ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆನಾಡಲ್ಲಿ ‌ದಸರಾ ಸಂಭ್ರಮ

ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿದ ಜನರು l ವಾಹನಗಳಿಗೆ ವಿಶೇಷ ಅಲಂಕಾರ
Last Updated 6 ಅಕ್ಟೋಬರ್ 2022, 5:49 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಾದ್ಯಂತ ದಸರಾ ಹಬ್ಬವನ್ನು ಜನರು ಸಡಗರ ಸಂಭ್ರಮದಿಂದ ಆಚರಿಸಿದರು. ಒಂಬತ್ತು ದಿನ ಶಕ್ತಿ ದೇವತೆಗಳಿಗೆ ನವರಾತ್ರಿ ಪೂಜೆ ಸಲ್ಲಿಸಿದ ಭಕ್ತರು ಬುಧವಾರ ಬನ್ನಿ ಮುಡಿಯುವ ಮೂಲಕ ವಿಜಯ ದಶಮಿಯ ಸಂಭ್ರಮಕ್ಕೆ ಸಾಕ್ಷಿಯಾದರು.

ಸೂರ್ಯ ಉದಯಿಸುವ ಮುನ್ನವೇ ಮಹಿಳೆಯರು ಮನೆಗಳಲ್ಲಿ ಪೂಜಾ ಕೈಂಕರ್ಯ ಪೂರ್ಣಗೊಳಿಸಿದರು. ಬಳಿಕ ಕುಟುಂಬ ಸಮೇತ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ದೇವಸ್ಥಾನಗಳಿಗೆ ತೆರಳಿ ಬನ್ನಿ ಪಡೆದರು.

ಮೇಲುದುರ್ಗದ ಅಧಿದೇವತೆ ಏಕನಾಥೇಶ್ವರಿ, ಬರಗೇರಮ್ಮ, ಪಾಳೆಗಾರರ ಕುಲದೈವ ಉಚ್ಚಂಗಿ ಯಲ್ಲಮ್ಮ, ಕಣಿವೆ ಮಾರಮ್ಮ, ಚೌಡೇಶ್ವರಿ, ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇಗುಲಗಳಲ್ಲಿನ ನಿಗಧಿತ ಸ್ಥಳದಲ್ಲಿ ಬನ್ನಿ ಮುಡಿಯುವ ಸಂಪ್ರದಾಯ ನೆರವೇರಿಸಲಾಯಿತು.

ಬಹುತೇಕರು ಮೇಲುದುರ್ಗದ ಶಮಿ ವೃಕ್ಷಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಮನೆಗಳಲ್ಲಿನ ಗುರು–ಹಿರಿಯರಿಗೆ ಬನ್ನಿ ಹಂಚುವ ಮೂಲಕ ವಿಜಯದಶಮಿ ಹಬ್ಬದ ಶುಭಾಶಯ ಕೋರುವ ದೃಶ್ಯ ಸಾಮಾನ್ಯವಾಗಿತ್ತು. ಕಿರಿಯರು ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಸಾಮಾಜಿಕ ಜಾಲತಾಣಗಳ ಮೂಲಕವೂ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡಿದ್ದು ವಿಶೇಷವಾಗಿತ್ತು. ಮನೆಯ ಹಿರಿಯರು ಹೆಣ್ಣು ಮಕ್ಕಳಿಗೆ ಹಸಿರು ಬಳೆಗಳನ್ನು ನೀಡಿ ‌ಶುಭ ಹಾರೈಸಿದರು.

ನಗರದ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವತೆಯ ದೇಗುಲದಲ್ಲಿ ನವದುರ್ಗಿಯರ ಅವತಾರದ ರೀತಿಯಲ್ಲಿ ಒಂಬತ್ತು ದಿನಗಳೂ ಬಗೆಬಗೆಯ ವಿಶೇಷ ಪೂಜೆ ನೆರವೇರಿತು. ವಿಜಯದಶಮಿ ದಿನ ವಿಶೇಷ ಪೂಜೆ ಜರುಗಿತು. ಮುಂಜಾನೆ 5.30ಕ್ಕೆ ನಡೆದ ಪ್ರಥಮ ಪೂಜೆಗೆ ಸಾವಿರಾರು ಭಕ್ತರು ನೆರೆ ದಿದ್ದರು. ರಾತ್ರಿ 10ರವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೇವಿ ಮೂರ್ತಿಯ ಅಲಂಕಾರ ನೋಡಿ ಭಕ್ತರು ಪುನೀತರಾದರು. ನಗರದ ಕಣಿವೆ ಮಾರಮ್ಮ ದೇಗುಲದಲ್ಲೂ ವಿಶೇಷ ಅಲಂಕಾರ ಸೇವೆಗಳು ನಡೆದವು.

ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನದ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ‌ಕೆಳಗೋಟೆ ಗಣೇಶನ ದೇವಾಲಯದಲ್ಲಿ ಪೂಜೆ ನೆರವೇರಿಸಿದ ಬಳಿಕ ತುರುವನೂರು ರಸ್ತೆಯಲ್ಲಿನ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದ ಆವರಣದ ಸನ್ನಿಧಾನದಲ್ಲಿ ಶ್ರೀ ಮಹಾಲಕ್ಷ್ಮಿ ವೆಂಕಟರಮಣ ಸ್ವಾಮಿಯ ಬನ್ನಿಪೂಜೆ ನಡೆಯಿತು. ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.

ಸಂಪ್ರದಾಯದಂತೆ ನಗರದ ಸಂತೆ ಹೊಂಡದ ಬಳಿಯ ಬನ್ನಿ ಮಹಾಕಾಳಿ ದೇವಸ್ಥಾನದ ಮುಂಭಾಗ ಬುಧವಾರ ಸಂಜೆ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿಯ ಕೆಂಡಾರ್ಚನೆ ನೆರವೇರಿತು. ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಕೂರಿಸಿ, ಜಾನಪದ ಕಲಾಮೇಳಗಳೊಂದಿಗೆ ಸಂಜೆ ಮೆರವಣಿಗೆ ತೆರಳಿ, ಐತಿಹಾಸಿಕ ಸಿಹಿನೀರು ಹೊಂಡದಲ್ಲಿ ಗಂಗಾ ಪೂಜೆ ನೆರವೇರಿಸಿದ ಬಳಿಕ, ಬನ್ನಿ ಮಹಾಕಾಳಿ ದೇವಸ್ಥಾನದ ಮುಂಭಾಗ ಅರ್ಚಕರು ಹಾಗೂ ಮಹಾಭಕ್ತರಾದ ಜೋಗಪ್ಪರು ಕೆಂಡಾರ್ಚನೆ ಸೇವೆ ನೆರವೇರಿಸಿದರು.

ನವರಾತ್ರಿಯಲ್ಲಿ ನವದುರ್ಗಿಯರನ್ನು ಪೂಜಿಸುವುದು ಹಬ್ಬದ ವೈಶಿಷ್ಟ್ಯ. ಹೀಗಾಗಿ ಪುಷ್ಪ, ನವಧಾನ್ಯ, ತರಕಾರಿ, ಆಹಾರ ಪದಾರ್ಥ, ರೇಷ್ಮೆ ಸೀರೆ ಹೀಗೆ ವಿವಿಧ ಬಗೆಯ ವಸ್ತುಗಳಿಂದ ವೈಭವೋಪೇತವಾಗಿ ಅಲಂಕರಿಸುವ ಮೂಲಕ ಭಕ್ತರನ್ನು ಸೆಳೆಯುವಲ್ಲಿ ದೇವಸ್ಥಾನ ಸಮಿತಿಗಳು ಸಫಲವಾದವು.

ವಿಜಯ ದಶಮಿಗೂ ಮುನ್ನ ದಿನವಾದ ಮಂಗಳವಾರ ದೇವರ ಮೂರ್ತಿ, ಮನೆಯ ಅಲಂಕಾರ, ವಾಹನ ಗಳು, ಯಂತ್ರೋಪಕರಣ ಹಾಗೂ ಎಲೆಕ್ಟ್ರಿಕಲ್‌ ವಸ್ತುಗಳನ್ನು ಅಲಂಕರಿಸಿ ಆಯುಧ ಪೂಜೆ ನೆರವೇರಿಸಿದರು. ನಗರದ ಮದಕರಿ ನಾಯಕನ ವೃತ್ತದಲ್ಲಿ ವಾಹನಗಳ ಅಲಂಕಾರಕ್ಕೆ ಸ್ಟಾಲ್‌ಗಳು ತಲೆ ಎತ್ತಿದ್ದವು. ಇದರಿಂದಾಗಿ ಕಾರು, ಬೈಕ್‌, ಬಸ್‌, ಲಾರಿಗಳು ವಿಶೇಷ ಹೂವಿನ ಅಲಂಕಾರದಲ್ಲಿ ಕಂಗೊಳಿಸಿದವು. ಮನೆಗಳ ಮುಂದೆ ವಾಹನಗಳಿಗೆ ಪೂಜೆ ಸಲ್ಲಿಸಿದ ಬಳಿಕ ನಗರದಲ್ಲಿ ಒಂದು ಸುತ್ತು ಹಾಕಿ ವಾಹನ ಮಾಲೀಕರು ಸಂಭ್ರಮಿಸಿದರು.

ವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

ಚಿತ್ರದುರ್ಗದ ತುರುವನೂರು ರಸ್ತೆಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದ ಆವರಣದಲ್ಲಿ ಬುಧವಾರ ವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಶರನ್ನವರಾತ್ರಿ ಪ್ರಯುಕ್ತ ವೆಂಕಟರಮಣ ಸ್ವಾಮಿಗೆ ನಿತ್ಯ ವಿಶೇಷ ಪೂಜೆಗಳು ನೆರವೇರಿದ್ದು, ಬುಧವಾರ ಬೆಳಿಗ್ಗೆ ಧ್ವಜ ಅವರೋಹಣ, ಓಕಳಿ, ಉಯ್ಯಾಲೆ ಉತ್ಸವ ಜರುಗಿದವು. ಬಳಿಕ ಸಂಪ್ರದಾಯದಂತೆ ಗರುಡ ಪ್ರಾಕಾರ ನಡೆದ ನಂತರ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿದ ರಥದಲ್ಲಿ ಲಕ್ಷ್ಮೀದೇವಿ, ಪದ್ಮಾವತಿ ದೇವಿ ಸಮೇತ ವೆಂಕಟೇಶ್ವರ ಸ್ವಾಮಿಯನ್ನು ಬ್ರಹ್ಮರಥೋತ್ಸವಕ್ಕಾಗಿ ಕರೆತರಲಾಯಿತು.

ಗರುಡ ವಾಹನದ ಮೇಲೆ ಸ್ವಾಮಿಯನ್ನು ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಜಯ ಘೋಷಗಳೊಂದಿಗೆ ತೇರನ್ನು ಎಳೆಯುವ ಮೂಲಕ ಭಕ್ತರು ಭಕ್ತಿ ಸಮರ್ಪಿಸಿದರು. ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಅಂಬು ಕತ್ತರಿಸಿ ಅಂಬಿನೋತ್ಸವ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT