ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಹಂಚಿಕೆ ಸೂತ್ರ ಪಾಲಿಸಿ; ‘ಕಾಡಾ’ಗೆ ಸಲಹೆ

‘ಕಾಡಾ’ಗೆ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಲಹೆ
Last Updated 16 ಜುಲೈ 2021, 14:16 IST
ಅಕ್ಷರ ಗಾತ್ರ

ಚಿತ್ರದುರ್ಗ: ತುಂಗಾ ಮತ್ತು ಭದ್ರಾ ಜಲಾಶಯದಿಂದ ನಿಗದಿಪಡಿಸಲಾದ ನೀರನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಹರಿಸಲು ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ರೈತರು ಅವಕಾಶ ಕಲ್ಪಿಸಬೇಕು. ನದಿ ನೀರು ಹಂಚಿಕೆ ಸೂತ್ರಕ್ಕೆ ‘ಕಾಡಾ’ ಬದ್ಧವಾಗಿ ನಡೆದುಕೊಳ್ಳಬೇಕು ಎಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಮನವಿ ಮಾಡಿದೆ.

ಭದ್ರಾ ಜಲಾಶಯದಿಂದ ಮೇಲ್ದಂಡೆ ಕಾಲುವೆಗೆ ನೀರು ಹರಿಸಲು ವಿರೋಧ ವ್ಯಕ್ತಪಡಿಸಿದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಕಾಡಾ) ನೀರಾವರಿ ಸಲಹಾ ಸಮಿತಿ, ಈ ಬಗ್ಗೆ ಕೈಗೊಂಡ ನಿರ್ಣಯವನ್ನು ಜಿಲ್ಲೆಯ ರೈತರು ಖಂಡಿಸಿದರು. ಬಯಲುಸೀಮೆ ರೈತರು ಹಾಗೂ ದಮನಿತರನ್ನು ಇದು ಘಾಸಿಗೊಳಿಸುವ ಪ್ರಯತ್ನವಾಗಿದೆ. ನೀರು ಹಂಚಿಕೆ ಸೂತ್ರಕ್ಕೆ ಗುಲಗಂಜಿಯಷ್ಟು ಧಕ್ಕೆಯಾದರೂ ಬಯಲುಸೀಮೆ ರೈತರ ಆಕ್ರೋಶ ಇಮ್ಮಡಿಯಾಗುತ್ತದೆ ಎಂಬ ಎಚ್ಚರಿಕೆ ರವಾನಿಸಿದರು.

‘ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಭದ್ರಾ ಮೇಲ್ದಂಡೆ ಯೋಜನೆ ರೂಪಿಸಲಾಗಿದೆ. ಕೆರೆ ತುಂಬಿಸುವ, ಹನಿ ನೀರಾವರಿ ಪದ್ಧತಿ ಅಳವಡಿಸುವ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡುವ ಕಾಳಜಿ ಯೋಜನೆಯಲ್ಲಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ’ ಎಂದು ನೀರಾವರಿ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಅಭಿಪ್ರಾಯಪಟ್ಟರು.

‘ಭದ್ರಾ ಜಲಾಶಯದಿಂದ 12.5 ಟಿಎಂಸಿ ಅಡಿ ಹಾಗೂ ತುಂಗಾ ಜಲಾಶಯದಿಂದ 17.4 ಟಿಎಂಸಿ ಅಡಿಯಷ್ಟು ನೀರು ಹಂಚಿಕೆಯಾಗಿದೆ. ಯೋಜನೆ ಕಾಮಗಾರಿ ಮುಕ್ತಾಯದ ಹಂತಕ್ಕೆ ಬರುತ್ತಿರುವ ಸಂದರ್ಭದಲ್ಲಿ ವಿರೋಧ ಮಾಡುವುದು ಸಾಧುವಲ್ಲ. ಇದು ಮೂರು ಜಿಲ್ಲೆಯ ರೈತರ ನಡುವೆ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ಚಿತ್ರದುರ್ಗ ಜಿಲ್ಲೆ ಸತತ ಬರ ಪರಿಸ್ಥಿತಿ ಎದುರಿಸುತ್ತಿದೆ. ಸಕಾಲಕ್ಕೆ ಮಳೆ ಬೀಳದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಾವಿರ ಅಡಿ ಆಳದವರೆಗೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಫ್ಲೋರೈಡ್‌ ನೀರು ಕುಡಿದು ಆರೋಗ್ಯ ಹದಗೆಟ್ಟಿದೆ. ಹೀಗಾಗಿ, ವಿನಮ್ರತೆಯಿಂದಲೇ ನೀರು ಕೇಳುತ್ತಾ ಬಂದಿದ್ದೇವೆ. ನೀರು ನಿರಾಕರಿಸುವ ಪ್ರಯತ್ನ ಮಾಡಿದರೆ ಒಡಲ ಕಿಚ್ಚು ಹೆಚ್ಚುತ್ತದೆ’ ಎಂದರು.

‘ಕಾಡಾ’ ವ್ಯಾಪ್ತಿ ವಿಸ್ತರಿಸಲು ಆಗ್ರಹ

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಕಾಡಾ) ವ್ಯಾಪ್ತಿಗೆ ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲೆಗಳನ್ನು ಸೇರಿಸಬೇಕು ಎಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಆಗ್ರಹಿಸಿದೆ.

‘ಭದ್ರಾ ಮೇಲ್ದಂಡೆ ಯೋಜನೆಯಡಿ ಮೂರು ಜಿಲ್ಲೆಯ ರೈತರು ನೀರು ಬಳಕೆ ಮಾಡಲಿದ್ದಾರೆ. ಹೀಗಾಗಿ, ಕಾಡಾ ವ್ಯಾಪ್ತಿಯನ್ನು ವಿಸ್ತರಿಸಬೇಕು. ಎರಡೇ ಜಿಲ್ಲೆಯ ಪ್ರತಿನಿಧಿಗಳು ಪ್ರಾಧಿಕಾರದಲ್ಲಿದ್ದು, ಅವರ ಅನುಕೂಲಕ್ಕೆ ತಕ್ಕಂತೆ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಭದ್ರಾ ಮೇಲ್ದಂಡೆ ವ್ಯಾಪ್ತಿಯ ರೈತರ ಹಕ್ಕು ಮಂಡನೆಗೆ ಯಾರೂ ಇಲ್ಲದಂತಾಗಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ ಕಿಡಿಕಾರಿದರು.

ಹೋರಾಟ ಸಮಿತಿ ಮುಖಂಡರಾದ ಬಸ್ತಿಹಳ್ಳಿ ಸುರೇಶಬಾಬು, ಚಿಕ್ಕಪ್ಪನಹಳ್ಳಿ ಷಣ್ಮುಖ, ಧನಂಜಯ, ರುದ್ರಸ್ವಾಮಿ, ಕಮ್ಯುನಿಷ್ಟ್‌ ಪಕ್ಷದ ಮುಖಂಡ ಸುರೇಶಬಾಬು ಇದ್ದರು.

ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ವಿಳಂಬವಾಗುತ್ತಿದೆ. ಯೋಜನೆಗೆ ಕೂಡಲೇ ರಾಷ್ಟ್ರೀಯ ಮಾನ್ಯತೆ ನೀಡಿ ಕಾಮಗಾರಿ ತ್ವರಿತಗೊಳಿಸಬೇಕು. ಆದಷ್ಟು ಬೇಗ ನಾಲೆಯಲ್ಲಿ ನೀರು ಹರಿಸಬೇಕು.

–ಬಿ.ಎ.ಲಿಂಗಾರೆಡ್ಡಿ, ಅಧ್ಯಕ್ಷ, ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ

ಮೇಲ್ದಂಡೆ ಮೂಲಕ ಜಗಳೂರು ತಾಲ್ಲೂಕಿಗೆ 2.4 ಟಿಎಂಸಿ ಅಡಿ ನೀರು ಮೀಸಲಿಡಲಾಗಿದೆ. ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ತಮ್ಮ ಕ್ಷೇತ್ರದ ರೈತರ ಹಿತಾಸಕ್ತಿ ಮರೆತು ವರ್ತಿಸುತ್ತಿದ್ದಾರೆ.

–ಟಿ.ನುಲೇನೂರು ಎಂ.ಶಂಕರಪ್ಪ, ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT