ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಚರ್ಮಗಂಟು ರೋಗ ಪತ್ತೆ ಹಚ್ಚಿ: ಕುಲಪತಿ ಡಾ.ಕೆ.ಸಿ. ವೀರಣ್ಣ ಸೂಚನೆ

ಪಶುವೈದ್ಯಾಧಿಕಾರಿಗಳಿಗೆ ಕುಲಪತಿ ಡಾ.ಕೆ.ಸಿ. ವೀರಣ್ಣ ಸೂಚನೆ
Last Updated 24 ಸೆಪ್ಟೆಂಬರ್ 2022, 4:43 IST
ಅಕ್ಷರ ಗಾತ್ರ

ಚಿತ್ರದುರ್ಗ: ಸೊಳ್ಳೆ ಮತ್ತು ಉಣ್ಣೆಯಿಂದ ಜಾನುವಾರುಗಳಿಗೆ ಬರುವ ಚರ್ಮಗಂಟು ರೋಗ ರಾಜ್ಯದ
ಹಲವು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದೆ. ವೈದ್ಯರು ಶೀಘ್ರವಾಗಿ ರೋಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಬೀದರ್‌ ಪಶುಸಂಗೋಪನೆ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ.ವೀರಣ್ಣ ತಿಳಿಸಿದರು.

ನಗರದ ಎಪಿಎಂಸಿ ಆವರಣದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ‘ಚರ್ಮಗಂಟು ರೋಗ, ಆಫ್ರಿಕನ್‌ ಸ್ವೈನ್‌ ಫೀವರ್‌’ ಕುರಿತು ಪಶು ವೈದ್ಯಾಧಿಕಾರಿಗಳಿಗೆಶುಕ್ರವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ರೋಗ 2019ರಲ್ಲಿ ಒಡಿಸ್ಸಾದಲ್ಲಿ ಪತ್ತೆಯಾಗಿದೆ. ಇದಕ್ಕೆ ಲಸಿಕೆ ಕಂಡು ಹಿಡಿಯಲಾಗಿದೆ. ಅರುಣಾಚಲಪ್ರದೇಶ ಹಾಗೂ ಕರ್ನಾಟಕದ ಹೊಸಕೋಟೆಯಲ್ಲಿ ಆಫ್ರಿಕನ್‌ ಸ್ವೈನ್‌ ಜ್ವರ ಪತ್ತೆಯಾಗಿದೆ. ಇದರ ನಿಯಂತ್ರಣಕ್ಕೆ ಸಂಶೋಧನೆಯ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ಪಶು ವೈದ್ಯಾಧಿಕಾರಿಗಳು ರೈತರೊಂದಿಗೆ ಸ್ನೇಹ ಸಂಪರ್ಕ ಹೊಂದಿದ್ದರೆ ಜಾನುವಾರುಗಳ ಚರ್ಮಗಂಟು ರೋಗದ ವೈರಸ್‌ ತಡೆಗಟ್ಟಬಹುದು. ಇದರಿಂದ ಹೈನುಗಾರಿಕೆಯಲ್ಲಿ ತೊಡಗಿರುವವರನ್ನು ಆರ್ಥಿಕವಾಗಿ ಸದೃಢವಾಗಿಸಬಹುದು’ ಎಂದರು.

‘ರೈತರಿಗೆ ಸಕಾಲಕ್ಕೆ ಹೊಸ ತಂತ್ರಜ್ಞಾನದ ಮಾಹಿತಿ ನೀಡಬೇಕು. ಎಲ್ಲರೂ ಒಟ್ಟಿಗೆ ಕೆಲಸ ನಿರ್ವಹಿಸಿದಾಗ ಮಾತ್ರ ಯಶಸ್ಸು ಸಾಧ್ಯ.
ಪಶುವೈದ್ಯಕೀಯ ಸಂಘ ಸಾಕಷ್ಟು ಕ್ರಿಯಾಶೀಲವಾಗಿದ್ದು, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ’ ಎಂದು ತಿಳಿಸಿದರು.

‘ಪಶು ವೈದ್ಯಕೀಯ ಕ್ಷೇತ್ರದಲ್ಲಿನ ಪ್ರಾಧ್ಯಾಪಕರು ಹೈನುಗಾರಿಕೆ, ಮೀನುಗಾರಿಕೆಯಲ್ಲಿ ತೊಡಗಿರುವವರನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ರೀತಿಯ ಸಂಶೋಧನೆಗಳು ನಡೆಸುತ್ತಿದ್ದಾರೆ. ಶಿಕ್ಷಣದಲ್ಲಿ ಪಶು ವೈದ್ಯಕೀಯ ಕ್ಷೇತ್ರಕ್ಕೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಗುಣಮಟ್ಟದ ಶಿಕ್ಷಣಕ್ಕೆ ಸಾಕಷ್ಟು ತರಬೇತಿ ನೀಡಲಾಗುತ್ತಿದೆ’ ಎಂದರು.

ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಎಸ್‌.ಕಲ್ಲಪ್ಪ ಮಾತನಾಡಿ, ‘ಚರ್ಮಗಂಟು ರೋಗಕ್ಕೆ ಈಗಾಗಲೇ ವಿಜ್ಞಾನಿಗಳು ಲಸಿಕೆ ಕಂಡುಹಿಡಿದಿದ್ದಾರೆ. ಈ ರೋಗವು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಆದರೂ ನಿರ್ಲಕ್ಷ್ಯವಹಿಸದೆ ಎಲ್ಲಾ ವೈದ್ಯರು ಕೆಲಸ ಮಾಡಬೇಕಿದೆ. ಆ ಉದ್ದೇಶದಿಂದ ಕಾರ್ಯಾಗಾರ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಟಿ.ಗೋಪಾಲ್‌, ಗದಗ ಪಶು ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ
ಡಾ.ಬಿ.ಎಂ.ವೀರೇಗೌಡ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಾಲಿ ಕ್ಲಿನಿಕ್‌ ಉಪನಿರ್ದೇಶಕ
ಡಾ.ಎನ್‌.ಬಾಬುರತ್ನ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಹರೀಶ್‌, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸಿ.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT