ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿವಿಲಾಸಕ್ಕೆ ನೀರು: ತಜ್ಞರೊಂದಿಗೆ ಚರ್ಚೆ

ನೀರಾವರಿ ತಜ್ಞ ರಾಜಾರಾಂ ಅವರನ್ನು ಭೇಟಿ ಮಾಡಿದ ಶಾಸಕಿ ಪೂರ್ಣಿಮಾ
Last Updated 25 ಫೆಬ್ರುವರಿ 2022, 4:24 IST
ಅಕ್ಷರ ಗಾತ್ರ

ಹಿರಿಯೂರು:ತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ ಹೆಚ್ಚಿನ ನೀರನ್ನು ಹರಿಸುವ ಬಗ್ಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಗುರುವಾರ ಬೆಂಗಳೂರಿನಲ್ಲಿ ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾಂ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಭದ್ರಾ ಮೇಲ್ದಂಡೆ ಹಾಗೂ ವಿ.ವಿ ಸಾಗರ ಅಚ್ಚುಕಟ್ಟು ಪ್ರದೇಶ ರೈತ ಮುಖಂಡರೊಂದಿಗೆ ತಜ್ಞರನ್ನು ಭೇಟಿ ಮಾಡಿದ ಶಾಸಕರು, ‘ನೀರಿನ ಕೊರತೆ ಕಾರಣಕ್ಕೆ 165 ಎಕರೆ ವಿಸ್ತೀರ್ಣದಲ್ಲಿದ್ದ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದೆ. ಹಿಂದಿನ ಎರಡು ವರ್ಷ ಭದ್ರಾದಿಂದ ತಾತ್ಕಾಲಿಕವಾಗಿ ನೀರು ಹರಿಸಿದ್ದು, ಉತ್ತಮ ಮಳೆಯಾಗಿದ್ದರ ಪರಿಣಾಮ ಜಲಾಶಯ ನೂರು ಅಡಿ ದಾಟಿದೆ. ತುಮಕೂರು ಮತ್ತು ಚಿತ್ರದುರ್ಗ ಶಾಖಾ ಕಾಲುವೆಗಳು ಪೂರ್ಣಗೊಂಡಲ್ಲಿ ವಾಣಿವಿಲಾಸಕ್ಕೆ 2 ಟಿಎಂಸಿ ಅಡಿಗಿಂತ ಹೆಚ್ಚು ನೀರು ಸಿಗುವುದಿಲ್ಲ. ಹೀಗಾಗಿ ಮತ್ತೊಮ್ಮೆ ಅಚ್ಚುಕಟ್ಟು ರೈತರು ತೋಟಗಳನ್ನು ಕಳೆದುಕೊಳ್ಳುವ ಭೀತಿ ಕಾಡುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪ್ರಸ್ತುತ ವಾಣಿವಿಲಾಸ ಜಲಾಶಯದ ನೀರನ್ನು ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಕುದಾಪುರದಲ್ಲಿರುವ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಪೂರೈಸಲಾಗುತ್ತಿದೆ. ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ಬಿಡುವ ನೀರು ಹಾಗೂ ಮೇಲಿನ ಎಲ್ಲಾ ಯೋಜನೆಗಳಿಗೆ ವರ್ಷಕ್ಕೆ ಕನಿಷ್ಠ 8.50 ಟಿಎಂಸಿ ಅಡಿ ನೀರು ಬೇಕು. 2008–09ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಾಣಿವಿಲಾಸಕ್ಕೆ ಮೀಸಲಿಟ್ಟಿದ್ದ 5 ಟಿಎಂಸಿ ಅಡಿ ನೀರನ್ನು 2013–14ರಲ್ಲಿ ಕೇವಲ 2 ಟಿಎಂಸಿ ಅಡಿಗೆ ನಿಗದಿ ಮಾಡಿದ್ದು, ಈ ನೀರು ಆವಿಯಾಗಿ ಹೋಗುತ್ತದೆ’ ಎಂದು ರೈತ ಮುಖಂಡರು ನೀರಾವರಿ ಇಲಾಖೆ ಮಾಜಿ ಪ್ರಧಾನ ಕಾರ್ಯದರ್ಶಿ ರಾಜಾರಾಂ ಗಮನಕ್ಕೆ ತಂದರು.

ಎತ್ತಿನಹೊಳೆ ಯೋಜನೆ ಮುಗಿಯುವವರೆಗೆ ಅಲ್ಲಿನ ನೀರನ್ನು ವಾಣಿವಿಲಾಸಕ್ಕೆ ಹರಿಸುವಂತೆ ಸರ್ಕಾರಕ್ಕೆ ಸಲಹೆ ನೀಡಬೇಕು ಎಂದು ಮುಖಂಡರು ಮನವಿ ಮಾಡಿದರು.

‘5 ಟಿಎಂಸಿ ಅಡಿ ಸಾಮರ್ಥ್ಯದ ಬೈರಗೊಂಡ್ಲು ಬದಲು 30 ಟಿಎಂಸಿ ಅಡಿ ಸಾಮರ್ಥ್ಯದ ವಾಣಿವಿಲಾಸ ಜಲಾಶಯಕ್ಕೆ ಎತ್ತಿನಹೊಳೆ ನೀರು ಹರಿಸಿ, ಅಲ್ಲಿಂದ ಚಿಕ್ಕಬಳ್ಳಾಪುರ, ಕೋಲಾರದ ಕಡೆ ನೀರು ಒಯ್ಯಬಹುದಾಗಿದೆ. ಇಲ್ಲವಾದಲ್ಲಿ ಎತ್ತಿನಹೊಳೆ ಯೋಜನೆಯಲ್ಲಿನ ನೀರಿನಲ್ಲಿ ಉಳಿತಾಯ ಮಾಡಿ ವಿ.ವಿ ಸಾಗರ ಜಲಾಶಯಕ್ಕೆ 3 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದಲ್ಲಿ ವಾಣಿವಿಲಾಸ ಜಲಾಶಯ ಉಳಿಯುತ್ತದೆ. ಈ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಮುಖಂಡರು ಕೋರಿದರು.

ರಾಜಾರಾಂ ಮಾತನಾಡಿ, ‘ಮಧ್ಯ ಕರ್ನಾಟಕಕ್ಕೆ ಬೇರೆ ಯಾವುದೇ ಮೂಲದಿಂದ ನೀರು ಕೊಡಲು ಸಾಧ್ಯವಿಲ್ಲ. ಸಿಎಂ ಹಾಗೂ ನೀರಾವರಿ ಸಚಿವರೊಂದಿಗೆ ನೀರಿನ ಮರು ಹಂಚಿಕೆ ಬಗ್ಗೆ ಚರ್ಚೆ ನಡೆಸುತ್ತೇನೆ’ ಎಂದು ಭರವಸೆ ನೀಡಿದರು.

ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ, ಆರನಕಟ್ಟೆ ಶಿವಕುಮಾರ್, ಆಲೂರು ಸಿದ್ದರಾಮಣ್ಣ, ಬಬ್ಬೂರು ಸುರೇಶ್, ಆದಿವಾಲ ಮಲ್ಲಿಕಾರ್ಜುನ್, ಟಿ.ಬಿ. ಗೊಲ್ಲರಹಟ್ಟಿ ಚಿದಾನಂದ್ ಮಸ್ಕಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT