ಎರಡು ದಶಕದಿಂದ ಈಚೆಗೆ ಇದು ಚಳವಳಿಯ ಸ್ವರೂಪ ಪಡೆಯಿತು. ಜನರ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ 2006ರಲ್ಲಿ ಯೋಜನೆಯ ರೂಪುರೇಷ ಸಿದ್ಧಪಡಿಸಿತ್ತು. 2009ರಲ್ಲಿ ಈ ಯೋಜನೆ ಅಧಿಕೃತವಾಗಿ ಘೋಷಣೆಯಾಗಿತ್ತು.

ನೀರು ಹರಿಸುವ ಪ್ರಯೋಗ ಯಶಸ್ವಿಯಾದರೆ ಅಕ್ಟೋಬರ್ ಮೊದಲ ವಾರದಿಂದ ಭದ್ರಾ ನೀರು ಅಧಿಕೃತವಾಗಿ ವಿ.ವಿ.ಸಾಗರಕ್ಕೆ ಹರಿದು ಬರಲಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಬೇಸಿಗೆಯಲ್ಲಿ ಡೆಡ್‌ಸ್ಟೋರೇಜ್‌ ತಲುಪಿದ್ದ ವಿ.ವಿ.ಸಾಗರದಲ್ಲಿ ಸದ್ಯ 62 ಅಡಿ ನೀರು ಇದೆ. ಚಿತ್ರದುರ್ಗ, ಹಿರಿಯೂರು ಸೇರಿ ಹಲವು ಹಳ್ಳಿಗಳಿಗೆ ಇದೇ ನೀರು ಒದಗಿಸಲಾಗುತ್ತಿದೆ. ಭದ್ರಾ ನೀರು ಹರಿದು ಬಂದರೆ ಜಲಾಶಯದ ನೀರಿನ ಮಟ್ಟ ಹೆಚ್ಚಾಗಲಿದೆ. ಕುಡಿಯುವ ನೀರಿಗೆ ಅನುಭವಿಸುತ್ತಿದ್ದ ತೊಂದರೆ ನೀಗಲಿದ್ದು, ಜನರು ಸಂತಸಗೊಂಡಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು