ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾರೇಜ್ ವೀಕ್ಷಿಸಿದ ಸ್ವಾಮೀಜಿ, ಶಾಸಕ

Last Updated 14 ನವೆಂಬರ್ 2019, 16:08 IST
ಅಕ್ಷರ ಗಾತ್ರ

ಪರಶುರಾಂಪುರ: ‘ಸುಮಾರು 30 ವರ್ಷಗಳಿಂದ ಚಿತ್ರದುರ್ಗಕ್ಕೆ ನೀರಾವರಿ ಯೋಜನೆ ಜಾರಿಗಾಗಿ ಹೋರಾಟ ಮಾಡಿಕೊಂಡು ಬಂದ ಪರಿಣಾಮವಾಗಿ ಈಗ ಭದ್ರಾ ನೀರು ವಾಣಿವಿಲಾಸ ಸಾಗರ ತಲುಪಿದೆ. ಮುಂದಿನ ದಿನಗಳಲ್ಲಿ ಚಳ್ಳಕೆರೆ ತಾಲ್ಲೂಕಿಗೂ ಬರಲಿದ್ದು ಆಗ ಇಲ್ಲಿ ನಿರ್ಮಾಣ ಮಾಡಿರುವ ಬ್ಯಾರೇಜ್‌ಗಳ ಮಹತ್ವ ತಿಳಿಯುತ್ತದೆ’ ಎಂದು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಪರಶುರಾಂಪುರ ಹೋಬಳಿಯ ಬೋಂಬೆರಹಳ್ಳಿ, ಚೌಳೂರು ಬಳಿ ನಿರ್ಮಾಣ ಮಾಡಿರುವ ಬ್ಯಾರೇಜ್‌ಗೆ ‌ಗುರುವಾರ ಭೇಟಿ ನೀಡಿದ ವೇಳೆಯಲ್ಲಿ ಅವರು ಮಾತನಾಡಿದರು.

‘ಈ ಭಾಗದ ಜೀವನದಿಯಾದ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್‌ಗಳು ಮಳೆ ನೀರಿನಿಂದ ತುಂಬಿದ್ದು ಕೃಷ್ಣರಾಜಸಾಗರದ ಡ್ಯಾಂ ನೋಡಿದ ಅನುಭವವಾಗುತ್ತದೆ. ಈ ಭಾಗದ ಶಾಸಕರು ಉತ್ತಮ ಕೆಲಸ ಮಾಡಿದ್ದು ಜನಪ್ರತಿನಿಧಿಗಳು ಶಾಶ್ವತ ಯೋಜನೆಗಳನ್ನು ಜಾರಿಗೊಳಿಸಿದಾಗ ಮಾತ್ರ ಜನರ ಮನಸಿನಲ್ಲಿ ಉಳಿಯುತ್ತಾರೆ ಅದಕ್ಕೆ ರಘುಮೂರ್ತಿಯವರೇ ಒಂದು ಉದಾಹರಣೆ’ ಎಂದರು.

‘ಉತ್ತರ ಕರ್ನಾಟಕ ಭಾಗದಲ್ಲಿದ್ದ ದಿವಂಗತ ಸಿದ್ದು ನ್ಯಾಮಗೌಡರ ತರಹ ರಘುಮೂರ್ತಿ ಸಹ ಈ ಭಾಗದಲ್ಲಿ ಬ್ಯಾರೇಜ್ ನಿರ್ಮಿಸುವ ಮೂಲಕ ಜನರ ಮನಸಿನಲ್ಲಿ ಉಳಿದಿದ್ದಾರೆ’ ಎಂದು ಬಣ್ಣಿಸಿದರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ, ‘ವೇದಾವತಿ ನದಿಯು ನಮ್ಮ ಕ್ಷೇತ್ರದಲ್ಲಿ 40 ಕೀ.ಮೀ ಹರಿಯುತ್ತಿದ್ದು ಅದರಲ್ಲಿ 4 ಕೀ.ಮಿ ಗೊಂದು ಬ್ಯಾರೇಜ್ ನಿರ್ಮಾಣ ಮಾಡುವ ಗುರಿಹೊಂದಲಾಗಿದೆ. ಈಗಾಗಲೇ ಬೋಂಬೆರಹಳ್ಳಿ, ಚೌಳೂರು, ಪರಶುರಾಂಪುರದ ಮೂರು ಕಡೆ ನನ್ನ ಅವಧಿಯಲ್ಲಿ ಬ್ಯಾರೆಜ್ ನಿರ್ಮಾಣ ಮಾಡಲಾಗಿದೆ. ಪಗಡಲಬಂಡೆ, ಹಾಲಿಗೊಂಡನಹಳ್ಳಿ ಬಳಿ ಮಾಜಿ ಶಾಸಕ ತಿಪ್ಪೇಸ್ವಾಮಿ ಕಾಲದಲ್ಲಿ ನಿರ್ಮಾಣವಾಗಿವೆ. ಇದರ ಜೊತೆಗೆ ಗೋಸಿಕೆರೆ ಬಳಿ ₹ 25 ಕೋಟಿ ವೆಚ್ಚದ ಮತ್ತು ಮೊದುರು, ಗೊರ್ಲತ್ತು ಬಳಿ ₹ 7 ಕೋಟಿ ವೆಚ್ಚದ ಬ್ಯಾರೇಜ್ ಕಾಮಗಾರಿಗೆ ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

₹ 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಬೋಂಬೆರಹಳ್ಳಿಯ ಬ್ಯಾರೆಜ್, ₹ 17 ಕೋಟಿ ವೆಚ್ಚದಲ್ಲಿ ನಿರ್ಮೀಸಿರುವ ಚೌಳೂರು ಬ್ಯಾರೇಜ್, ₹ 17 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪರಶುರಾಂಪುರ ಬ್ಯಾರೇಜ್ ವೀಕ್ಷಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ, ತಾಲ್ಲೂಕು ಪಂಚಾಯಿತಿ ಸದಸ್ಯೆ ರಂಜಿತಾ, ಗ್ರಾಮ ಪಂಚಾಯಿತಿ ಸದಸ್ಯರಾದ ಬೆಟ್ಟಪ್ಪ, ಲತಾ, ಮುಖಂಡರಾದ ಚನ್ನಕೇಶವ, ಬಸವರಾಜ್, ನಾಗರಾಜ, ಗುಜ್ಜಾರಪ್ಪ, ವೀರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT