ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ಜಾತ್ರೆಗೆ ಕೈಜೋಡಿಸಿ

ಜಿಲ್ಲಾ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಮನವಿ
Last Updated 9 ಡಿಸೆಂಬರ್ 2018, 16:17 IST
ಅಕ್ಷರ ಗಾತ್ರ

ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವ, ತರಳಬಾಳು ಹುಣ್ಣಿಮೆ ಮಾದರಿಯಲ್ಲಿ ರಾಜನಹಳ್ಳಿ ಗುರುಪೀಠದಲ್ಲಿ 2019ರ ಫೆಬ್ರವರಿ 8 ಮತ್ತು 9ರಂದು ರಾಜ್ಯ ಮಟ್ಟದ ವಾಲ್ಮೀಕಿ ಜಾತ್ರೆ ನಡೆಯಲಿದ್ದು, ನಾಯಕ ಸಮುದಾಯದ ಎಲ್ಲರೂ ಸಹಕಾರ ಪಡೆಯಲು ಇಲ್ಲಿಭಾನುವಾರ ತೀರ್ಮಾನಿಸಲಾಯಿತು.

ಮಹಾರಾಣಿ ಕಾಲೇಜಿನ ವಾಲ್ಮೀಕಿ ಸಭಾಂಗಣದಲ್ಲಿ ಜಿಲ್ಲಾ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಕೆ. ಮಹೇಶ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಭೆ ನಡೆಯಿತು.

ರಾಜ್ಯದ ಮೂಲೆ ಮೂಲೆಗಳಿಂದ ಕಾರ್ಯಕ್ರಮಕ್ಕೆ ಸಮುದಾಯದ ಸುಮಾರು 4ರಿಂದ 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಆದ್ದರಿಂದ ಸಮಾರಂಭ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ನಡೆಸಲು ಸಿದ್ಧತೆ ನಡೆಸುವ ಬಗ್ಗೆ ಚರ್ಚೆ ನಡೆಸಲಾಯಿತು.

ವಾಲ್ಮೀಕಿ ಜಾತ್ರೆಯಲ್ಲಿ ಎಸ್ಸೆಸ್ಸೆಲ್ಸಿ, ಪಿಯು, ಪದವಿ, ಸ್ನಾತಕೋತ್ತರ ಪದವಿ, ವೈದ್ಯಕೀಯ ವ್ಯಾಸಂಗ ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

ರಾಜ್ಯದ 30 ಜಿಲ್ಲೆಗಳಲ್ಲಿರುವ ಸಂಪನ್ಮೂಲ ವ್ಯಕ್ತಿಗಳು, ಸಂಶೋಧಕರು, ತಜ್ಞರಿಂದ ಲೇಖನಗಳನ್ನು ಸಂಗ್ರಹಿಸಿ ಸ್ಮರಣ ಸಂಚಿಕೆ ಹೊರತರುವ, ವಾಲ್ಮೀಕಿ ಗುರುಪೀಠದ ಯೋಜನೆಗೆ ಜಿಲ್ಲೆಯ ವಿವಿಧ ಕ್ಷೇತ್ರದ ಪ್ರತಿಭಾವಂತರಿಂದ ಪ್ರಬುದ್ಧ ಲೇಖನಗಳನ್ನು ಸಂಗ್ರಹಿಸಿ ಮಠಕ್ಕೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಮುಖಂಡರು ಚರ್ಚಿಸಿದರು.

ಸಂಘದ ತಾಲ್ಲೂಕು ಅಧ್ಯಕ್ಷ ಡಾ. ಗುಡುದೇಶಪ್ಪ, ತಾಲ್ಲೂಕು ಮಟ್ಟದ ಪ್ರತಿಭಾ ಪುರಸ್ಕಾರ ವಾಲ್ಮೀಕಿ ಸಭಾಂಗಣದಲ್ಲಿ ಇದೇ 25ರಂದು ಆಯೋಜಿಸಲಾಗುವುದು ಎಂದರು.

‘ಸಂಘಟನೆಯ ಕೊರತೆಯಿಂದ ನಾಯಕ ಸಮುದಾಯ ಹಿಂದುಳಿದಿದೆ. ಈ ಬಗ್ಗೆ ಈಗಿನಿಂದಲೇ ಎಚ್ಚರವಹಿಸಿ ಮುಂದಿನ ದಿನಗಳಲ್ಲಿ ಸಮುದಾಯವನ್ನು ಬಲಿಷ್ಠವಾಗಿ ಕಟ್ಟುವ ಕೆಲಸವಾಗಬೇಕು’ ಎಂದು ಸಲಹೆ ನೀಡಿದರು.

‘ಮುಖಂಡರ ಪರಿಶ್ರಮದಿಂದ ನಗರಸಭೆ ಬಳಿ ವಾಲ್ಮೀಕಿ ಭವನ ನಿರ್ಮಾಣ ಮಾಡಲಾಗುತ್ತಿದೆ. ಒಂದು ವರ್ಷದಲ್ಲಿ ವಾಲ್ಮೀಕಿ ಭವನದ ಕಾಮಗಾರಿ ಪೂರ್ಣವಾಗುವ ನಿರೀಕ್ಷೆ ಇದೆ’ ಎಂದರು.

ಸಂಘದ ಮುಖಂಡ ಪ್ರಸನ್ನ ಕುಮಾರ್, ‘ರಾಜ್ಯದಲ್ಲಿ ವಾಲ್ಮೀಕಿ ಜನಾಂಗ 50 ಲಕ್ಷ ಜನಸಂಖ್ಯೆ ಹೊಂದಿದೆ. ಆದರೆ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಮುದಾಯದವರು ಹೇಳಿಕೊಳ್ಳುವಷ್ಟು ಪ್ರಗತಿ ಸಾಧಿಸುತ್ತಿಲ್ಲ. ಆದ ಕಾರಣ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸವಾಗಬೇಕು’ ಎಂದರು.

ಜಿಲ್ಲಾ ವಾಲ್ಮೀಕಿ ನಾಯಕ ನೌಕರರ ಕೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಪಿ.ಕೆ. ಸದಾನಂದ, ಉಪಾಧ್ಯಕ್ಷೆಯಾಗಿ ಕೆ. ಸಣ್ಣ ಸೂರಮ್ಮ, ಪ್ರಧಾನ ಕಾರ್ಯದರ್ಶಿಯಾಗಿ ಬಿ. ನಾಗರಾಜ ಅವರನ್ನು ಆಯ್ಕೆ ಮಾಡಲಾಯಿತು.

ವಾಲ್ಮೀಕಿ ಸಮುದಾಯದ ಮುಖಂಡರಾದ ಆರ್. ಮಾರುತ್ತೇಶ್, ಸೂರನಾಯಕ, ಆರ್. ಶಾಂತಪ್ಪ, ಡಿ.ಎಸ್. ರಾಜಣ್ಣ, ಚಿನ್ನೋಬಯ್ಯ, ಮಲ್ಲಿಕಾರ್ಜುನ್, ಶ್ರೀನಿವಾಸ್, ನಾಗೇಂದ್ರಬಾಬು, ಸತೀಶ್, ರವಿಶಂಕರ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT