ಪ್ರಾಮಾಣಿಕತೆ ಇದ್ದಲ್ಲಿ ಕಾಮಗಾರಿ ಕಳಪೆಯಾಗದು

7
ವಿಶ್ವೇಶ್ವರಯ್ಯ ಜನ್ಮದಿನಾಚರಣೆಯಲ್ಲಿ ಸರ್ಕಾರದ ಕಾರ್ಯದರ್ಶಿ ಡಾ.ಕೆ.ಎಸ್. ಕೃಷ್ಣರೆಡ್ಡಿ ಅಭಿಮತ

ಪ್ರಾಮಾಣಿಕತೆ ಇದ್ದಲ್ಲಿ ಕಾಮಗಾರಿ ಕಳಪೆಯಾಗದು

Published:
Updated:
Deccan Herald

ಚಿತ್ರದುರ್ಗ: ಎಂಜಿನಿಯರ್‌, ಗುತ್ತಿಗೆದಾರ, ಜನಪ್ರತಿನಿಧಿಗಳ ಮಧ್ಯೆ ಉತ್ತಮ ವಿಶ್ವಾಸ, ಕೆಲಸದಲ್ಲಿ ದಕ್ಷತೆಯ ಜತೆಗೆ ಪ್ರಾಮಾಣಿಕತೆ ಇದ್ದರೆ ಸರ್ಕಾರ ಕೈಗೊಳ್ಳುವ ಯಾವುದೇ ಅಭಿವೃದ್ಧಿ ಕಾಮಗಾರಿಯಾಗಲಿ ಕಳಪೆಯಾಗದೆ, ಗುಣಮಟ್ಟದಿಂದ ನಿರ್ಮಾಣ ಆಗುವುದರಲ್ಲಿ ಅನುಮಾನವಿಲ್ಲ ಎಂದು ಸರ್ಕಾರದ ಕಾರ್ಯದರ್ಶಿ ಡಾ.ಕೆ.ಎಸ್. ಕೃಷ್ಣರೆಡ್ಡಿ ಅಭಿಪ್ರಾಯಪಟ್ಟರು.

ರೆಡ್ಡಿ ಸಮುದಾಯ ಭವನದಲ್ಲಿ ಭಾನುವಾರ ರಾಜ್ಯ ಸರ್ಕಾರಿ ಪದವೀಧರ ಎಂಜಿನಿಯರ್‌ಗಳ ಸಂಘ, ರಾಜ್ಯ ಎಂಜಿನಿಯರ್‌ಗಳ ಸೇವಾ ಸಂಘ, ಗುತ್ತಿಗೆದಾರರ ಸಂಘ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ 158 ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಎಂಜಿನಿಯರ್ ಹಾಗೂ ಗುತ್ತಿಗೆದಾರರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದ ಅವರು, ಕೆಲ ಗುತ್ತಿಗೆದಾರರು ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಅಣೆಕಟ್ಟು, ರಸ್ತೆ, ಚೆಕ್‌ಡ್ಯಾಂ, ಬೃಹತ್ ಕಟ್ಟಡಗಳನ್ನು ನಿರ್ಮಿಸುವಾಗ ಅದರ ಬಾಳಿಕೆ ಹಾಗೂ ಭವಿಷ್ಯ ನೀವು ಸೇರಿಕೊಂಡು ಮಾಡುವ ಗುಣಮಟ್ಟದ ಕಾಮಗಾರಿ ಮೇಲೆ ನಿಂತಿದೆ. ಆದ್ದರಿಂದ ಸಮಾಜ ನಿಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ’ ಎಂದರು.

‘ದೇಶ, ರಾಜ್ಯ ಕಟ್ಟುವಲ್ಲಿ ಎಂಜಿನಿಯರ್‌ಗಳ ಪಾತ್ರ ಅತ್ಯಂತ ಪ್ರಮುಖವಾದುದು. ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬ ಮನಸ್ಥಿತಿ ಇದ್ದಾಗ ಮಾತ್ರ ನಿಮಗೆ ನಿಜಕ್ಕೂ ಗೌರವದ ಜತೆಗೆ ಕೀರ್ತಿ ಸಿಗುತ್ತದೆ. ಅದಕ್ಕಾಗಿ ವಿಶ್ವೇಶ್ವರಯ್ಯ ಅವರಂಥೆ ದಕ್ಷತೆಯಿಂದ ಕೆಲಸ ಮಾಡಲು ಮುಂದಾಗಿ’ ಎಂದು ಸಲಹೆ ನೀಡಿದರು.

‘ಒಂದು ಯೋಜನೆಯ ಕುರಿತು ಕ್ರಿಯಾಯೋಜನೆ, ರೂಪುರೇಷೆ, ವಿನ್ಯಾಸ ಸಿದ್ಧಪಡಿಸಿಕೊಳ್ಳುವ ಮುನ್ನ ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡಬೇಕು. ಬಹುಕಾಲ ಉಳಿದು ಸಾರ್ವಜನಿಕರಿಗೆ ಉಪಯುಕ್ತವಾಗಬೇಕು. ಜವಾಬ್ದಾರಿ ಅರಿತು ನಿವೃತ್ತಿ ಆಗುವವರೆಗೂ ಉತ್ತಮ ಸೇವೆ ಸಲ್ಲಿಸಲು ಶ್ರಮಿಸಬೇಕು’ ಎಂದರು. 

ಭದ್ರಾ ಮೇಲ್ದಂಡೆ ಯೋಜನೆ ನಿವೃತ್ತ ಮುಖ್ಯ ಎಂಜಿನಿಯರ್ ಆರ್. ಚೆಲುವರಾಜು ಸನ್ಮಾನ ಸ್ವೀಕರಿಸಿ ಮಾತನಾಡಿ, ‘ವಿಶ್ವೇಶ್ವರಯ್ಯ ಅವರು ಕೇವಲ ಎಂಜಿನಿಯರ್ ಆಗಿ ಕೆಲಸ ಮಾಡಲಿಲ್ಲ. ಮೈಸೂರಿನ ದಿವಾನರಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ದೂರಾಲೋಚನೆ, ಶಿಸ್ತು, ದೂರದೃಷ್ಟಿ, ಸಮಯಪ್ರಜ್ಞೆ, ಪ್ರಾಮಾಣಿಕತೆ ಅವರಲ್ಲಿದ್ದ ಕಾರಣದಿಂದಲೇ ಇಂದಿಗೂ ಅವರನ್ನು ಯಾರು ಮರೆತಿಲ್ಲ. ಅವರ ಹಾದಿಯನ್ನು ಅನುಸರಿಸಿ ನೀವುಗಳು ನಡೆಯಬೇಕಿದೆ’ ಎಂದು ಸಲಹೆ ನೀಡಿದರು.

‘ಬೃಹತ್ ಕಾಮಗಾರಿ ಕೆಲಸ ಒಬ್ಬ ಎಂಜಿನಿಯರ್‌ ಮಾಡಲು ಖಂಡಿತ ಸಾಧ್ಯವಿಲ್ಲ. ಅದಕ್ಕೆ ಟೀಮ್ ವರ್ಕ್ ಮುಖ್ಯ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕೆಲವೆಡೆ ಮುಗಿಯುವ ಹಂತಕ್ಕೆ ತಲುಪಿದ್ದು, ಮುಂದಿನ ವರ್ಷದಲ್ಲಿ ಚಿತ್ರದುರ್ಗ ಇಲ್ಲವೇ ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ಖಂಡಿತ ನೀರು ಹರಿಯುವ ವಿಶ್ವಾಸವಿದೆ’ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್, ಎಂಜಿನಿಯರ್ ಸಂಘದ ಜಿಲ್ಲಾಧ್ಯಕ್ಷ ಸತೀಶ್‌ಬಾಬು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್, ಶಿವಮೊಗ್ಗ ವೃತ್ತದ ಸೂಪರಿಂಟೆಂಡೆಂಟ್ ಎಂಜಿನಿಯರ್ ಶಿವಾನಂದ ಬಣಕಾರ್, ಎಂಜಿನಿಯರ್‌ಗಳಾದ ಶ್ರೀನಿವಾಸ್, ಶಿವಕುಮಾರ್, ಎಂ.ನಾಗರಾಜ್, ದೇವರಾಜ್ ಇದ್ದರು. ಇದೇ ಸಂದರ್ಭದಲ್ಲಿ ಡಾ.ಕೆ.ಎಸ್. ಕೃಷ್ಣರೆಡ್ಡಿ, ಚೆಲುವರಾಜು ಅವರನ್ನು ಎಂಜಿನಿಯರ್‌ಗಳು, ಗುತ್ತಿಗೆದಾರರು ಸನ್ಮಾನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !