ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬನ್‌ ಪಾರ್ಕ್‌ನಲ್ಲಿ ಎಲೆಕ್ಟ್ರಿಕ್‌ ಬೈಕ್‌, ಆಟೊ ಕಲರವ!

Last Updated 11 ಮಾರ್ಚ್ 2018, 20:18 IST
ಅಕ್ಷರ ಗಾತ್ರ

ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ ಭಾನುವಾರ ವಿದ್ಯುತ್‌ಚಾಲಿತ ಆಟೊ ಹಾಗೂ ದ್ವಿಚಕ್ರ ವಾಹನಗಳದ್ದೇ ಕಾರುಬಾರು!

ರಜೆಯ ಮಜಾ ಅನುಭವಿಸಲು ಉದ್ಯಾನಕ್ಕೆ ಬಂದಿದ್ದ ಸಿಲಿಕಾನ್‌ ಸಿಟಿಯ ಜನರಿಗೆ ಹೊಗೆ ಮತ್ತು ಶಬ್ದರಹಿತ ವಾಹನಗಳನ್ನು ಕಣ್ತುಂಬಿಕೊಳ್ಳುವ, ಪರೀಕ್ಷಾರ್ಥ ಚಾಲನೆ ಮಾಡಿ ಪುಳಕಗೊಳ್ಳುವ ಅವಕಾಶವೂ ಲಭಿಸಿತು.

ಸಾರಿಗೆ ಇಲಾಖೆ, ಬಿಎಂಟಿಸಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಬ್ಬನ್ ಪಾರ್ಕ್‌ನ ಬ್ಯಾಂಡ್ ಸ್ಟ್ಯಾಂಡ್‌ನಲ್ಲಿ ಆಯೋಜಿಸಿದ್ದ ‘ವಾಹನ ಸಂಚಾರ ವಿರಳ ದಿನ’ದಲ್ಲಿ ವಿದ್ಯುತ್‌ ಚಾಲಿತ ಆಟೊ ಮತ್ತು ದ್ವಿಚಕ್ರ ವಾಹನಗಳ ಪ್ರದರ್ಶನ ಎಲ್ಲರನ್ನೂ ಆಕರ್ಷಿಸಿತು. ಈ ವಾಹನಗಳನ್ನು ಉದ್ಯಾನದೊಳಗೆ ಪರೀಕ್ಷಾರ್ಥವಾಗಿ ಉಚಿತವಾಗಿ ಚಾಲನೆ ಮಾಡುವ ಅವಕಾಶವೂ ನಾಗರಿಕರಿಗೆ ದೊರಕಿತು.

ಎನ್‌ಡಿಎಸ್‌ ಇಕೊ ಮೊಟರ್ಸ್‌ ಕಂಪನಿ ತಯಾರಿಕೆಯ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಮತ್ತು ‘ಎಕ್ಸ್ಟ್ರಾ ಮೈಲ್‌’ ಕಂಪನಿಯ ಮೂರು ಆಟೊಗಳನ್ನು ಪ್ರದರ್ಶನ ಮತ್ತು ಪರೀಕ್ಷಾರ್ಥ ಉಚಿತ ಚಾಲನೆಗೆ ಇಡಲಾಗಿತ್ತು. ಯುವಕ, ಯುವತಿಯರು ಹಾಗೂ ಅಧಿಕಾರಿಗಳು ಉತ್ಸಾಹದಿಂದ ಈ ವಾಹನಗಳನ್ನು ಚಾಲನೆ ಮಾಡಿದರು.

ಆಲ್ಫಾ ಬೈಕ್‌ ಮಾರುಕಟ್ಟೆಯಲ್ಲಿ ಲಭ್ಯವಿದೆ. ಲಿಯೊ ಮತ್ತು ಲಿಯೊ ಪ್ಲಸ್‌ ಈ ತಿಂಗಳ ಅಂತ್ಯದಲ್ಲಿ ಬುಕ್ಕಿಂಗ್‌ ಆರಂಭವಾಗಲಿದ್ದು, ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಈ ಮೂರು ಬಗೆಯ ದ್ವಿಚಕ್ರವಾಹನಗಳು ಎಬಿಎಸ್‌ ವ್ಯವಸ್ಥೆ ಒಳಗೊಂಡಿವೆ ಎಂದು ಎನ್‌ಡಿಎಸ್‌ ಇಕೊ ಮೊಟರ್ಸ್‌ ಅಧ್ಯಕ್ಷ ಎಂ.ಎಚ್‌.ರೆಡ್ಡಿ ತಿಳಿಸಿದರು.

ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರು ಸ್ವತಃ ಎಲೆಕ್ಟ್ರಿಕ್ ಆಟೊ ಚಾಲನೆ ಮಾಡಿಕೊಂಡು ಕಾರ್ಯಕ್ರಮಕ್ಕೆ ಬಂದರು. ಸಾರಿಗೆ ಇಲಾಖೆ ಆಯುಕ್ತ ಬಿ.ದಯಾನಂದ ಅವರು ಸೈಕಲ್‌ ಮೇಲೆ ಬರುವ ಮೂಲಕ ವಾಹನ ವಿರಳ ಸಂಚಾರ ದಿನ ಆಚರಿಸಿದರು.

ಬಿಎಂಟಿಸಿ ಹಾಗೂ ಸಾರಿಗೆ ಇಲಾಖೆ ಆಧಿಕಾರಿಗಳು ಸಹ ಸರ್ಕಾರಿ ವಾಹನಗಳ ಬದಲು ಬಿಎಂಟಿಸಿ ಬಸ್‌ನಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದರು. ನಟ ಪ್ರಥಮ್‌ ವಿದ್ಯುತ್ ಚಾಲಿತ ಆಟೊ ಚಾಲನೆ ಮಾಡಿ, ವಾಹನ ವಿರಳ ಸಂಚಾರ ಅಭಿಯಾನದಲ್ಲಿ ಕೈಜೋಡಿಸುವಂತೆ ಯುವ ಜನರಿಗೆ ಮನವಿ ಮಾಡಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಚ್‌.ಎಂ.ರೇವಣ್ಣ, ‘ಕಳೆದ ತಿಂಗಳು ಆಚರಿಸಿದ ವಾಹನ ವಿರಳ ಸಂಚಾರ ದಿನದ ಸಂದರ್ಭ ವಾಯುಮಾಲಿನ್ಯ ಶೇ 20ರಷ್ಟು ಕಡಿಮೆಯಾಗಿತ್ತು. ನಗರದಲ್ಲಿ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಲು ನಾಗರಿಕರು ಪರಿಸರಸ್ನೇಹಿ ವಾಹನಗಳು, ರೈಲು, ಬಸ್‌ ಮತ್ತು ಸಮೂಹ ಸಾರಿಗೆ ಬಳಸಬೇಕು. ಮುಂದಿನ ಪೀಳಿಗೆ ರೋಗಗಳಿಗೆ ತುತ್ತಾಗುವುದನ್ನು ತಡೆಯಲು ಮತ್ತು ಆರೋಗ್ಯಕರ ಪರಿಸರ ಉಳಿಸಲು ಇದು ಉತ್ತಮ ಮಾರ್ಗ’ ಎಂದರು.

ಮೆಟ್ರೋ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ

ಬಹುತೇಕ ಜನರು ಖಾಸಗಿ ವಾಹನಗಳನ್ನು ಮನೆಯಲ್ಲೇ ನಿಲ್ಲಿಸಿ, ಬಿಎಂಟಿಸಿ ಬಸ್‌ ಮತ್ತು ಮೆಟ್ರೊ ರೈಲುಗಳಲ್ಲಿ ಸಂಚಾರ ನಡೆಸಿದರು. ನಮ್ಮ ಮೆಟ್ರೊ ಹಸಿರು ಮತ್ತು ನೇರಳೆ ಮಾರ್ಗಗಳ ಮೆಟ್ರೊ ರೈಲುಗಳಲ್ಲಿ ಇಡೀ ದಿನ ಪ್ರಯಾಣಿಕರ ದಟ್ಟಣೆ ಕಂಡುಬಂತು. ಭಾನುವಾರ ಬೆಳಿಗ್ಗೆ ಮೆಟ್ರೊ ಸಂಚಾರ ತಡವಾಗಿ ಆರಂಭವಾಗಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.

ಭಾನುವಾರ ಸಾಮಾನ್ಯವಾಗಿ ಬೆಳಿಗ್ಗೆ 8 ಗಂಟೆಗೆ ಮೆಟ್ರೊ ರೈಲು ಸಂಚಾರ ಆರಂಭವಾಗುತ್ತಿತ್ತು. ಆದರೆ, ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಹಳಿ ನಿರ್ವಹಣೆ ಕೆಲಸ ನಡೆಯುತ್ತಿರುವುದರಿಂದ ಬೆಳಿಗ್ಗೆ 10.30ಕ್ಕೆ ನಾಗಸಂದ್ರ, ಯಲಚೇನಹಳ್ಳಿ, ಬೈಯಪ್ಪನಹಳ್ಳಿ ಹಾಗೂ ಮೈಸೂರು ರಸ್ತೆ ಮೆಟ್ರೊ ನಿಲ್ದಾಣಗಳಿಂದ ರೈಲು ಸಂಚಾರ ಆರಂಭವಾಯಿತು.

ವಾಹನ ಸಂಚಾರ ವಿರಳ ದಿನ ಆಚರಣೆಗೆ ಸ್ಪಂದಿಸುವಂತೆ ಖಾಸಗಿ ವಾಹನ ಬಿಟ್ಟು ಬಂದಿದ್ದ ಪ್ರಯಾಣಿಕರು ಮೆಟ್ರೊ ನಿಲ್ದಾಣಗಳಲ್ಲೇ ಕೆಲ ಕಾಲ ಕಾಯಬೇಕಾಯಿತು. ಹಳಿ ನಿರ್ವಹಣೆಯಲ್ಲಿ ತೊಡಗಿದ್ದ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಈ ಬಾರಿಯ ವಾಹನ ಸಂಚಾರ ವಿರಳ ದಿನ ಪ್ರೋತ್ಸಾಹಿಸಲು ಪ್ರಯಾಣಿಕರಿಗೆ ಯಾವುದೇ ರಿಯಾಯಿತಿ ನೀಡಲಿಲ್ಲ.

ಪ್ರದರ್ಶನದಲ್ಲಿದ್ದ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ ವಿಶೇಷ

ಹೆಸರು: ಆಲ್ಫಾ
ಬೆಲೆ: ₹74,379
ಸರಾಸರಿ ವೇಗ: 50 ಕಿ.ಮೀ
ಬ್ಯಾಟರಿ: ಲಿಡ್ಜಲ್‌ ಬ್ಯಾಟರಿ (ವಿಆರ್‌ಎಲ್‌ಎ ಜೆಲ್‌)
ಚಾರ್ಜಿಂಗ್‌ ಅವಧಿ: 6 ಗಂಟೆ
ದೂರ ಕ್ರಮಿಸುವ ಸಾಮರ್ಥ್ಯ: 60ರಿಂದ 80 ಕಿ.ಮೀ
ವಾಹನದ ತೂಕ: 122 ಕೆ.ಜಿ.
ಪ್ರತಿ ಕಿ.ಮೀ.ಗೆ ತಗುಲುವ ವೆಚ್ಚ: 18 ಪೈಸೆ

**
ಹೆಸರು: ಲಿಯೊ
ಬೆಲೆ: ₹88,000
ಸರಾಸರಿ ವೇಗ: 55–60 ಕಿ.ಮೀ
ಬ್ಯಾಟರಿ: ಲಿಥಿಯಂ ಬ್ಯಾಟರಿ
ಚಾರ್ಜಿಂಗ್‌ ಅವಧಿ: 4 ಗಂಟೆ
ದೂರ ಕ್ರಮಿಸುವ ಸಾಮರ್ಥ್ಯ: 80ರಿಂದ 125 ಕಿ.ಮೀ
ವಾಹನದ ತೂಕ: 90 ಕೆ.ಜಿ.
ಪ್ರತಿ ಕಿ.ಮೀ.ಗೆ ತಗುಲುವ ವೆಚ್ಚ: 10 ಪೈಸೆ

**

ಹೆಸರು: ಲಿಯೊ ಪ್ಲಸ್‌
ಬೆಲೆ: ₹1.08 ಲಕ್ಷ
ಸರಾಸರಿ ವೇಗ: 55–60 ಕಿ.ಮೀ
ಬ್ಯಾಟರಿ: ಲಿಥಿಯಂ ಬ್ಯಾಟರಿ (ಡಬಲ್‌)
ಚಾರ್ಜಿಂಗ್‌ ಅವಧಿ: 4 ಗಂಟೆ
ದೂರ ಕ್ರಮಿಸುವ ಸಾಮರ್ಥ್ಯ: 165ರಿಂದ 235 ಕಿ.ಮೀ
ವಾಹನದ ತೂಕ: 90 ಕೆ.ಜಿ.

**

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮಪಾಲುದಾರಿಕೆಯಲ್ಲಿ 80 ಎಲೆಕ್ಟ್ರಿಕ್‌ ಬಸ್‌ ಖರೀದಿಸಲಾಗುತ್ತಿದ್ದು, ಟೆಂಡರ್‌ ಕರೆಯಲಾಗಿದೆ. ಸದ್ಯದಲ್ಲೇ ನಗರದಲ್ಲಿ ಈ ಬಸ್‌ಗಳು ರಸ್ತೆಗೆ ಇಳಿಯಲಿವೆ
– ನಾಗರಾಜ್‌ ಯಾದವ್‌, ಬಿಎಂಟಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT