ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UPSC ಮುಖ್ಯ ಪರೀಕ್ಷೆ ಫಲಿತಾಂಶ: 3ನೇ ಪ್ರಯತ್ನದಲ್ಲಿ ಯಶಸ್ಸು ಕಂಡ ವೈದ್ಯ

ಯುಪಿಎಸ್‌ಸಿ ಪರೀಕ್ಷೆಯಲ್ಲಿ 92ನೇ ರ‍್ಯಾಂಕ್‌ ಪಡೆದ ಡಾ.ಬೆನಕ ಪ್ರಸಾದ್‌
Last Updated 30 ಮೇ 2022, 12:34 IST
ಅಕ್ಷರ ಗಾತ್ರ

ಚಿತ್ರದುರ್ಗ: ಉನ್ನತ ಹುದ್ದೆಗೆರಬೇಕೆಂಬ ತಂದೆಯ ಅಪೇಕ್ಷೆಯಂತೆ ವೈದ್ಯರಾಗಿ ಸೇವೆಸಲ್ಲಿಸುತ್ತಿದ್ದ ಡಾ.ಬೆನಕ ಪ್ರಸಾದ್‌ ಮೂರನೇ ಪ್ರಯತ್ನದಲ್ಲಿ ಕೇಂದ್ರೀಯ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಯಶಸ್ಸುಕಂಡಿದ್ದಾರೆ. 92ನೇ ರ್‍ಯಾಂಕ್‌ ಪಡೆದು ಯುಪಿಎಸ್‌ಸಿ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ.

ಹೊಸದುರ್ಗ ತಾಲ್ಲೂಕಿನ ನಾಗರಕಟ್ಟೆಯ ಜಯಣ್ಣ ಹಾಗೂ ಪಂಕಜಾ ದಂಪತಿಯ ಮೂರನೇ ಪುತ್ರ ಡಾ.ಬೆನಕ ಪ್ರಸಾದ್‌ ಪ್ರತಿಭಾವಂತ ವಿದ್ಯಾರ್ಥಿ. ಹೊಸದುರ್ಗದ ಎಸ್‌ಜೆಎಂ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದ ಜಯಣ್ಣ ಅವರು ಪುತ್ರನಿಗೆ ಐಎಎಸ್‌ ಕನಸು ಬಿತ್ತಿದ್ದರು.

ಚಿಕ್ಕಂದಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಬೆನಕ ಪ್ರಸಾದ್‌ ಪ್ರಾಥಮಿಕ ಶಿಕ್ಷಣವನ್ನು ಹೊಸದುರ್ಗದ ಸಂತ ಆಂತೋನಿ ಶಾಲೆಯಲ್ಲಿ ಮುಗಿಸಿದರು. ಬಂಟ್ವಾಳ ತಾಲ್ಲೂಕಿನ ಅಳಿಕೆಯ ಸತ್ಯಸಾಯಿಬಾಬ ಲೋಕಸೇವಾ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಪಿಯು ವ್ಯಾಸಂಗವನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿ ಪೂರೈಸಿದರು. ಪಿಯು ಪರೀಕ್ಷೆಯಲ್ಲಿ ಶೇ 99ರಷ್ಟು ಅಂಕ ಪಡೆದಾಗ ವೈದ್ಯಕೀಯ ಶಿಕ್ಷಣ ಪಡೆಯುವಂತೆ ತಂದೆಯೇ ಇವರಿಗೆ ಮಾರ್ಗದರ್ಶನ ಮಾಡಿದ್ದರು.

ಬೆಂಗಳೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 2018ರಲ್ಲಿ ವೈದ್ಯಕೀಯ ಪದವಿ ಪಡೆದರು. ಪದವಿ ಮುಗಿಸಿ ಹೊರಬರುವ ಹೊತ್ತಿಗೆ ಯುಪಿಎಸ್‌ಸಿ ಕನಸು ಹೆಮ್ಮೆರವಾಗಿ ಬೆಳೆದಿತ್ತು. ವೈದ್ಯ ವೃತ್ತಿಯ ಜೊತೆಗೆ ಅಧ್ಯಯನದಲ್ಲಿಯೂ ತೊಡಗಿದರು. ಹಲವು ಅಕಾಡೆಮಿಗಳಲ್ಲಿ ತರಬೇತಿ ಪಡೆದು ಪರೀಕ್ಷೆ ಎದುರಿಸಿದರು. ಎರಡು ಪ್ರಯತ್ನದಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ.

ಬೆಂಗಳೂರಿನ ಮಾಗಡಿ ರಸ್ತೆಯ ಇಎಸ್‌ಐ ಆಸ್ಪತ್ರೆಯಲ್ಲಿ ವಿಮಾ ವೈದ್ಯರಾಗಿ 2020ರಲ್ಲಿ ಸೇವೆಗೆ ಸೇರಿದರು. ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದರು. ವೃತ್ತಿಯೊಂದಿಗೆ ಯುಪಿಎಸ್‌ಸಿ ಪರೀಕ್ಷೆಗೂ ಸಿದ್ಧತೆ ನಡೆಸುತ್ತಿದ್ದರು.

‘ಚಿಕ್ಕಂದಿನಿಂದಲೂ ಓದಿನಲ್ಲಿ ಅಪಾರ ಆಸಕ್ತಿ ಹೊಂದಿದ್ದನು. ತಂದೆಯ ಮಾರ್ಗದರ್ಶನದಲ್ಲಿ ಕೋರ್ಸ್‌ ಆಯ್ಕೆ ಮಾಡಿಕೊಳ್ಳುತ್ತಿದ್ದನು. ಐಎಎಸ್‌ ಅಧಿಕಾರಿಯಾಗಬೇಕು ಎಂಬುದು ತಂದೆಯ ಕನಸಾಗಿತ್ತು. ಕೊನೆಗೂ ಅದನ್ನು ಸಾಧಿಸಿದ್ದಾನೆ’ ಎಂದು ಬೆನಕ ಪ್ರಸಾದ್‌ ಅಣ್ಣ ವಿಶ್ವಚೇತನ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT