ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ದಿನಗಳಿಗೊಮ್ಮೆ ನಲ್ಲಿ ನೀರು

ತಾಲ್ಲೂಕಿನ ಹಲವೆಡೆ ಶುದ್ಧ ಕುಡಿಯುವ ನೀರಿನ ಘಟಕವಿಲ್ಲ
Last Updated 14 ಮೇ 2022, 2:29 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಾಲ್ಕು ದಿನಗಳಿಗೊಮ್ಮೆ ನಲ್ಲಿಯಲ್ಲಿ ನೀರು ಬರುತ್ತಿದೆ. ಇದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ.

300ಕ್ಕೂ ಅಧಿಕ ಮನೆಯಿರುವ ನಾಗೇನಹಳ್ಳಿಯಲ್ಲಿ ಮನೆ ಮುಂದೆ ನಲ್ಲಿ ಇದ್ದರೂ ನೀರಿಗಾಗಿ ಟ್ಯಾಂಕ್‌ಗಳ ಮೊರೆ ಹೋಗುವ ದುಃಸ್ಥಿತಿ ಇದೆ‌.

‘4 ದಿನಗಳಿಗೊಮ್ಮೆ ನಲ್ಲಿಯಲ್ಲಿ ನೀರು ಬರುತ್ತವೆ.‌ ನೀರು ಬಂದಾಗಲೇ ಮನೆಯಲ್ಲಿನ ಡ್ರಮ್, ತೊಟ್ಟಿ ಮತ್ತು ಎಲ್ಲಾ ಕೊಡಗಳನ್ನು ತುಂಬಿಸಿಕೊಳ್ಳಬೇಕು. ಇಲ್ಲವಾದಲ್ಲಿ ನೀರು ತರಲು ಟ್ಯಾಂಕ್ ಬಳಿ ಹೋಗಬೇಕಾಗುತ್ತದೆ. ನಾಲ್ಕು ದಿನಗಳು ತೊಟ್ಟಿ, ಡ್ರಮ್‌ಗಳಲ್ಲಿ ನೀರು ಸಂಗ್ರಹಿಸಿಟ್ಟರೆ ಲೋಳೆ ಬರುತ್ತದೆ. ಅಡುಗೆ ಮಾಡಲು ನೀರು ಯೋಗ್ಯವಾಗುವುದಿಲ್ಲ. ಊರಿನಲ್ಲಿ ಎರಡು ಟ್ಯಾಂಕ್‌ಗಳಿವೆ. ಅಲ್ಲಿ ನಿತ್ಯ ನೀರು ಇರುತ್ತವೆ. ನಲ್ಲಿಯಲ್ಲೂ ನಿತ್ಯ ನೀರು ಬಂದರೆ ನೀರಿಗಾಗಿ ಅಲೆದಾಡುವುದುತಪ್ಪುತ್ತದೆ’ ಎನ್ನುತ್ತಾರೆ ಗ್ರಾಮಸ್ಥರು.

ಮಳೆಯಿಂದಾಗಿ ಎರಡು ದಿನ ನೀರಿಲ್ಲ:

ಶೀರನಕಟ್ಟೆಯ ಕೋಡಿಹಳ್ಳಿಹಟ್ಟಿಯಲ್ಲಿ ಕೆಲವು ದಿನಗಳಿಂದ ಸುರಿದ ಮಳೆ ಗಾಳಿಗೆ ವಿದ್ಯುತ್ ಇರಲಿಲ್ಲ. ಮೋಟರ್ ಸಹ ಕೆಟ್ಟು ಹೋಗಿದ್ದು, ಎರಡು ದಿನಗಳು ನೀರಿಗೆ ಪರಿತಪಿಸುವಂತಾಗಿತ್ತು. ಮಳೆ ಗಾಳಿ
ಬಂದಾಗ ನೀರಿನ ಸಮಸ್ಯೆ ಸಾಮಾನ್ಯವಾಗಿದೆ.

‘ಕೋಡಿಹಳ್ಳಿಹಟ್ಟಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದೆ. ಈ ಕುರಿತು ಪಂಚಾಯಿತಿಯಲ್ಲಿ ವಿಚಾರಿಸಿದಾಗ ಸರಿ ಮಾಡಿಸುತ್ತೇವೆ ಎಂದು ಭರವಸೆ ನೀಡುತ್ತಾರೆ. ಆದರೆ ಕ್ರಮ ಕೈಗೊಂಡಿಲ್ಲ. ತಿಮ್ಮಯ್ಯನಹಟ್ಟಿ, ದಾಸಜ್ಜನಹಟ್ಟಿ, ನಾಗಯ್ಯನಹಟ್ಟಿ, ಕೆರೆಕೋಡಿಹಳ್ಳಿಹಟ್ಟಿ, ಶೀರನಕಟ್ಟೆ ಗ್ರಾಮಸ್ಥರು ಇಲ್ಲಿಯ ಶುದ್ಧ ಕುಡಿಯುವ ನೀರಿನ ಘಟಕದಲ್ಲಿನ ನೀರನ್ನು ಕೊಂಡ್ಯೊಯ್ಯುವ ಸ್ಥಿತಿ ಇದೆ. ಘಟಕ ಹಾಳಾಗಿರುವ ಕಾರಣ ನಿತ್ಯ 6 ಕಿ.ಮೀ. ದೂರದ ಬೇವಿನಹಳ್ಳಿಗೆ ಅಥವಾ 7 ಕಿ.ಮೀ. ದೂರದ ಮಾಡದಕೆರೆಹೋಗಿ ನೀರು ತರುವಂತಹ ಸ್ಥಿತಿ ಇದೆ. ಕೂಡಲೇ ಶುದ್ಧ ಕುಡಿಯುವ ನೀರಿನ
ಘಟಕ ಸರಿಪಡಿಸಬೇಕು‘ ಎಂದು ಕೋಡಿಹಳ್ಳಿಹಟ್ಟಿಯ ಅಶೋಕ್ ಒತ್ತಾಯಿಸಿದರು.

ತಾಲ್ಲೂಕಿನ ತುಂಬಿನಕೆರೆ, ಕಡಿವಾಣಕಟ್ಟೆ ಹಾಗೂ ಲಂಬಾಣಿಕಟ್ಟೆಯಲ್ಲಿ ಬಳಸುವ ನೀರಿಗೇನು ತೊಂದರೆಯಿಲ್ಲ. ಆದರೆ ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ನಿತ್ಯ 2 ಕಿ.ಮೀ. ಕ್ರಮಿಸಿ ಹೆಬ್ಬಳಿ ನೀರಿನ ಘಟಕಕ್ಕೆ ಹೋಗಿ ನೀರು ತರುವ ಸ್ಥಿತಿ ಇದೆ.

ತಾಲ್ಲೂಕಿನಲ್ಲಿ ಕಳೆದ ಬಾರಿ ಮಳೆಯಾಗಿದ್ದು, ಜನ ನೀರಿನ ಸಮಸ್ಯೆಯಿಂದ ಸ್ವಲ್ಪ ಪ್ರಮಾಣದಲ್ಲಿ ಹೊರ ಬಂದಿದ್ದಾರೆ. ಆದರೆ ಕೆಲವೆಡೆ, ಪೂರೈಕೆ, ನಿರ್ವಹಣೆ ಇಲ್ಲದ ಕಾರಣ ಸಮಸ್ಯೆ ಹೆಚ್ಚಿದೆ.

ತುಂಬಿನಕೆರೆ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಅನುಮೋದನೆ ಬಂದಿದ್ದು, ಕಾಮಗಾರಿ ಪ್ರಕ್ರಿಯೆಯಲ್ಲಿದೆ. ಉಳಿದ ಕಡೆ ನೀರಿನ ಸಮಸ್ಯೆಯಿಲ್ಲ.
–ಅಪೂರ್ವ ಮಂಜುನಾಥ್, ಅಧ್ಯಕ್ಷೆ, ಹೆಬ್ಬಳ್ಳಿ ಗ್ರಾ.ಪಂ.

ನಾಗೇನಹಳ್ಳಿಯಲ್ಲಿ ನಾಲ್ಕು ದಿನಗಳಿಗೊಮ್ಮೆ ನೀರು ಬರುತ್ತದೆ. ಬಟ್ಟೆ ತೊಳೆಯಲು ಇಲ್ಲಿನ ಹಲವು ಜನರು ಕೆರೆಗಳಿಗೆ ಹೋಗುತ್ತಾರೆ. ಸಮಾರಂಭ ಹಾಗೂ ಹಬ್ಬದ ಸಮಯದಲ್ಲಿ ನೀರಿಗೆ ತೊಂದರೆ ಉಂಟಾಗುತ್ತಿದೆ. ಎರಡು ದಿನಗಳಿಗೊಮ್ಮೆಯಾದರೂ ನೀರು ಬಿಡಬೇಕು.
–ಕಮಲಮ್ಮ,ನಾಗೇನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT