ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾಶಯ ತುಂಬಿದಲ್ಲಿ ಪ್ರವಾಹ ಸಾಧ್ಯತೆ

ವೇದಾವತಿ ನದಿ ತೀರದ ನೂರಾರು ಕುಟುಂಬಗಳಿಗೆ ಕಂಟಕ
Last Updated 7 ಆಗಸ್ಟ್ 2022, 6:02 IST
ಅಕ್ಷರ ಗಾತ್ರ

ಹಿರಿಯೂರು: ಇನ್ನು ಕೇವಲ ನಾಲ್ಕೂವರೆ ಅಡಿ ನೀರು ಬಂದಲ್ಲಿ ತಾಲ್ಲೂಕಿನ ವಾಣಿವಿಲಾಸ ಜಲಾಶಯ ಕೋಡಿ ಬೀಳಲಿದೆ. ಕೋಡಿಯ ನೀರು ವೇದಾವತಿ ನದಿ ಮೂಲಕ ಮುಂದೆ ಸಾಗಲಿದ್ದು, ಹೆಚ್ಚಿನ ನೀರು ಹರಿದಲ್ಲಿ ಹಿರಿಯೂರು ನಗರದ ನದಿ ತೀರದಲ್ಲಿ ನೆಲೆಸಿರುವ ನೂರಾರು ಕುಟುಂಬಗಳು ಅಪಾಯಕ್ಕೆ ಸಿಲುಕಲಿವೆ.

1999–2000ದಲ್ಲಿ ಸುರಿದ ಮಳೆಗೆ ವೇದಾವತಿ ನದಿ ತುಂಬಿ ಹರಿದ ಪ್ರಯುಕ್ತ ನದಿ ತೀರದಲ್ಲಿಯ 20ಕ್ಕೂ ಹೆಚ್ಚು ಮನೆಗಳು ನೀರಿನಲ್ಲಿ ಮುಳುಗಿದ್ದವು. ಅಂದು ಸಚಿವರಾಗಿದ್ದ ಕೆ.ಎಚ್. ರಂಗನಾಥ್ ಅವರು ಸಂತ್ರಸ್ತ ಕುಟುಂಬಗಳಿಗೆ ಪರ್ಯಾಯ ವಸತಿ ವ್ಯವಸ್ಥೆ ಮಾಡಿಸಿದ್ದರು. ಬಸ್ ನಿಲ್ದಾಣ, ಆಸ್ಪತ್ರೆ, ವ್ಯಾಪಾರ–ವಹಿವಾಟು ಸ್ಥಳಗಳಿಗೆ ಹತ್ತಿರದಲ್ಲಿದ್ದರೆ ಕೂಲಿ ಸಿಗುತ್ತದೆ. ಹೋಗಿ–ಬರಲು ಅನುಕೂಲವಾಗುತ್ತದೆ ಎಂದು ನೂರಾರು ಬಡವರು ಏನಾದರಾಗಲಿ ಎಂದು ಅಪಾಯವನ್ನು ಲೆಕ್ಕಿಸದೇ ಮರಳಿ ನದಿ ತೀರದಲ್ಲಿಯೇ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಮತ್ತೊಮ್ಮೆ ಅಪಾಯಕ್ಕೆ ಆಹ್ವಾನ
ನೀಡಿದ್ದಾರೆ.

ಪ್ರಧಾನ ರಸ್ತೆಯಲ್ಲಿ ವೇದಾವತಿ ಸೇತುವೆಗೆ ಹೊಂದಿಕೊಂಡಂತೆ (ಮಾಂಸ ಮಾರುಕಟ್ಟೆ ಕೆಳಭಾಗದಲ್ಲಿ), ಬನದಮ್ಮ ದೇವಸ್ಥಾನದ ಎದುರು ಭಾಗದಲ್ಲಿ, ಬನ್ನಿಮಂಟಪದ ಕೆಳಭಾಗದಲ್ಲಿ, ನೃಪತುಂಗ ಬಡಾವಣೆಯ ಕೊನೆಯಲ್ಲಿ, ಕಟುಗರ ಹಳ್ಳದಲ್ಲಿ ವೇದಾವತಿ ನದಿಯ ಅಂಚಿಗೆ ನೂರಾರು ಮನೆಗಳನ್ನು ನಿರ್ಮಿಸಿದ್ದು, ನದಿಯಲ್ಲಿ ಸ್ವಲ್ಪ ಮಟ್ಟಿನ ಪ್ರವಾಹ ಬಂದರೂ ಇಲ್ಲಿ ನಿರ್ಮಿಸಿರುವ ಯಾವ ಮನೆಯೂ ಉಳಿಯುವುದಿಲ್ಲ.

ಬನದಮ್ಮ ದೇವಸ್ಥಾನ
ದವರೆಗಿನ ನದಿ ಮುಳ್ಳುಕಂಟಿಗಳಿಂದ ಮುಕ್ತವಾಗಿದ್ದು, (ಕೆಲವರು ನದಿಯಂಚಿನಲ್ಲಿ ಅನಧಿಕೃತವಾಗಿ ಉಳುಮೆ ಮಾಡುತ್ತಿರುವ ಕಾರಣ) ಅಲ್ಲಿಂದ ಮುಂದೆ ನದಿ ಕಾಣದ ರೀತಿಯಲ್ಲಿ ಬಳ್ಳಾರಿ ಜಾಲಿ ಪೊದೆ ಬೆಳೆದಿದೆ. ಅಕ್ಕಪಕ್ಕದ ನಿವಾಸಿಗಳು ಬಿಸಾಡಿರುವ ತ್ಯಾಜ್ಯವೆಲ್ಲ ಪೊದೆಯಲ್ಲಿ ಸಿಲುಕಿಕೊಂಡಿದ್ದು, ನದಿಯಲ್ಲಿಯ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿದೆ. ನೀರಿನ ಸೆಳಹು ಹೆಚ್ಚಿದಲ್ಲಿ ನಗರ ಭಾಗದ ಕಡೆಗೇ ನೀರು ನುಗ್ಗುವ ಸಾಧ್ಯತೆ
ಹೆಚ್ಚು.

ಸಾಯಿಬಾಬಾ ದೇಗುಲವೂ ಸುರಕ್ಷಿತವಲ್ಲ: ನದಿಯ ಅಂಚಿಗೆ ನೃಪತುಂಗ ಬಡಾವಣೆಯಲ್ಲಿ ನಿರ್ಮಿಸುತ್ತಿರುವ ಸಾಯಿಬಾಬಾ ದೇವಸ್ಥಾನವೂ ನದಿಯಲ್ಲಿ ಪ್ರವಾಹ ಬಂದಲ್ಲಿ ಸುರಕ್ಷಿತವಾಗಿ ಉಳಿಯುವುದಿಲ್ಲ. ತಾಲ್ಲೂಕು ಆಡಳಿತ, ನಗರಸಭೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ
ಖಚಿತ.

ಮುನ್ನೆಚ್ಚರಿಕೆ ವಹಿಸಿದ್ದೇವೆ

‘ಬಿಲ್ ಕಲೆಕ್ಟರ್ ಹಾಗೂ ಕಂದಾಯ ವಿಭಾಗದ ನೌಕರರಿಗೆ ವೇದಾವತಿ ನದಿ ತೀರದಲ್ಲಿರುವ ಅನಧಿಕೃತ ಮನೆಗಳ ಪಟ್ಟಿ ತಯಾರಿಸುವಂತೆ ಈಗಾಗಲೇ ಸೂಚಿಸಿದ್ದು, ಹವಾಮಾನ ಮುನ್ಸೂಚನೆ ನೋಡಿಕೊಂಡು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೋಟಿಸ್‌ ನೀಡುತ್ತೇವೆ’.

–ಡಿ. ಉಮೇಶ್, ಪೌರಾಯುಕ್ತರು

ಎಲ್ಲರಿಗೆ ಆಗಿದ್ದು ನನಗೂ ಆಗುತ್ತದೆ

‘ಹಮಾಲಿ ಕೆಲಸ ಮಾಡುತ್ತೇನೆ. ಹರಿಶ್ಚಂದ್ರಘಾಟ್‌ನಲ್ಲಿ ಮನೆ ಕೊಟ್ಟರೆ, ಅಲ್ಲಿಂದ ಬಂದು ಕೆಲಸ ಮಾಡಲು ಸಾಧ್ಯವೆ? ಐದಾರು ಕಿ.ಮೀ. ದೂರ ಆಗುತ್ತದೆ. ಮಧ್ಯಾಹ್ನದ ಊಟಕ್ಕೆ ಹೋಗಿ ಬರಲು ಸಾಧ್ಯವಿಲ್ಲ. ಅದಕ್ಕೆ ಇಲ್ಲಿ ಚಿಕ್ಕದಾಗಿ ಷೀಟ್‌ನ ಮನೆ ಮಾಡಿಕೊಂಡಿದ್ದೇನೆ. ಎಲ್ಲರಿಗೆ ಆಗಿದ್ದು ನನಗೂ ಆಗುತ್ತದೆ’.

– ನಜೀರ್, ಕಟುಗರ ಹಳ್ಳದ ಕೆಳಭಾಗದ ನಿವಾಸಿ.

ದೇವರಿದ್ದಾನೆ

‘ಇಪ್ಪತ್ತು ವರ್ಷಗಳ ಹಿಂದೆ ನದಿ ತುಂಬಿ ಬಂದಿದ್ದರಿಂದ ನನ್ನ ಮನೆ ಕೊಚ್ಚಿ ಹೋಗಿತ್ತು. ಆಗ ಬುನಾದಿ ಇರಲಿಲ್ಲ. ಈಗ ಬುನಾದಿ ನಿರ್ಮಿಸಿ ಮನೆ ಕಟ್ಟಿದ್ದೇವೆ. ಏನೂ ಆಗಲಿಕ್ಕಿಲ್ಲ. ದೇವರಿದ್ದಾನೆ’

–ರಂಗಮ್ಮ, ಬನ್ನಿಮಂಟಪದ ಸಮೀಪದ ಕೆಳಭಾಗದ ನಿವಾಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT