ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರತಾರೆಯರ ದಿನದರ್ಶನ!

Last Updated 5 ಜೂನ್ 2018, 19:30 IST
ಅಕ್ಷರ ಗಾತ್ರ

ಹಾಲಿವುಡ್, ಬಾಲಿವುಡ್ ಅಷ್ಟೇ ಅಲ್ಲ, ತಮಿಳು, ತೆಲುಗು ಚಿತ್ರರಂಗಗಳಲ್ಲಿಯೂ ಸೆಲೆಬ್ರಿಟಿ ಕ್ಯಾಲೆಂಡರ್ ಎನ್ನುವುದು ಜನಪ್ರಿಯ ಕಲ್ಪನೆ. ಆದರೆ ಕನ್ನಡ ಚಿತ್ರರಂಗದಲ್ಲಿ ಮಾತ್ರ ಈ ಪದ್ಧತಿ ಅಷ್ಟೊಂದು ಜನಪ್ರಿಯವಾಗಿಲ್ಲ. ಕನ್ನಡದಲ್ಲಿಯೂ ಇಂಥದ್ದೊಂದು ಪ್ರಯತ್ನ ಮಾಡಬೇಕು ಎನ್ನುವ ಕನಸನ್ನು ಹತ್ತು ವರ್ಷಗಳ ಹಿಂದೆಯೇ ಕಂಡವರು ಲೋಹಿತ್ ರಾಜ್.

(ಸಂಚಿತಾ ಪಡುಕೋಣೆ)

ಆದರೆ ಆಗ ಅವರಿನ್ನೂ ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿದ್ದರು. ಛಾಯಾಗ್ರಹಣ ವ್ಯಾಮೋಹ, ಏನನ್ನಾದರೂ ಸಾಧಿಸಬೇಕು ಎಂಬ ಹಂಬಲದ ಹೊರತಾಗಿ ಅವರ ಬಳಿ ಇನ್ನೇನೂ ಇರಲಿಲ್ಲ. ಆದರೆ ಇಂದಲ್ಲ ನಾಳೆ ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತೇನೆ ಎಂಬ ಛಲ ಮಾತ್ರ ಹಾಗೆಯೇ ಇತ್ತು.

ಕಳೆದ ವರ್ಷ ಮಾರ್ಚ್‌ನಲ್ಲಿ ಅವರು ಕನ್ನಡದ ಹನ್ನೆರಡು ಚಿತ್ರನಟಿಯರ ಫೋಟೊಶೂಟ್ ಮಾಡಿ ಕ್ಯಾಲೆಂಡರ್ ರೂಪಿಸಿದ್ದರು. ಈ ವರ್ಷವೂ ಅಂಥದ್ದೊಂದು ಕ್ಯಾಲೆಂಡರ್ ಅನ್ನು ರೂಪಿಸಿದ್ದು, ಇತ್ತೀಚೆಗೆ ‘ರ್‍ಯಾಂಬೋ 2’ ಚಿತ್ರತಂಡದ ಶರಣ್ ಮತ್ತು ತರುಣ್ ಸುಧೀರ್ ಬಿಡುಗಡೆ ಮಾಡಿದ್ದಾರೆ.

(ನಿಖಿತಾ ನಾರಾಯಣ)

‘ನಾನು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಲು ಆರಂಭಿಸಿ ಐದಾರು ವರ್ಷಗಳು ಕಳೆದವು. ಮಾಡೆಲ್ ಫೋಟೊಶೂಟ್, ಪೋರ್ಟ್‌ಫೋಲಿಯೊ, ಸಿನಿಮಾ ಫೋಟೊಶೂಟ್‌ಗಳನ್ನು ಮಾಡುತ್ತಿದ್ದೆ. ಬೇರೆ ಚಿತ್ರರಂಗಗಳಲ್ಲಿ ಇರುವ ಹಾಗೆಯೇ ನಮ್ಮಲ್ಲಿಯೂ ಸೆಲೆಬ್ರಿಟಿ ಕ್ಯಾಲೆಂಡರ್ ಮಾಡಬೇಕು ಎಂಬ ಕನಸು ಇತ್ತು. ಕಳೆದ ವರ್ಷ 12 ಜನ ನಾಯಕಿಯರನ್ನು ಇಟ್ಟುಕೊಂಡು ಕ್ಯಾಲೆಂಡರ್ ರೂಪಿಸಿದೆ. ಈ ವರ್ಷ ಮತ್ತೆ 12 ನಾಯಕಿಯರನ್ನು ಇಟ್ಟುಕೊಂಡು ಫೋಟೊಶೂಟ್ ಮಾಡಿದ್ದೇನೆ. ಕಳೆದ ವರ್ಷ ಇರುವವರು ಯಾರೂ ಈ ವರ್ಷ ಇಲ್ಲ’ ಎಂದು ವಿವರಣೆ ನೀಡುತ್ತಾರೆ ಅವರು.

(ಸುಕೃತಾ ದೇಶಪಾಂಡೆ)

ಜೂನ್‌ನಲ್ಲಿ ಕ್ಯಾಲೆಂಡರ್‌ ಬಿಡುಗಡೆ ಮಾಡಿದ್ದರಿಂದ ಮಿಡ್ಇಯರ್ ಕ್ಯಾಲೆಂಡರ್ ಅಂತ ಹೆಸರಿಟ್ಟಿದ್ದಾರೆ. ಜೂನ್‌ 2018ನಿಂದ ಮೇ 2019ವರೆಗಿನ ದಿನದರ್ಶಿಕೆ ಇದು.

‘ಈ ಕ್ಯಾಲೆಂಡರ್ ಮಾಡುವುದರಲ್ಲಿ ಯಾವುದೇ ರೀತಿಯ ಕಮರ್ಷಿಯಲ್ ಉದ್ದೇಶ ಇಲ್ಲ. ಚಿತ್ರರಂಗಕ್ಕೆ ಏನನ್ನಾದರೂ ಕೊಡಬೇಕು ಎಂಬ ಸದುದ್ದೇಶ ಅಷ್ಟೇ ಇದರ ಹಿನ್ನೆಲೆಯಲ್ಲಿರುವುದು. ಈ ಫೋಟೊಶೂಟ್‌ನಲ್ಲಿ ಭಾಗವಹಿಸಿದ ನಾಯಕಿಯರೂ ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡೇ ಸಹಕರಿಸಿದ್ದಾರೆ’ ಎನ್ನುವ ಲೋಹಿತ್ ಅವರ ಕ್ಯಾಲೆಂಡರ್ ಕನಸಿಗೆ ಬೆನ್ನೆಲುಬಾಗಿ ನಿಂತಿದ್ದು ರಾಗಿಣಿ ದ್ವಿವೇದಿ.

(ರಾಗಿಣಿ ದ್ವಿವೇದಿ)

‘ರಾಗಿಣಿ ಕನ್ನಡದ ಬಹುಬೇಡಿಕೆಯ ನಟಿ. ಅವರಲ್ಲಿಗೆ ಹೋಗಿ ನಾನು ಈ ಕ್ಯಾಲೆಂಡರ್ ಕಲ್ಪನೆಯ ಬಗ್ಗೆ ಹೇಳಿದಾಗ ಖುಷಿಯಿಂದ ಒಪ್ಪಿಕೊಂಡು ಬೆಂಬಲ ನೀಡಿದರು. ಅವರ ಸಹಕಾರವಿಲ್ಲದೇ ಈ ಕ್ಯಾಲೆಂಡರ್ ರೂಪುಗೊಳ್ಳುತ್ತಿರಲಿಲ್ಲ’ ಎಂದೂ ಅವರು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ.

ರಾಗಿಣಿ ದ್ವಿವೇದಿ, ಶುಭಾ ಪೂಂಜಾ, ರಾಧಿಕಾ ಚೇತನ್, ಭಾವನಾ ರಾವ್, ನಿಖಿತಾ ನಾರಾಯಣ, ಸಂಗೀತಾ ಭಟ್, ಸುಕೃತಾ ದೇಶಪಾಂಡೆ, ಆಕಾಂಕ್ಷಾ ಗಾಂಧಿ, ಸಂಚಿತಾ ಪಡುಕೋಣೆ, ಶ್ರಾವ್ಯಾ ರಾವ್, ಸುಷ್ಮಿತಾ ಜೋಷಿ ಮತ್ತು ಕೀರ್ತಿ ಲಕ್ಷ್ಮಿ ಈ ಕ್ಯಾಲೆಂಡರ್‌ನ ಪುಟಗಳನ್ನು ಅಲಂಕರಿಸಿದ್ದಾರೆ. ಬಾಲಾಜಿ ಮತ್ತು ಕಾವೇರಿ ಅವರಿಗೆ ವಸ್ತ್ರ ವಿನ್ಯಾಸ ಮಾಡಿದ್ದಾರೆ.

(ಸುಶ್ಮಿತಾ ಜೋಷಿ)

‘ಎಲ್ಲರ ಸಹಕಾರ ಇಲ್ಲದಿದ್ದರೆ ಈ ಕ್ಯಾಲೆಂಡರ್ ಸಾಧ್ಯವೇ ಇಲ್ಲ. ಯಾಕೆಂದರೆ ಇದು ಲಾಭದ ಉದ್ದೇಶದಿಂದ ಮಾಡಿದ್ದಲ್ಲ. ಹಾಗಾಗಿ ನಾಯಕಿಯರೂ ಉಚಿತವಾಗಿ ಫೋಟೊಶೂಟ್‌ನಲ್ಲಿ ಭಾಗವಹಿಸಿದ್ದಾರೆ. ಕಾಸ್ಟ್ಯೂಮ್, ಮೇಕಪ್ ಎಲ್ಲರೂ ಸಾಧ್ಯವಿದ್ದಷ್ಟೂ ಕಡಿಮೆ ಸಂಭಾವನೆ ಪಡೆದುಕೊಂಡು ಕೆಲಸ ಮಾಡಿದ್ದಾರೆ’ ಎಂದು ನೆನೆಯುತ್ತಾರೆ ಲೋಹಿತ್ ರಾಜ್.

(ಶುಭ ಪೂಂಜ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT