ಬುಧವಾರ, ಜನವರಿ 19, 2022
23 °C

ಹೊಳಲ್ಕೆರೆ: ನುಲೇನೂರು ರೈಲ್ವೆ ಕೆಳಸೇತುವೆಯಲ್ಲಿ ನೀರು, ತಪ್ಪದ ಕೆಸರಿನ ಸ್ನಾನ

ಸಾಂತೇನಹಳ್ಳಿ ಸಂದೇಶ್ ಗೌಡ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ತಾಲ್ಲೂಕಿನ ಆರ್. ನುಲೇನೂರು ಸಮೀಪದ ರೈಲ್ವೆ ಕೆಳಸೇತುವೆ ಅವಾಂತರದಿಂದ ವಿದ್ಯಾರ್ಥಿಗಳು ಕೆಸರಿನಲ್ಲಿ ಬಿದ್ದು, ಎದ್ದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿನ ರೈಲು ನಿಲ್ದಾಣದ ಸಮೀಪ ಕೆಳಸೇತುವೆ ನಿರ್ಮಿಸಿದ್ದು, ಮಳೆಗಾಲದಲ್ಲಿ ಸದಾ ನೀರು ತುಂಬಿರುತ್ತದೆ. ಮಳೆ ನಿಂತು ವಾರ ಕಳೆದರೂ ನೀರು ಖಾಲಿ ಆಗುವುದಿಲ್ಲ. ಮೊಳಕಾಲುದ್ದ ನಿಂತಿರುವ ನೀರಿನಲ್ಲೇ ಜನರು ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳು ಕೆಸರು ನೀರಿನಲ್ಲಿ ಬಿದ್ದು ಎದ್ದು ಶಾಲಾ, ಕಾಲೇಜಿಗೆ ಹೋಗುವ ಪರಿಸ್ಥಿತಿ ಇದೆ.

ಮಾಳೇನಹಳ್ಳಿ ಹಾಗೂ ಲಂಬಾಣಿಹಟ್ಟಿ ಗ್ರಾಮಗಳ ಸುಮಾರು 50 ವಿದ್ಯಾರ್ಥಿಗಳು ಆರ್. ನುಲೇನೂರು ಗ್ರಾಮದ ಸ್ವತಂತ್ರ ಜ್ಯೋತಿ ಪ್ರೌಢಶಾಲೆಗೆ ನಿತ್ಯ ಬರುತ್ತಿದ್ದು, ಕೆಸರು ನೀರಿನಲ್ಲಿ ಎದ್ದು ಹೋಗಬೇಕಿದೆ. ಸೈಕಲ್‌ಗಳು ನೀರಿನಲ್ಲಿ ದಾಟಲಾರದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

‘ಕೆಳಸೇತುವೆ ನಿರ್ಮಾಣ ಕಾಮಗಾರಿಯನ್ನು ಅರೆಬರೆಯಾಗಿ ಮಾಡಿ ಬಿಟ್ಟು ಹೋಗಿದ್ದಾರೆ. ಎರಡೂ ಕಡೆ ತಡೆಗೋಡೆ ನಿರ್ಮಿಸಿಲ್ಲ. ಇದರಿಂದ ಮಣ್ಣು ಕುಸಿದು ಬೀಳುತ್ತಿದ್ದು, ಕೆಸರುಮಯವಾಗುತ್ತದೆ. ಈ ಸೇತುವೆಯ ಕಾಮಗಾರಿಯೂ ಕಳಪೆಯಾಗಿದ್ದು, ಚಾವಣಿಯಿಂದ ನೀರು ಸೋರುತ್ತಿದೆ. ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಕೆಸರಿನಲ್ಲಿ ಬಿದ್ದು ಹೋಗುತ್ತಾರೆ. ಕೆಲವು ವಿದ್ಯಾರ್ಥಿಗಳು ರೈಲು ಹಳಿಗಳನ್ನು ದಾಟಿ ಹೋಗುತ್ತಾರೆ. ಈ ಮಾರ್ಗದಲ್ಲಿ ಎಕ್ಸ್‌ಪ್ರೆಸ್ ರೈಲುಗಳು ವೇಗವಾಗಿ ಸಂಚರಿಸುತ್ತಿದ್ದು, ಪೋಷಕರು ಮಕ್ಕಳನ್ನು ಕಳುಹಿಸಲು ಭಯಪಡುವಂತಾಗಿದೆ’ ಎನ್ನುತ್ತಾರೆ ಲಂಬಾಣಿಹಟ್ಟಿ ಗ್ರಾಮದ ಧನಂಜಯ ನಾಯ್ಕ್.

ನುಲೇನೂರು ಗ್ರಾಮದ ರೈತರ ತೋಟಗಳು ಇದೇ ಮಾರ್ಗದಲ್ಲಿ ಇದ್ದು, ಮಳೆಗಾಲದಲ್ಲಿ ತೋಟಗಳಿಗೆ ಹೋಗಲಾಗದೆ ಪರಿತಪಿಸುವಂತಾಗಿದೆ.

‘ಕೆಳಸೇತುವೆ ನಿರ್ಮಾಣ ಆಗುವುದಕ್ಕೂ ಮುಂಚೆ ರೈಲು ಹಳಿಗಳನ್ನು ದಾಟಿ ಹೋಗುತ್ತಿದ್ದೆವು. ಈಗ ಅಂಡರ್‌ಪಾಸ್ ತುಂಬ ನೀರು ನಿಲ್ಲುತ್ತಿದ್ದು, ತೋಟಗಳಿಗೆ ಹೋಗಲಾಗುತ್ತಿಲ್ಲ. ಮೊಳಕಾಲುದ್ದ ನೀರು ನಿಂತಿರುವುದರಿಂದ ನಮ್ಮೂರಿನ 100ಕ್ಕೂ ಹೆಚ್ಚು ಬೈಕ್ ಗಳು ಕೆಟ್ಟುಹೋಗಿವೆ. ಕೆಳಸೇತುವೆ ಬದಲಿಗೆ ಮೇಲ್ಸೇತುವೆ ನಿರ್ಮಿಸಿದ್ದರೆ ಅನುಕೂಲ ಆಗುತ್ತಿತ್ತು. ಈ ರಸ್ತೆ ಗುಂಡೇರಿ ಮೂಲಕ ವಿವಿಧ ಹಳ್ಳಿಗಳನ್ನು ಸಂಪರ್ಕಿಸುತ್ತಿದ್ದು, ಎಲ್ಲರಿಗೂ ತೊಂದರೆ ಆಗಿದೆ’ ಎಂದು ನುಲೇನೂರು ಗ್ರಾಮದ ಸಾಹಿತಿ ಜಿ.ಎನ್.ಬಸವರಾಜಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಶಿವಪುರ ಮಾರ್ಗದಲ್ಲೂ ಸಮಸ್ಯೆ

ಪಟ್ಟಣದಿಂದ ಮಲ್ಕಾಪುರ ಮೂಲಕ ಶಿವಪುರ ತಲುಪುವ ಮಾರ್ಗದಲ್ಲಿ ರೈಲ್ವೆ ಕೆಳಸೇತುವೆ ನಿರ್ಮಿಸಿದ್ದು, ಇಲ್ಲಿಯೂ ಮಳೆ ನೀರು ತುಂಬಿಕೊಂಡು ಪ್ರಯಾಣಿಕರಿಗೆ ತೊಂದರೆಯಾಗಿದೆ.

‘ಈ ಮಾರ್ಗದಲ್ಲಿ ಕುನುಗಲಿ, ಹುಲೇಮಳಲಿ, ಶಿವಪುರ, ಅಗ್ರಹಾರ, ದಾಸಿಕಟ್ಟೆ, ಎಮ್ಮಿಗನೂರು, ಹೊಸಹಟ್ಟಿ ಗ್ರಾಮಗಳಿದ್ದು, ಮಳೆ ಬಂದಾಗ ಇಲ್ಲಿ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಆಗ ಗುಂಡಿಮಡು ಮೂಲಕ ಐದಾರು ಕಿ.ಮೀ. ಸುತ್ತು ಹಾಕಿಕೊಂಡು ಬರಬೇಕು’ ಎನ್ನುತ್ತಾರೆ ಕುನುಗಲಿಯ ನಾಗಣ್ಣ.

ಕೆಳಸೇತುವೆಯಲ್ಲಿ ಕೆಸರು, ನೀರು ತುಂಬಿಕೊಳ್ಳುವುದರಿಂದ ತೋಟಗಳಿಗೆ ಹೋಗಲು ತೊಂದರೆ ಆಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು. ಜಿ.ಎನ್.ಬಸವರಾಜಪ್ಪ, ಸಾಹಿತಿ, 

ಮಲ್ಕಾಪುರ ಮಾರ್ಗವಾಗಿ ನೇರವಾಗಿ ಶಿವಪುರ ತಲುಪುವಂತೆ ನಿರ್ಮಿಸಿರುವ ರಸ್ತೆ ಉತ್ತಮವಾಗಿದೆ. ಆದರೆ ರೈಲ್ವೆ ಕೆಳಸೇತುವೆಯಲ್ಲಿ ನೀರು ನಿಲ್ಲುವುದರಿಂದ ಸಂಚಾರಕ್ಕೆ ತೊಂದರೆ ಆಗಿದೆ.

ಎಸ್.ಆರ್.ಅಜ್ಜಯ್ಯ, ಶಿವಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು