ಮತದಾರರ ಓಲೈಕೆ ಪ್ರಯತ್ನಕ್ಕೆ ಕಡಿವಾಣ

7
ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ

ಮತದಾರರ ಓಲೈಕೆ ಪ್ರಯತ್ನಕ್ಕೆ ಕಡಿವಾಣ

Published:
Updated:
Deccan Herald

ಚಿತ್ರದುರ್ಗ: ಚುನಾವಣೆ ಘೋಷಣೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾತ್ರ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಮತದಾರರ ಮೇಲೆ ಪ್ರಭಾವ ಭೀರುವಂತಹ ಕಾರ್ಯಕ್ರಮಗಳನ್ನು ಗ್ರಾಮಾಂತರ ಪ್ರದೇಶದಲ್ಲೂ ನಡೆಸಲು ಅವಕಾಶವಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.

‘ಜಿಲ್ಲೆಯ ಆರು ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಚಿತ್ರದುರ್ಗ ನಗರಸಭೆ, ಚಳ್ಳಕೆರೆ ನಗರಸಭೆ ಹಾಗೂ ಹೊಸದುರ್ಗ ಪುರಸಭೆಗೆ ಮಾತ್ರ ಚುನಾವಣೆ ನಿಗದಿಯಾಗಿದೆ. ಆ.2ರಿಂದ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಜನಪ್ರತಿನಿಧಿಗಳು ನಗರ ವ್ಯಾಪ್ತಿಯಲ್ಲಿ ಮತದಾರರನ್ನು ಓಲೈಕೆ ಮಾಡಲು ಅವಕಾಶವಿಲ್ಲ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಸಮಾರಂಭ ಆಯೋಜಿಸುವ ಸಾಧ್ಯತೆ ಇದೆ. ಇದಕ್ಕೆ ಚುನಾವಣಾ ಆಯೋಗ ಅವಕಾಶ ನೀಡುವುದಿಲ್ಲ. ನೀತಿ ಸಂಹಿತೆ ಅನುಷ್ಠಾನಕ್ಕೆ ತಂಡಗಳನ್ನು ರಚಿಸಲಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ಚುನಾವಣೆಗೆ ಅಗತ್ಯವಿರುವ ಎಲ್ಲ ಸಿದ್ಧತೆ ನಡೆಯುತ್ತಿದೆ. ಅಧಿಸೂಚನೆ ಹೊರಬಿದ್ದ ಬಳಿಕ ಕೆಲಸಗಳು ಇನ್ನಷ್ಟು ಚುರುಕಾಗಿ ಪಡೆಯಲಿವೆ. ಉಮೇದುವಾರಿಕೆ ಸಲ್ಲಿಕೆ, ಮತ ಎಣಿಕೆ ಆಯಾ ನಗರಗಳಲ್ಲಿ ನಡೆಯುತ್ತದೆ. ಮತದಾನದ ಜಾಗೃತಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.

ವಿ.ವಿ.ಪ್ಯಾಟ್‌ ಇಲ್ಲ:

ವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆ ಹೆಚ್ಚಿಸುವ ಉದ್ದೇಶದಿಂದ ವಿಧಾನಸಭಾ ಚುನಾವಣೆಯಲ್ಲಿ ಬಳಸಿದ್ದ ಮತ ಖಾತರಿ ಯಂತ್ರವನ್ನು (ವಿ.ವಿ.ಪ್ಯಾಟ್‌) ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಳಸುತ್ತಿಲ್ಲ.

‘ವಿಧಾನಸಭಾ ಚುನಾವಣೆ ಕೇಂದ್ರ ಚುನಾವಣಾ ಆಯೋಗದ ನೇತೃತ್ವದಲ್ಲಿ ನಡೆದಿತ್ತು. ಹೀಗಾಗಿ, ವಿ.ವಿ.ಪ್ಯಾಟ್‌ ಬಳಸಲಾಗಿತ್ತು. ರಾಜ್ಯ ಚುನಾವಣಾ ಆಯೋಗ ಇನ್ನೂ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲ. ಆದರೆ, ಇದೇ ಮೊದಲ ಬಾರಿಗೆ ‘ನೋಟಾ’ ಬಳಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ಮತಯಂತ್ರದಲ್ಲಿ ಅಭ್ಯರ್ಥಿಯ ಭಾವಚಿತ್ರ ಸಹಿತ ವಿವರ ನೀಡಲಾಗುತ್ತದೆ. ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸುವವರು ಪರಿಷ್ಕೃತ ಪ್ರಮಾಣ ಪತ್ರಗಳನ್ನು ಸಲ್ಲಿಕೆ ಮಾಡುವುದು ಕಡ್ಡಾಯ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಮೂವರು ಸೂಚಕರು ಹಾಗೂ ಪಕ್ಷೇತರರಿಗೆ ಐವರು ಸೂಚಕರು ಸಹಿ ಹಾಕಬೇಕು’ ಎಂದು ವಿವರಿಸಿದರು.

 ದೂರು ಬಂದಿಲ್ಲ:
‘ವಿಧಾನಸಭಾ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಕೊಠಡಿಗಳು ಹಾಳಾಗಿದ್ದು ಗಮನಕ್ಕೆ ಬಂದಿಲ್ಲ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಕಾಲೇಜನ್ನು ಮತ ಎಣಿಕೆ ಕೇಂದ್ರವಾಗಿ ಬಳಸಿಕೊಳ್ಳಲಾಗಿತ್ತು. ಈ ಹೊಣೆಯನ್ನು ಲೋಕೋಪಯೋಗಿ ಇಲಾಖೆಗೆ ನೀಡಲಾಗಿತ್ತು. ಕಾಲೇಜು ಕೊಠಡಿ, ಪೀಠೋಪಕರಣ ಹಾಳಾಗಿರುವ ಕುರಿತು ಯಾರಿಂದಲೂ ದೂರು ಬಂದಿಲ್ಲ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ ಇದ್ದರು.

ಚುನಾವಣೆ ನಡೆಯಲಿರುವ ಮೂರು ನಗರಗಳ ಹೊರವಲಯದಲ್ಲಿ ಚೆಕ್‌ಪೋಸ್ಟ್‌ ತೆರೆಯಲು ಸಿದ್ಧತೆ ನಡೆಯುತ್ತಿದೆ. ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಭದ್ರತೆ ಒದಗಿಸುತ್ತೇವೆ
- ಶ್ರೀನಾಥ್‌ ಎಂ.ಜೋಶಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

 

ಠೇವಣಿ ಹಣ ಸಾಮಾನ್ಯ ಅಭ್ಯರ್ಥಿ  ಪರಿಶಿಷ್ಟ ಜಾತಿ, ಪಂಗಡ ಹಾಗೂ ಮಹಿಳೆ
ನಗರಸಭೆ   ₨ 2,000 ₨ 1,000
ಪುರಸಭೆ   ₨ 1,000 ₨ 500

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !