ಮಂಗಳವಾರ, ಆಗಸ್ಟ್ 16, 2022
21 °C

ಬಂದ್‌ ಬೆಂಬಲಿಸಲು ವೇಣು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ರಾಜಕೀಯ ಉದ್ದೇಶದಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿದ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಡಿ.5ರಂದು ನಡೆಯುತ್ತಿರುವ ಕರ್ನಾಟಕ ಬಂದ್‌ ಬೆಂಬಲಿಸುವಂತೆ ಕಾದಂಬರಿಕಾರ ಬಿ.ಎಲ್.ವೇಣು ಮನವಿ ಮಾಡಿದರು.

ಬಂದ್‌ ಹಿನ್ನೆಲೆಯಲ್ಲಿ ವೀರ ಸಂಗೊಳ್ಳಿ ರಾಯಣ್ಣ ಸೇನೆ ರೂಪಿಸಿದ ಪೋಸ್ಟರ್‌ ಅನ್ನು ಗುರುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಕೊರೊನಾ ಸೋಂಕಿನ ಕಾರಣಕ್ಕೆ ಹಲವು ತಿಂಗಳು ಅಂಗಡಿಗಳು ಬಾಗಿಲು ಮುಚ್ಚಿದ್ದವು. ಸ್ವಯಂ ಪ್ರೇರಿತವಾಗಿ ಬಂದ್‌ ಬಂಬಲಿಸುವಂತೆ ಮನವಿ ಮಾಡಿ. ಯಾರಿಗೂ ಬಲವಂತ ಮಾಡಬೇಡಿ, ಹೋರಾಟ ಶಾಂತಿಯುತವಾಗಿ ನಡೆಯಲಿ’ ಎಂದು ರಾಯಣ್ಣ ಸೇನೆ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

‘ವೋಟಿನ ಕಾರಣಕ್ಕೆ ಮರಾಠ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ತಮಿಳುನಾಡು ಹಾಗೂ ಆಂಧ್ರಪ್ರದೇಶದ ಹಲವರು ಬೆಂಗಳೂರಿನಲ್ಲಿದ್ದಾರೆ. ಮುಂದೊಂದು ದಿನ ತಮಿಳು, ತೆಲಗು ಪ್ರಾಧಿಕಾರ ರೂಪಿಸುವ ಸಾಧ್ಯತೆಯೂ ಇದೆ. ಕರಾವಳಿಯಲ್ಲಿ ಕೇರಳದವರಿದ್ದು, ಮಲಯಾಳಿ ನಿಗಮ ರೂಪಿಸಿದರೂ ಅಚ್ಚರಿ ಇಲ್ಲ. ಹೊರ ರಾಜ್ಯದಲ್ಲಿ ಕನ್ನಡ ಪ್ರಾಧಿಕಾರ ರಚನೆಯಾಗಿದೆಯೇ’ ಎಂದು ಪ್ರಶ್ನಿಸಿದರು.

‘ತಮಿಳು, ಮರಾಠಿ, ತೆಲಗು ಭಾಷಿಕರಂತೆ ಕನ್ನಡಿಗರಲ್ಲಿ ಭಾಷಾಭಿಮಾನವಿಲ್ಲ. ಇಂತಹ ಅಭಿಮಾನ ಇದ್ದಿದ್ದರೆ ಮರಾಠ ಪ್ರಾಧಿಕಾರ ರೂಪಿಸಲು ಸರ್ಕಾರ ಭಯಪಡುತ್ತಿತ್ತು. ಕನ್ನಡಕ್ಕೆ ಕುತ್ತು ಬಂದಿದ್ದು, ಭಾಷೆಯನ್ನು ಕಾಪಾಡುವ ತುರ್ತು ಎದುರಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಂಸ್ಕೃತಿ ಇಲಾಖೆ ಇದ್ದರೂ ಕನ್ನಡದ ಉಳಿವಿಗೆ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಾತಿ–ಧರ್ಮ ಉಳಿಸಲು ಹೊರಾಟ ಹುಟ್ಟಿಕೊಂಡಿವೆ. ಮೀಸಲಾತಿ ಕೇಳಲು ಪಾದಯಾತ್ರೆ ಹೊರಡಲು ಮಠಾಧೀಶರು ಸಜ್ಜಾಗಿದ್ದಾರೆ. ಮೀಸಲಾತಿ ನೀಡದಿದ್ದರೆ ಕಷ್ಟ ಎಂದು ಸರ್ಕಾರಕ್ಕೆ ಮತ್ತೊಬ್ಬ ಸ್ವಾಮೀಜಿ ಬೆದರಿಕೆ ಹಾಕುತ್ತಾರೆ. ಜಾತ್ಯತೀತ ರಾಷ್ಟ್ರವಾಗಿದ್ದರೂ, ದೇವರ ಹೆಸರಿನಲ್ಲಿ ಜಾತಿ ಮತ್ತು ಧರ್ಮದ ನಡುವೆ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ’ ಎಂದು ಕಿಡಿಕಾರಿದರು.

ವೀರ ಸಂಗೊಳ್ಳಿ ರಾಯಣ್ಣ ಸೇನೆ ಅಧ್ಯಕ್ಷ ಟಿ.ಆನಂದ್‌, ಮುಖಂಡರಾದ ಮಹಾಂತೇಶ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.