ಎಲ್ಲಾ ಕೆರೆಗಳಿಗೆ ನೀರು ಕೊಡಿ

7
ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳ ಸಭೆಯಲ್ಲಿ ಶಾಸಕ ಗೂಳಿಹಟ್ಟಿ ಡಿ.ಶೇಖರ್‌

ಎಲ್ಲಾ ಕೆರೆಗಳಿಗೆ ನೀರು ಕೊಡಿ

Published:
Updated:
Prajavani

ಹೊಸದುರ್ಗ: ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯಡಿ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ಕೊಡಲು ಕ್ರಮ ಕೈಗೊಳ್ಳಬೇಕು ಎಂದು ಎಂಜಿನಿಯರ್‌ಗಳಿಗೆ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಸೂಚಿಸಿದರು.

ಇಲ್ಲಿನ ಭದ್ರಾ ಮೇಲ್ದಂಡೆ ಯೋಜನೆ ಇಲಾಖೆಯಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಚಿತ್ರದುರ್ಗ ನಾಲೆಯಿಂದ ತಾಲ್ಲೂಕಿನ ಬಾಗೂರು ಹಾಗೂ ನೀರಗುಂದ ಗ್ರಾಮದ 3 ಕೆರೆಗಳಿಗೆ ಮಾತ್ರ ನೀರು ತುಂಬಿಸುವುದರಿಂದ ತಾಲ್ಲೂಕಿನ ಎಲ್ಲಾ ರೈತರಿಗೆ ಅನುಕೂಲ ಆಗುವುದಿಲ್ಲ. ಹಾಗಾಗಿ, ಆ ಭಾಗದಲ್ಲಿ ಬರುವ ಮಲ್ಲಪ್ಪನಹಳ್ಳಿ, ಹೆಬ್ಬಳ್ಳಿ, ನಾಗರಕಟ್ಟೆ, ದೇವಪುರ, ಗೂಳಿಹಟ್ಟಿ, ಜಾನಕಲ್‌ ಸೇರಿ ಇನ್ನಿತರ ಕೆರೆಗಳಿಗೂ ನೀರು ತುಂಬಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಈ ನೀರಾವರಿ ಯೋಜನೆಯ ಕಾಮಗಾರಿ ಆರಂಭವಾಗಿ 11 ವರ್ಷಕ್ಕೆ ಕೇವಲ ₹ 2,670 ಕೋಟಿ ಖರ್ಚು ಮಾಡಲಾಗಿದೆ. ಈ ಯೋಜನೆಗೆ ಮೀಸಲಿಟ್ಟಿರುವ ಇನ್ನೂ ₹ 9,670 ಕೋಟಿ ಖರ್ಚು ಮಾಡಲು ಇನ್ನೆಷ್ಟು ವರ್ಷ ಬೇಕು ಎಂದು ಪ್ರಶ್ನಿಸಿದರು.

ಯೋಜನೆಯಡಿ ವಾಣಿ ವಿಲಾಸ ಜಲಾಶಯಕ್ಕೆ ಯಾವಾಗ ನೀರು ಹರಿಯುತ್ತದೆ ಎಂಬುದರ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನಸಾಮಾನ್ಯರಿಗೆ ವಾಸ್ತವಿಕ ಮಾಹಿತಿ ನೀಡಬೇಕು. ಈ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡಬೇಕು. ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಯೋಜನೆಯ ಸಹಾಯಕ ಎಂಜಿನಿಯರ್‌ ಸುರೇಶ್‌, ‘ಹುಣಸಘಟ್ಟದ ಸಮೀಪ ವಿದ್ಯುತ್‌ ಟವರ್‌ ಹಾಕಲು ರೈತರು ಆಕ್ಷೇಪಣೆ ಮಾಡುತ್ತಿರುವುದರಿಂದ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸುವುದು ತಡ ಆಗುತ್ತಿದೆ. ಆ ಕೆಲಸ ಮುಗಿದ ತಕ್ಷಣ ಬೇಗೂರು ಹಳ್ಳದ ಮೂಲಕ, ವಾಣಿ ವಿಲಾಸ ಸಾಗರಕ್ಕೆ ಪ್ರತಿವರ್ಷ 2 ಟಿಎಂಸಿ ನೀರು ಹರಿಸಲಾಗುವುದು. ತಾಲ್ಲೂಕಿನ 1.10 ಲಕ್ಷ ಎಕರೆಗೆ ಇಸ್ರೇಲ್‌ ಮಾದರಿಯಲ್ಲಿ ಹನಿ ನೀರಾವರಿ ವ್ಯವಸ್ಥೆ ಮಾಡಲು ಟೆಂಡರ್‌ ಪ್ರಕ್ರಿಯೆ ಮುಗಿದಿದೆ’ ಎಂದು ತಿಳಿಸಿದರು.

ಹೊಸದುರ್ಗ ನೀರಾವರಿ ಹೋರಾಟ ಸಮಿತಿಯ ಹೆಬ್ಬಳ್ಳಿ ಮಲ್ಲಿಕಾರ್ಜುನ್‌, ಭದ್ರಾ ಮೇಲ್ದಂಡೆ ಯೋಜನೆಯ ಎಂಜಿನಿಯರ್‌ ಹಾಗೂ ಅಧಿಕಾರಿಗಳು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !