ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣರು ಆರೋಪ ಮುಕ್ತರಾಗಿ ಹೊರಬರುತ್ತಾರೆ: ಮರಳಗವಿ ಮಠ ಮುಮ್ಮಡಿ ಶಿವರುದ್ರ ಸ್ವಾಮೀಜಿ

ಶಿವಮೂರ್ತಿ ಮುರುಘಾ ಶರಣರ ಪರ ವಿವಿಧ ಮಠಾಧೀಶರ ಪತ್ರಿಕಾಗೋಷ್ಠಿ
Last Updated 30 ಆಗಸ್ಟ್ 2022, 10:08 IST
ಅಕ್ಷರ ಗಾತ್ರ

ಚಿತ್ರದುರ್ಗ: ವೈಚಾರಿಕ ಕ್ರಾಂತಿಗೆ ನಾಂದಿಹಾಡಿದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಷಡ್ಯಂತ್ರ ನಡೆದಿದೆ. ಅವರ ಮುಖಕ್ಕೆ ಕಪ್ಪು ಮಸಿ ಬಳಿಯಲಾಗುತ್ತಿದ್ದು, ಆರೋಪ ಮುಕ್ತರಾಗಿ‌ ಹೊರಬರುವ ಸಂಪೂರ್ಣ ವಿಶ್ವಾಸವಿದೆ ಎಂದು ಕನಕಪುರದ ಮರಳಗವಿ ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ತಿಳಿಸಿದರು.

ಮುರುಘಾ ಮಠದ ಆವರಣದಲ್ಲಿ ಮಠಾಧೀಶರ ಪ್ರತಿನಿಧಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

'ಶಿವಮೂರ್ತಿ ಮುರುಘಾ ಶರಣರು ವೈಚಾರಿಕ ಕ್ರಾಂತಿಯಿಂದ ನಾಡಿನ ಗಮನ ಸೆಳೆದವರು. ಅವರು ಪಟ್ಟಕ್ಕೆ ಬಂದ ಬಳಿಕ ಶ್ರೀಮಠವನ್ನು ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ್ದಾರೆ. ಅವರ ವೈಚಾರಿಕ ಬೆಳವಣಿಗೆ ಸಹಿಸದ ಕೆಲ ಶಕ್ತಿಗಳು ಷಡ್ಯಂತ್ರ ಹೆಣೆದಿದ್ದಾರೆ. ಇಲ್ಲಿ ಸತ್ಯ ಹೊರಗೆ ಬರುತ್ತದೆ. ಸ್ವಾಮೀಜಿ ಬೆಂಬಲಕ್ಕೆ ಶಾಖಾ ಮಠಾಧೀಶರು ಹಾಗೂ ವಿವಿಧ ಸಮುದಾಯದ ಸ್ವಾಮೀಜಿಗಳು ಇದ್ದೇವೆ' ಎಂದು ಹೇಳಿದರು.

'ಮಠದ ಭಕ್ತರು ಸ್ವಾಮೀಜಿ ಬೆನ್ನಿಗೆ ನಿಂತಿದ್ದಾರೆ. ಸ್ವಾಮೀಜಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ನಾಡಿನ ಹಿರಿಯ ಮಠಾಧೀಶರು ಶರಣರೊಂದಿಗೆ ಇದ್ದಾರೆ. ಸತ್ಯಕ್ಕೆ ಜಯವಾಗುತ್ತದೆ. ಶ್ರೀಮಠದ ಕೈಂಕರ್ಯ ಆಕಾಶದ ಎತ್ತರಕ್ಕೆ ಬೆಳೆಯುವ ವಿಶ್ವಾಸವಿದೆ' ಎಂದರು.

'ಮುರುಘಾ ಪರಂಪರೆಗೆ ನಡೆದುಕೊಳ್ಳುವ ಎಲ್ಲರೂ ಮಠದ ಭಕ್ತರು. ಸ್ವಾಮೀಜಿ ಆರೋಪಮುಕ್ತರಾಗಿ ಹೊರಬಂದು ಮಠದ ಕೈಂಕರ್ಯದಲ್ಲಿ ತೊಡಗಬೇಕು ಎಂಬ ಆಶಯ ಹೊಂದಿದ್ದಾರೆ. ಆಡಳಿತಾಧಿಕಾರಿ ನೇಮಕ ಪೀಠಾಧ್ಯಕ್ಷರ ಪರಮ ಅಧಿಕಾರ, ಪುನರ್ ನೇಮಕ ಅವರದೇ ತೀರ್ಮಾನ' ಎಂದು ನುಡಿದರು.

'ಮಕ್ಕಳು ದೇವರ ಸಮಾನ. ಪ್ರಕರಣ ತನಿಖಾ ಹಂತದಲ್ಲಿದ್ದು, ಹೆಚ್ಚು ಮಾತನಾಡಲು ಸಾಧ್ಯವಿಲ್ಲ' ಎಂದು ಸಂತ್ರಸ್ತ ಮಕ್ಕಳಿಗೆ ಸಂಬಂಧಿಸಿದ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸ್ವಾಮೀಜಿ ಪ್ರತಿಕ್ರಿಯಿಸಿದರು. ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೇ ಪತ್ರಿಕಾಗೋಷ್ಠಿಯಿಂದ ಹೊರನಡೆದರು.

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ, ಗಾಣಿಗ ಮಠದ ಬಸವಕುಮಾರ ಸ್ವಾಮೀಜಿ, ದಾವಣಗೆರೆ ಶಾಖಾ ಮಠದ ಬಸವಪ್ರಭು ಸ್ವಾಮೀಜಿ, ಉಳವಿ ಶಾಖಾಮಠದ ಶಿವಬಸವ ಸ್ವಾಮೀಜಿ, ಹೆಬ್ಬಾಳ ಮಠದ ಮಹಂತರುದ್ರ ಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧೆಡೆಯ ಇಪ್ಪತ್ತಕ್ಕೂ ಹೆಚ್ಚು ಮಠಾಧೀಶರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT