ಶನಿವಾರ, ಜುಲೈ 24, 2021
23 °C
ಪ್ರಗತಿ ಪರಿಶೀಲನೆ ನಡೆಸಿದ ಸಂಸದ ಎ.ನಾರಾಯಣಸ್ವಾಮಿ

ಭದ್ರಾ ಮೇಲ್ದಂಡೆ ಕಾಮಗಾರಿ ತ್ವರಿತಕ್ಕೆ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ತರೀಕೆರೆ ತಾಲ್ಲೂಕಿನ ಅಜ್ಜಂಪುರದ ‘ವೈ’ ಜಂಕ್ಷನ್‌ ಬಳಿ 14 ಕಿ.ಮೀ ಉದ್ದದ ನಾಲೆ ನಿರ್ಮಾಣಕ್ಕೆ ಉಂಟಾಗಿರುವ ತೊಡಕುಗಳಿಗೆ ಕಾನೂನಾತ್ಮಕ ಪರಿಹರ ಕಂಡುಕೊಳ್ಳದಿದ್ದರೆ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗೆ ಭದ್ರಾ ನೀರು ಹರಿಸಲು ಸಾಧ್ಯವಿಲ್ಲ ಎಂದು ಸಂಸದ ಎ.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಭದ್ರಾ ಮೇಲ್ದಂಡೆ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಚಿಕ್ಕಮಗಳೂರು ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು ಹಾಗೂ ತರೀಕೆರೆ ಶಾಸಕರೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥಪಡಿಸುವ ಆಶ್ವಾಸನೆ ನೀಡಿದರು.

ಅಜ್ಜಂಪುರ ಸಮೀಪದ ಪಂಪ್‌ಹೌಸ್‌ ಬಳಿಕ ‘ವೈ’ ಜಂಕ್ಷನ್‌ ನಿರ್ಮಿಸಲಾಗುತ್ತದೆ. ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗೆ ಪ್ರತ್ಯೇಕ ನಾಲೆಗಳು ಇಲ್ಲಿ ಕವಲೊಡೆಯುತ್ತವೆ. 2 ಕಿ.ಮೀ ವ್ಯಾಪ್ತಿಯಲ್ಲಿ 44 ಎಕರೆ ಭೂಸ್ವಾಧೀನ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಅಜ್ಜಂಪುರ ಸಮೀಪ ನೀಡಿದಷ್ಟೇ ಪರಿಹಾರವನ್ನು ತಮಗೂ ನೀಡುವಂತೆ ಅಬ್ಬಿನಹೊಳಲು ಗ್ರಾಮದ 42 ರೈತರು ಪಟ್ಟು ಹಿಡಿದಿದ್ದಾರೆ.

‘ಭೂಮಿ ಕಳೆದುಕೊಳ್ಳಲಿರುವ ರೈತರ ಮನೆಗಳಿಗೆ ಭೇಟಿ ನೀಡಿ ಚರ್ಚಿಸಿದ್ದೇನೆ. ದುಬಾರಿ ಪರಿಹಾರ ಮೊತ್ತಕ್ಕೆ ರೈತರು ಬೇಡಿಕೆ ಮುಂದಿಟ್ಟಿದ್ದಾರೆ. ನಿಗದಿಗಿಂತ ಹೆಚ್ಚುವರಿ ಪರಿಹಾರ ನೀಡಲು ಸರ್ಕಾರ ಸಿದ್ಧವಿದೆ. ಸಂಧಾನದ ಮೂಲಕ ಈ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಲು ಅವಕಾಶವಿದೆ. ಅದಕ್ಕೆ ಒಪ್ಪದಿದ್ದರೆ ಕಾನೂನಾತ್ಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು’ ಎಂದು ಸಂಸದ ನಾರಾಯಣಸ್ವಾಮಿ ಅಧಿಕಾರಿಗಳಿಗೆ ಭರವಸೆ ನೀಡಿದರು.

‘ತುಮಕೂರು ಪ್ರತ್ಯೇಕ ನಾಲೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ಎಕರೆ ಭೂಸ್ವಾಧೀನವೂ ಆಗಿಲ್ಲ. ₹ 12 ಸಾವಿರ ಕೋಟಿ ವೆಚ್ಚದ ಬೃಹತ್‌ ನೀರಾವರಿ ಯೋಜನೆಗೆ ಈಗಾಗಲೇ ₹ 3 ಸಾವಿರ ಕೋಟಿ ವೆಚ್ಚವಾಗಿದೆ. ಕಾಮಗಾರಿ ವಿಳಂಬವಾದಂತೆ ಯೋಜನಾ ವೆಚ್ಚ ಹೆಚ್ಚಾಗಲಿದೆ. ಯಾವುದೇ ಕಾರಣಕ್ಕೂ ಕಾಮಗಾರಿ ಸ್ಥಗಿತಗೊಳ್ಳಬಾರದು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

22 ಕೆರೆಗಳಿಗೆ ನೀರು: ತರೀಕೆರೆ ತಾಲ್ಲೂಕಿನಲ್ಲಿ ಕಾಮಗಾರಿ ಪೂರ್ಣಗೊಂಡರೆ ಹೊಳಲ್ಕೆರೆ ತಾಲ್ಲೂಕಿನ 22 ಕೆರೆಗಳಿಗೆ ನೀರು ಹರಿಸಲು ಸಾಧ್ಯವಿದೆ. ಹೊಳಲ್ಕೆರೆ ಫೀಡರ್‌ ಕಾಲುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರವೇ ಪೂರ್ಣಗೊಳಿಸುವ ಬಗ್ಗೆ ಎಂಜಿನಿಯರುಗಳು ಸಭೆಗೆ ಆಶ್ವಾಸನೆ ನೀಡಿದರು.

ಹೊಸದುರ್ಗ ತಾಲ್ಲೂಕಿನ ರೈಲು ನಿಲ್ದಾಣದ ಸಮೀಪ ಫೀಡರ್‌ ಕಾಲುವೆ ನಿರ್ಮಿಸಲಾಗುತ್ತಿದೆ. 4.5 ಕಿ.ಮೀ ತೆರೆದ ಕಾಲುವೆ ಇರಲಿದ್ದು, ಬಳಿಕ ಕೊಳವೆ ಮಾರ್ಗದ ಮೂಲಕ ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಫೀಡರ್ ಕಾಲುವೆ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸಂಸದರು ಸೂಚನೆ ನೀಡಿದರು.

ಗುತ್ತಿಗೆ ಬದಲಿಸಲು ಚರ್ಚೆ: 29.9 ಟಿಎಂಸಿ ಅಡಿ ನೀರು ಪೂರೈಸುವ ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾ ಜಲಾಶಯದಿಂದ ನೀರು ಒದಗಿಸಲಾಗುತ್ತದೆ. 17.4 ಟಿಎಂಸಿ ಅಡಿ ನೀರನ್ನು ತುಂಗಾ ಜಲಾಶಯದಿಂದ ಮೇಲೆತ್ತಿ ಭದ್ರಾ ಜಲಾಶಯಕ್ಕೆ ಹರಿಸಲು ಉದ್ದೇಶಿಸಲಾಗಿದೆ. ತುಂಗಾ ಜಲಾಶಯದ ಹಿನ್ನೀರಿನ ಮುತ್ತಿನಕೊಪ್ಪದಿಂದ ಕಾಮಗಾರಿ ಆರಂಭವಾಗಿದೆ. ಆದರೆ, ಇದು ಕಾಲಮಿತಿಯಲ್ಲಿ ಮುಗಿಯುತ್ತಿಲ್ಲ.

‘ನಾಲೆ ಮತ್ತು ಪಂಪ್‌ಹೌಸ್‌ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ವಿಳಂಬದ ಕಾರಣಕ್ಕೆ ಗುತ್ತಿಗೆ ಒಬ್ಬರ ಕೈತಪ್ಪಿದೆ. ಎರಡನೇ ಬಾರಿ ಗುತ್ತಿಗೆ ಪಡೆದ ಕಂಪನಿ ತ್ವರಿತಗತಿಯಲ್ಲಿ ಕೆಲಸ ಮಾಡುತ್ತಿಲ್ಲ. ಕಾಮಗಾರಿ ತ್ವರಿತಗೊಳ್ಳದಿದ್ದರೆ ಮರು ಟೆಂಡರ್‌ ಕರೆದು ಗುತ್ತಿಗೆದಾರರನ್ನು ಬದಲಾವಣೆ ಮಾಡಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ನಾಲೆ ಸ್ವರೂಪ ಬದಲು: ಚಿತ್ರದುರ್ಗ ತಾಲ್ಲೂಕಿನ ಡಿ.ಎಸ್‌.ಹಳ್ಳಿ ಸಮೀಪದ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‌ ರಸ್ತೆಯ ಬಳಿ ನಾಲೆ ಬಾಕ್ಸ್‌ ಸ್ವರೂಪ ಪಡೆಯಲಿದೆ. ಇದಕ್ಕೆ ₹ 8 ಕೋಟಿ ಹೆಚ್ಚುವರಿ ವೆಚ್ಚವಾಗುವ ಸಾಧ್ಯತೆ ಇದೆ.

‘ನಾಲೆ ನಿರ್ಮಾಣಕ್ಕೆ ಸಮೀಕ್ಷೆ ನಡೆದ ಸಂದರ್ಭದಲ್ಲಿ ಬೈಪಾಸ್‌ ನಿರ್ಮಾಣವಾಗಿರಲಿಲ್ಲ. ತೆರೆದ ನಾಲೆಗೆ ಕಾಮಗಾರಿ ನಡೆದಿದೆ. ಆದರೆ, ಹೆದ್ದಾರಿ ದಾಟಲು 210 ಮೀಟರ್‌ ಬಾಕ್ಸ್‌ ಅಳವಡಿಸುವ ಅಗತ್ಯವಿದೆ. ನಾಲೆ ಸ್ವರೂಪ ಬದಲಾವಣೆಗೆ ಅನುಮೋದನೆ ನೀಡಲಾಗಿದೆ’ ಎಂದು ಸಂಸದ ನಾರಾಯಣಸ್ವಾಮಿ ತಿಳಿಸಿದರು. ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್‌ ಸಿ.ರಾಘವನ್‌ ಇದ್ದರು.

‘ದಾಳಿ ಎದುರಿಸಲು ಸಿದ್ಧ’

ಚೀನಾ ದಾಳಿ ಎದುರಿಸಲು ಭಾರತೀಯ ಸೇನೆ ಸಂಪೂರ್ಣವಾಗಿ ಸಿದ್ಧವಿದೆ. ಈಗಾಗಲೇ ಹಲವು ಚೀನಾ ಸೈನಿಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದೊಂದು ಸೂಕ್ಷ್ಮ ವಿಚಾರ. ಗಡಿ ಸಮಸ್ಯೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೋಡಿಕೊಳ್ಳುತ್ತಿದ್ದಾರೆ. ಪ್ರಧಾನಿ ಮೌನವಾಗಿದ್ದರೆ ಸುಮ್ಮನೆ ಕೂರುವುದಿಲ್ಲ. ಯುದ್ದ ತಂತ್ರ ರೂಪಿಸುತ್ತಿದ್ದಾರೆ ಎಂದರ್ಥ’ ಎಂದು ಹೇಳಿದರು.

‘1962ರ ಸಂದರ್ಭದ ಭಾರತ ಇದಲ್ಲ. ವಿಶ್ವದ ಯಾವುದೇ ದೇಶವನ್ನು ಎದುರಿಸುವ ಶಕ್ತಿ ಭಾರತಕ್ಕೆ ಇದೆ. ವಿಶ್ವ ಶಾಂತಿಯಿಂದ ಇರಬೇಕು ಎಂಬುದು ನಮ್ಮ ಅಪೇಕ್ಷೆ. ಅತಿಕ್ರಮಣವನ್ನು ಚೀನಾ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು