ಭಾನುವಾರ, ಆಗಸ್ಟ್ 14, 2022
25 °C

ಕಳಪೆ ರಸ್ತೆ ಕಾಮಗಾರಿ ನಿಲ್ಲಿಸಿದ ಹನುಮನಕಟ್ಟೆ ಗ್ರಾಮಸ್ಥರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಜಾಜೂರು: ಸಮೀಪದ ಹನುಮನಕಟ್ಟೆ ಗ್ರಾಮದ ಬಳಿ ಇರುವ ರೈಲ್ವೆ ಕೆಳ ಸೇತುವೆ ರಸ್ತೆ ಕಾಮಗಾರಿಯನ್ನು ಕಳಪೆಯಾಗಿ ಮಾಡುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ಶುಕ್ರವಾರ ಕಾಮಗಾರಿಯನ್ನು ತಡೆ ಹಿಡಿದರು.

ಎರಡು ವರ್ಷಗಳ ಹಿಂದೆ ಈ ರಸ್ತೆ ನಿರ್ಮಿಸಲಾಗಿತ್ತು. ಆದರೆ, ಕೆಲವೇ ತಿಂಗಳಲ್ಲಿ ಅದು ಸಂಪೂರ್ಣ ಹಾಳಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ ಹಲವು ತಿಂಗಳ ಹಿಂದೆ ವರದಿ ಮಾಡಿತ್ತು. ರೈಲ್ವೆ ಇಲಾಖೆ ಗುತ್ತಿಗೆದಾರರು ನಾಲ್ಕು ದಿನಗಳ ಹಿಂದೆ ರಸ್ತೆಗೆ ಹಾಕಲಾಗಿದ್ದ ಕಾಂಕ್ರಿಟ್‌ ಅನ್ನು ಅಗೆದು ಹಾಕಿದ್ದರು. ಗುರುವಾರ ಸುರಿದ ಮಳೆಗೆ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿ ವಾಹನ ಚಾಲಕರು ಪರದಾಡುವಂತಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ ಶುಕ್ರವಾರದ ಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು. ಶುಕ್ರವಾರ ಬೆಳಿಗ್ಗೆ ಗುತ್ತಿಗೆದಾರರರು ಕಾರ್ಮಿಕರೊಂದಿಗೆ ಬಂದು ಹಳೆಯ ಜಲ್ಲಿಯನ್ನು ಮಣ್ಣಿನಲ್ಲಿ ಹಾಕಿ, ಅದರ ಮೇಲೆ ಎಂ.ಸ್ಯಾಂಡ್‌ ಹಾಗೂ ಸಿಮೆಂಟ್‌ ಅನ್ನು ಕಲೆಸಿ ಹಾಕುತ್ತಿದ್ದುದನ್ನು ಕಂಡ ಗ್ರಾಮಸ್ಥರು, ‘ಕಾಮಗಾರಿ ಕಳಪೆಯಾಗಿದೆ’ ಎಂದು ಗುತ್ತಿಗೆದಾರರೊಂದಿಗೆ ವಾಗ್ವಾದಕ್ಕೆ ನಿಂತರು. ನಂತರ, ಗುತ್ತಿಗೆದಾರ ಕಾರ್ಮಿಕರೊಂದಿಗೆ ಹಿಂತಿರುಗಿದರು. ಶನಿವಾರ ಎಂಜಿನಿಯರ್‌ ಬರುತ್ತಿರುವುದಾಗಿ, ಅವರು ಬಂದ ನಂತರ ಅವರೊಂದಿಗೆ ಚರ್ಚಿಸಿ ಕಾಮಗಾರಿಯನ್ನು ಮಾಡಿಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

‘ಇದು ಕಾಟಾಚಾರದ ಕಾಮಗಾರಿಯಾಗಿದೆ. ಸಂಸದರು, ಶಾಸಕರು ಹಾಗೂ ಸಂಬಂಧ ಪಟ್ಟ ಇಲಾಖೆಯ ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿ, ಉತ್ತಮ ರಸ್ತೆ ನಿರ್ಮಿಸಿಕೊಡಬೇಕು. ಇಲ್ಲದಿದ್ದರೆ ಕಾಮಗಾರಿ ಮಾಡಲು ಬಿಡುವುದಿಲ್ಲ’ ಎಂದು ಆಡನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಆರ್‌.ಹರ್ಷ, ಪ್ರದೀಪ್‌, ಕೆಂಚಪ್ಪ, ಜಗದೀಶ್‌, ರಾಜಣ್ಣ, ಹನುಮನಕಟ್ಟೆ, ಕೇಶವಾಪುರ, ಬಿಜ್ಜೆನಾಳ್‌, ಕಾಶಿಪುರ, ಅರಸನಘಟ್ಟ, ಅಮೃತಾಪುರ ಮೊದಲಾದ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು